ಸರ್ಕಾರಿ ನೌಕರರ ಒಕ್ಕೂಟದ ಪ್ರತಿಭಟನೆ

ದಾವಣಗೆರೆ, ಜು.18- 18 ತಿಂಗಳ ತುಟ್ಟಿ ಭತ್ಯೆ ಬಿಡುಗಡೆ, ಉಚಿತ ಲಸಿಕೆ, ಎನ್ ಪಿಎಸ್ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಷ್ಟ್ರಮಟ್ಟದ ಪ್ರತಿಭಟನಾ ದಿನಾಚರಣೆ ನಡೆಸಿದ್ದು, ಅಂತೆಯೇ ಒಕ್ಕೂಟದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ನಿನ್ನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಂಘಟನೆಯ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸರ್ಕಾರಿ ನೌಕರರ ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು.

ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿರುವ ಜನವರಿ 2020ರಿಂದ ಜೂನ್ 2021ರವರೆಗಿನ 18 ತಿಂಗಳ ತುಟ್ಟಿಭತ್ಯೆ ಹೆಚ್ಚಳದ ದರವನ್ನು ಬಿಡುಗಡೆಗೊಳಿಸಬೇಕು, ಪಿಎಫ್ ಆರ್ ಡಿಎ-ಎನ್ ಪಿಎಸ್ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಎಲ್ಲಾ ನೌಕರರಿಗೂ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು, 50 ವರ್ಷ ದಾಟಿದ ನೌಕರರಿಗೆ ಕಡ್ಡಾಯ ನಿವೃತ್ತಿಗೊಳಿಸುವ ಕೇಂದ್ರ ಸರ್ಕಾರದ ನೀತಿ ಹಿಂಪಡೆಯಬೇಕು, ರಾಜ್ಯದಲ್ಲಿನ 2.80 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರ್ಕಾರದ ಖಾಲಿ ಹುದ್ದೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ತಾತ್ಕಾಲಿಕ, ಅತಿಥಿ, ಅರೆಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವಿವಿಧ ಕೋರ್ಟುಗಳ ಆದೇಶದಂತೆ ಖಾಯಂ ನೌಕರರಿಗೆ ಸಮಾನವಾದ ವೇತನ ಭತ್ಯೆಗಳನ್ನು ನೀಡಬೇಕು ಮತ್ತು ಅವರನ್ನು ಸರ್ಕಾರಿ ಸೇವೆಯಲ್ಲಿ ನಿಯಮಾನುಸಾರ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಆರ್‌. ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ, ಖಜಾಂಚಿ ಎಲ್. ಗೋವಿಂದರಾಜು, ಕೆ. ರೇವಣಸಿದ್ದಪ್ಪ, ರಂಗೇಶ, ಹರೀಶ, ಸಿದ್ದೇಶ, ಸುಧಾಕರ್‌, ಹನುಮಂತು, ಮಲ್ಲಿಕಾರ್ಜುನ ಮಠದ, ಉಮೇಶ, ಕೊಟ್ರೇಶ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.

error: Content is protected !!