ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ದಾವಣಗೆರೆ, ಫೆ.26- ಪರೀಕ್ಷಾ ಮಾದರಿಗಳ ಫಲಿತಾಂಶ ಬರುವುದರಲ್ಲಿ ವಿಳಂ ಬವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ಫಲಿತಾಂಶ ದೃಷ್ಟಿಯಿಂದ ಜಿಲ್ಲೆಗೊಂದು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲು ಚಿಂತಿಸಿರುವುದಾಗಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.
ಅವರು, ಇಂದು ನಗರಕ್ಕಾಗಮಿಸಿ ಎಸ್‌ಪಿ ಕಚೇರಿಯಲ್ಲಿ ಇನ್‌ಸ್ಪೆಕ್ಟರ್ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಡಿಮೆ ಪ್ರಯೋಗಾಲಯಗಳು ಇರುವ ಕಾರಣ ಪರೀಕ್ಷೆಗೆ ಕಳುಹಿಸಿದ ಸ್ಯಾಂಪಲ್ ಗಳ ಫಲಿತಾಂಶ ಒಂದು, ಎರಡು ವರ್ಷಗಳ ನಂತರ ಬರಲಿದೆ. 15 ದಿವಸ, ಗರಿಷ್ಠ ಮೂರು ತಿಂಗಳಿಗೆ ಫಲಿತಾಂಶ ಬರುವಂತಹ ವ್ಯವಸ್ಥೆಯನ್ನು ಚುರುಕು ಗೊಳಿಸಲು ಸರ್ಕಾರದಿಂದ ಪ್ರಯತ್ನ ನಡೆಸುತ್ತಿದ್ದೇವೆ. ವಿಧಿ-ವಿಧಾನ ಪ್ರಯೋಗಾಲಯಗಳನ್ನು ಹೆಚ್ಚಾಗಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಯಾವುದೇ ರೀತಿಯ ಮರಳು ದಂಧೆ, ಕ್ಲಬ್, ಕಲ್ಲು ಕ್ವಾರಿ, ಅಕ್ರಮ ದಂಧೆ ಮೇಲೆ ನಿಗಾ ಇಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದೇವೆ. ಡ್ರಗ್ಸ್ ವಿಚಾರದಲ್ಲಿ 10 ವರ್ಷದ ಕೆಲಸವನ್ನು ನಮ್ಮ ಪೊಲೀಸರು ಒಂದೇ ವರ್ಷದಲ್ಲಿ ಮಾಡಿದ್ದಾರೆ. ಕಾನ್‌ಸ್ಟೇಬಲ್‌ಗಳಿಂದ ಹಿಡಿದು ಎಸ್‌ಪಿ, ಐಜಿಯ ತನಕ ಕಷ್ಟದಿಂದ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಒನ್ ನೇಷನ್ ಒನ್ ನಂಬರ್ ಪ್ರಧಾನಿ ಆಶಯದಂತೆ ಇಆರ್‌ಎಸ್‌ಎಸ್‌ಗೆ ಚಾಲನೆ ತಂದಿದ್ದು ಅಭಿನಂದನೀಯ. ಈ ತಂತ್ರಜ್ಞಾನ ಬಳಸಿದರೆ ಸಾರ್ವಜನಿಕರಿಗೆ ಸ್ಪಂದನೆ ಹೆಚ್ಚಾಗಿ ಸಿಗುತ್ತದೆ. ಅದು ಸರ್ಕಾರದ ಕಡೆಯಿಂದಲೂ ಸಹಕಾರ ಸಿಗುತ್ತಿದೆ ಎಂದು ಹೇಳಿದರು.
ಕೆಲವು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಈಗಾಗಲೇ ತಿಳಿಸಿದೆ. ಇದಲ್ಲದೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಜಿಲ್ಲೆಯಲ್ಲಿ ಪೊಲೀಸರಿಗೆ ಮನೆಗಳು ಇಲ್ಲ ಎಂಬ ವಿಷಯ ತಿಳಿದಿದ್ದು, ಮುಂದಿನ ತಿಂಗಳಲ್ಲಿ 100 ಕ್ಕಿಂತಲೂ ಹೆಚ್ಚಿನ ಮನೆಗಳನ್ನು ಹಸ್ತಾಂತರಿಸಲಾಗುವುದು. 2025ರ ವೇಳೆಗೆ ಇನ್ನಷ್ಟು ಮನೆಗಳನ್ನು ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು.
ಪೊಲೀಸರ ಬೇಡಿಕೆಗಳು, ತನಿಖೆ, ತುರ್ತು ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವ, ಕೆಲಸ ನಿರ್ವಹಿಸುವ, ಬೀಟ್ ಸಿಸ್ಟಂ ಸುಧಾರಣೆ ಬಗ್ಗೆ ಇಂದು ಚರ್ಚೆಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಒಳ್ಳೆಯ ಕೆಲಸಗಳಾಗಿವೆ. ಒಂದು ವರ್ಷದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಪೂರ್ವ ವಲಯ ಐಜಿಪಿ ಎಸ್. ರವಿ, ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಸೇರಿದಂತೆ ಜಿಲ್ಲೆಯ ಡಿವೈಎಸ್ಪಿ ರವರುಗಳು ಮತ್ತು ಪೊಲೀಸ್ ನಿರೀಕ್ಷಕರು ಇದ್ದರು.