`ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ ಎನ್ನುವ ಉಕ್ತಿಯಂತೆ’ ಈ ಜಗತ್ತನ್ನು ಉದ್ಧರಿಸಲು ಕೋಟಿಗೊಬ್ಬರಂತೆ ಶಿವಯೋಗಿಗಳು ಹುಟ್ಟಿ ಬರುತ್ತಾರೆ.
ಅಜ್ಞಾನದ ಅಂಧಕಾರದಲ್ಲಿ ಮುಳುಗಿದ ಭಕ್ತರನ್ನು ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯಲು ಹಗಲಿರುಳು ತಮ್ಮ ಜೀವನವನ್ನು ಮುಡುಪಾಗಿಟ್ಟು, ಈ ಧರೆಯನ್ನು ಪಾವನಗೊಳಿಸಿದ ದಾರ್ಶನಿಕರನೇಕರಲ್ಲಿ
ದಾವಣಗೆರೆ ಮಹಾನಗರದ ಚೌಕಿಪೇಟೆಯಲ್ಲಿ ಲೀಲಾ ವಿಶ್ರಾಂತಿ ಹೊಂದಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರರು ಒಬ್ಬರು.
`ಕಂದನ ಕೊಡು ಶಿವನೆ, ಬಂಧನ ಬಿಡಲಾರೆ ಹಂಗಿನ ಕೂಳ ತಿನಲಾರೆ, ಬಂಜೆಂಬ ಶಬ್ದ ಹೊರಲಾರೆ’ ಎಂದು ಹಿರೇಮಠದ ಶರಣ ಬಸವಲಿಂಗಯ್ಯ ಮತ್ತು ಶರಣೆ ಪಾರ್ವತಮ್ಮ ದಂಪತಿ ತಮ್ಮ ಗುರುಗಳಾದ ಹೆಬ್ಬಾಳದ ಶ್ರೀ ರುದ್ರೇಶ್ವರ ಸ್ವಾಮಿಗಳವರನ್ನು ಭಕ್ತಿಯಿಂದ ಬೇಡಿಕೊಂಡಾಗ ಅಂದು ರಾತ್ರಿ ದಂಪತಿಗೆ ಸ್ವಪ್ನದಲ್ಲಿ ಓರ್ವ ಜಂಗಮ ಮೂರ್ತಿ ಪ್ರತ್ಯಕ್ಷನಾಗಿ, ಬರುವ ಸೋಮವಾರ ಉಳವಿ ಶ್ರೀ ಚನ್ನಬಸವಣ್ಣನವರ ದರ್ಶನ ಮಾಡಿ, ಅಲ್ಲಿ ಶರಣ ರೇಚಿತಂದೆಯವರನ್ನು ಭೇಟಿ ಮಾಡಿರೆಂದು ಹೇಳಿದರು. ತಕ್ಷಣವೇ ದಂಪತಿ ಉಳವಿಗೆ ಪ್ರಯಾಣ ಬೆಳೆಸಿ ಶ್ರೀ ಚನ್ನಬಸವೇಶ್ವರರ ದರ್ಶನ ಪಡೆದಾಗ ನಿಮ್ಮಿಂದ ಒಬ್ಬ ಕಾರಣಿಕ ಶಿಶು ಉದಯವಾಗುವುದು ಎಂದು ಆಶೀರ್ವದಿಸುತ್ತಾರೆ.
ಅಂತೆಯೇ ಮಹಾತಾಯಿ ಗರ್ಭದಲ್ಲಿ ಗಂಡು ಕೂಸಿನ ಜನನವಾದಾಗ ಊರಲ್ಲಿನ ದೇವಸ್ಥಾನದ ಗಂಟೆ-ಜಾಗಟೆಗಳು ಸುನಾದವನ್ನು ಬೀರುತ್ತವೆ. ಮಗುವಿಗೆ ನಾಮಕರಣ ಮಾಡುವಾಗ ಮಗುವಿನ ಬಲಗಿವಿಯ ಮೇಲಿರುವ ಬಕ್ಕೆ, ತಲೆಯ ಮೇಲಿರು ವಂತಹ ಗಂಟನ್ನು ನೋಡಿ `ಬಕ್ಕೇಶ ಎಂದು ನಾಮಕರಣ ಮಾಡುತ್ತಾರೆ. `ಹೊಳೆವ ಬಾಲ ಸೂರ್ಯನಂತೆ’ ಬಕ್ಕೇಶನ ಬಾಲಲೀಲೆ ಗಳು, ಪವಾಡಗಳು, ಗುರುಗಳು ಹೇಳಿದಂತೆ ಆಚಾರದ ಖಣಿಯಾಗಿ ಬೆಳೆಯುತ್ತಿರುವ ಬಕ್ಕೇಶನಿಗೆ ಶಿವದೀಕ್ಷೆ, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಮಹತ್ವವನ್ನು ತಿಳಿಸಿ ಹೇಳುತ್ತಾರೆ.
ಬಾಲಕನು ದನಗಳನ್ನು ಕಾಯುತ್ತಾ, ಲೀಲೆಗಳನ್ನು ಮಾಡುತ್ತಾ, ಬೆಳೆಯುತ್ತಾ ಲಿಂಗ ನಿಷ್ಠೆಯಲ್ಲಿ ತಲ್ಲೀನನಾಗುತ್ತಾನೆ. ಬಕ್ಕೇಶನು 12 ವರ್ಷಗಳಾಗಲು ತನ್ನ ಹೆತ್ತವರ ಪಾದಕ್ಕೆರಗಿ, ನನ್ನ ಇಷ್ಟ ಲಿಂಗಯ್ಯನ ಅಪ್ಪಣೆಯಂತೆ ದೇಶ ಸಂಚಾರಕ್ಕೆ ಹೊರಡುತ್ತಾನೆ. ಅಲ್ಲಿಂದ ಹೇಮಕೂಟ, ಸೊಂಡೂರು, ಕೊಟ್ಟೂರು, ಉಜ್ಜಯಿನಿ ಮಾರ್ಗದಿಂದ ಚಿತ್ರದುರ್ಗಕ್ಕೆ ಬರುತ್ತಾರೆ. ಅಲ್ಲಿ ಭಕ್ತರ ಉದ್ಧಾರವನ್ನು ಮಾಡುತ್ತಾ, ಗೋಕರ್ಣ, ಕಂಚಿ, ಕಾಳಹಸ್ತಿ, ಶ್ರೀಶೈಲ, ಕಾಶಿಗೆ ದಯಮಾಡಿಸುತ್ತಾರೆ. ಗಂಗಾನದಿಯಲ್ಲಿ ಸ್ನಾನ ಮಾಡಿ, ಪೂಜೆ ನೆರವೇರಿಸಿ ವಿಶ್ವನಾಥನ ಸಮ್ಮುಖದಲ್ಲಿ ಶಿವತತ್ವ ಗೀತೆಗಳನ್ನು ಹಾಡುತ್ತಾರೆ. ಒಂದು ದಿನ ಬಿಕನೀರ್ ಸಂಸ್ಥಾನದ ಮಹಾರಾಜರು ಬಕ್ಕೇಶ್ವರನಿಗೂ ಕಾಷಾಯಾಂಬರಗಳನ್ನು ಕೊಟ್ಟಾಗ ಬಕ್ಕೇಶ್ವರರು ಮರಳಿ ಅವುಗಳನ್ನು ಬೇರೆ ಸಾಧುವಿಗೆ ಕೊಟ್ಟರು, ಅವರು ಮುಂದಿನ ಸಾಧುವಿಗೆ ಕೊಟ್ಟರು, ಹೀಗೆ ಕೊನೆಯವರು ನದಿಗೆ ಹಾಕುತ್ತಾರೆ. ಇದನ್ನು ನೋಡಿದ ಮಹಾರಾಜರು ಕೋಪಿಷ್ಟರಾಗಿ ಮೂರ್ಖ ಸಾಧುವೇ ಅವುಗಳನ್ನೇಕೆ ನದಿಯಲ್ಲಿ ಹಾಕಿದೆ ಎಂದಾಗ, ಆ ಸಾಧುವು ಗಂಗಾನದಿಯಲ್ಲಿ ಗಂಗಾಧರನಾದ ಶಿವನು ನನಗೆ ದರ್ಶನವನ್ನು ನೀಡುತ್ತಿದ್ದರು. ಅದಕ್ಕೆ ಅವನ್ನು ನದಿಗೆ ಹಾಕಿದೆ ಎಂದಾಗ, ನೃಪನು ನದಿಗೆ ನಮಸ್ಕರಿಸಿ ತಿರುಗಿ ನೋಡಿದಾಗ ಆ ವಸ್ತ್ರಗಳು ಬಕ್ಕೇಶ್ವರರ ಮೈ ಮೇಲಿದ್ದುದನ್ನು ಕಂಡು, ಗಂಗಾಧರನೇ ಬಕ್ಕೇಶ್ವರ, ಶ್ರೀಗುರು ಬಕ್ಕೇಶ್ವರರು ಮುಕ್ಕಣ್ಣನ ಅವತಾರ ಎಂದು ಅವರ ಕಾಲಿಗೆರಗುತ್ತಾರೆ.
ಒಂದು ದಿನ ರೇಚಿತಂದೆ ಹೇಳಿದಂತೆ ಅರಣ್ಯಮಾರ್ಗವಾಗಿ ತುಂಗಭದ್ರಾ ನದಿ ತೀರದ ಎಡದಂಡೆಯಲ್ಲಿರುವ ಐರಣಿ ಕ್ಷೇತ್ರದಲ್ಲಿ ನೆಲೆಸುತ್ತಾರೆ. ಬಕ್ಕೇಶ್ವರರ ದರ್ಶನಕ್ಕೆಂದು ಸಾಧು-ಸತ್ಪುರುಷರು, ವಿರಕ್ತರು, ಭಕ್ತರು ಬರುತ್ತಿದ್ದು, ಐರಣಿ ಕ್ಷೇತ್ರವು ಸುಕ್ಷೇತ್ರವಾಯಿತು. ಅಲ್ಲಿಂದ ಹರಿಹರ ಕ್ಷೇತ್ರಕ್ಕೆ ದಯಮಾಡಿಸಿ ಹೊಳೆಯ ದಡದಲ್ಲಿರುವ ಹಳೆಯ ಅರಳಿ ಮರದಡಿಯಲ್ಲಿ ವಾಸ್ತವ್ಯ ಹೂಡಿ, ಹರಿಹರೇಶ್ವರರ ಸನ್ನಿಧಿಯಲ್ಲಿ ಭಜನೆ ಹಾಗೂ ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದರು.
ಮಕ್ಕಳಿಲ್ಲದ ಸತ್ಯಪ್ಪ ಶೆಟ್ಟಿಯ ವಂಶ ಉದ್ಧಾರವಾಗಲಿ ಎಂದು ಆಶೀರ್ವಾದ ನೀಡಿದ ಬಕ್ಕಪ್ಪನಿಗೆ ಮಠ ಕಟ್ಟಲು ಸಿದ್ದರಾದಾಗ ಚಿನ್ಮೂ ಲಾದ್ರಿಯ ಮಹಾಸನ್ನಿಧಿಯವರು ದಯಮಾಡಿಸಿ ಆ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿಸಿದ್ದಾರೆ, ಅಲ್ಲಿಯೇ ನಮ್ಮ ಪರಜಂಗಮಾವಸ್ಥೆಯಾಗಲೆಂದು ಅಪ್ಪಣೆ ಕೊಟ್ಟರು.
ದಾವಣಗೆರೆಗೆ ಬಂದವರೇ ಒಂದು ಕೊಳಚೆ ಪ್ರದೇಶವನ್ನು ತೋರಿಸಿದಾಗ ಶೆಟ್ಟರು ಅದನ್ನು ಸ್ವಚ್ಛಮಾಡಿಸಿ, ನಗರದೇವತೆಯಾದ ಶ್ರೀ ದುರ್ಗಾದೇವಿಯ ದರ್ಶನ ಪಡೆಯುತ್ತಾರೆ. ತಕ್ಷಣವೇ ಗುಡಿಯ ಗಂಟೆ-ಜಾಗಟೆ, ನಗಾರಿ, ಶಂಖ ಇತ್ಯಾದಿ ವಾದ್ಯಗಳು ಸುನಾದವನ್ನು ಬೀರಿ ಮಹಾತ್ಮರಿಗೆ ಸ್ವಾಗತವನ್ನು ಕೋರುತ್ತವೆ. ದಾವಣಗೆರೆಯ ಹಿರಿಯರೆಲ್ಲರೂ ತಮ್ಮ ಮಠ ಇಲ್ಲಿಯೇ ಆಗಬೇಕೆಂದು ಭಿನ್ನವಿಸಿಕೊಳ್ಳುತ್ತಾರೆ. ಆ ಕೊಳಚೆ ಪ್ರದೇಶದಲ್ಲಿಯೇ ಮಠವನ್ನು ಕಟ್ಟಲಿಕ್ಕೆ ಪ್ರಾರಂಭಿಸುತ್ತಾರೆ.
ದಿನ ದಿನಕ್ಕೆ ದಾವಣಗೆರೆಯು ಪ್ರಸಿದ್ಧವಾಗಿ, ಬಂದ ರೋಗಿಗಳು ಅವರ ದರ್ಶನ ಪಡೆದು ಗುಣಮಖರಾಗುತ್ತಾರೆ. ಇವರ ದರ್ಶನ ಮಾತ್ರದಿಂದಲೇ ದುಶ್ಚಟಗಳನ್ನು ಬಿಟ್ಟು ಸಜ್ಜನರಾಗುತ್ತಾರೆ. ಇವರ ಕೀರ್ತಿ ದಿನೇ ದಿನೇ ಬೆಳೆದಂತೆ ಶಿವಾನುಭವ ಗೋಷ್ಠಿಯಲ್ಲಿ ಹೆಬ್ಬಾಳಿನ ಶ್ರೀ ರುದ್ರೇಶ್ವರ ಮಹಾಸ್ವಾಮಿಗಳು, ಚಿತ್ರದುರ್ಗದ ಶ್ರೀ ಮನ್ನಿರಂಜನ ಜಗದ್ಗುರು, ರಾಚವಟ್ಟಿ ಮುರುಘರಾಜೇಂದ್ರ ಮಹಾಸ್ವಾಮಿಗಳವರು ದಯಮಾಡಿಸಿ ಭಕ್ತರಿಗೆ ಲಿಂಗಾಂಗ ಸಾಮರಸ್ಯದ ಸುಜ್ಞಾನವನ್ನು ಬೋಧಿಸಿ, ದಾವಣಗೆರೆಯು ಜ್ಞಾನದ ಕೇಂದ್ರವೆಂಬ ಹೆಸರನ್ನು ಪಡೆದು, ಬಕ್ಕೇಶ್ವರರ ಕೀರ್ತಿ ದಶ ದಿಕ್ಕುಗಳಲ್ಲಿ ಹರಡಿತು.
ಆ ಕಾಲದಲ್ಲಿ ಮೈಸೂರು ಪ್ರಾಂತ್ಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರವರು ಧರ್ಮದಿಂದ ಆಳುತ್ತಿದ್ದರು, ಕಾರಣಾಂತರದಿಂದ ಬ್ರಿಟೀಷರು ಈ ಪ್ರಾಂತ್ಯವನ್ನು ಕಸಿದುಕೊಂಡು ಮನೆಗಂದಾಯವನ್ನು ಹೆಚ್ಚಿಸಿದರು. ಇದನ್ನು ಮಹಾರಾಜರ ಗಮನಕ್ಕೆ ತರಲು ಮೈಸೂರನ್ನು ತಲುಪಿದ ದಾವಣಗೆರೆ ಜನರಿಗೆ ಮಹಾರಾಜರ ದರ್ಶನ ಭಾಗ್ಯ ಸಿಗಲಿಲ್ಲ, ಆಗ ಕುಟುಂಬ ವರ್ಗದವರು ಬಕ್ಕೇಶ್ವರರ ಪಾದಕ್ಕೆರಗಿ ಅಳಲನ್ನು ತೋಡಿಕೊಂಡರು. ಆಗ ಶ್ರೀಗಳವರು ಅಂಜಬೇಡಿ, ನಮ್ಮ ದುರ್ಗಿಯನ್ನು ಕಳಿಸಿ, ತಮ್ಮ ಕೆಲಸ ನಿರ್ವಹಿಸಿಕೊಡುವುದಾಗಿ ಸಾಂತ್ವನ ಹೇಳುತ್ತಾರೆ. ಕೂಡಲೇ ಬಕ್ಕೇಶ್ವರರು ಮಠದಲ್ಲಿ ಲಿಂಗಪೂಜೆಗೆ ಕುಳಿತು ಲಿಂಗ ಲೀಲೆಯ ದೃಷ್ಟಿಯಿಂದ ಮುಂದೆ ನಿಂತಿದ್ದ ದೇವಿಯನ್ನು ಕಂಡು ದುಗ್ಗಮ್ಮ ನೀನು ಈ ಊರಿನ ಗ್ರಾಮ ದೇವತೆ, ನಿನ್ನ ಮಕ್ಕಳನ್ನು ಕಾಪಾಡುವ ಶಕ್ತಿ ನಿನ್ನಲ್ಲಿದೆ ಎಂದು ಅಪ್ಪಣೆ ಮಾಡಿದ ಪ್ರಕಾರ ಅಂದು ರಾತ್ರಿ ಮಹಾರಾಜರ ಕನಸಿನಲ್ಲಿ ಶ್ರೀ ಚಾಮುಂಡೇಶ್ವರಿ ಪ್ರತ್ಯಕ್ಷಳಾಗಿ, ಎಲೇ ಸತ್ಯವಂತನಾದ ದೊರೆಯೇ ನಾನು ನಿನ್ನ ಮನೆ ದೇವತೆಯಾದ ಚಾಮುಂಡೇಶ್ವರಿ, ದಾವಣಗೆರೆಯಲ್ಲಿ ದುಗ್ಗಮ್ಮನೆಂಬ ಹೆಸರಿನಿಂದ ಗ್ರಾಮದೇವತೆಯಾಗಿರುವೆ, ನೀನು ನಾಳೆಯೇ ದಾವಣಗೆರೆ ಮಹಾಜನತೆಯ ಕೆಲಸವನ್ನು ನೆರವೇರಿಸಿಕೊಡತಕ್ಕದ್ದು ಎಂದು ಅಪ್ಪಣೆ ಕೊಟ್ಟು ಅದೃಶ್ಯಳಾಗುತ್ತಾಳೆ. ಆಗ ಮಹಾರಾಜರು ದೇವಿ ಹೇಳಿದಂತೆ ದಾವಣಗೆರೆ ಜನತೆಯ ಸಂಕಷ್ಟವನ್ನು ಪರಿಹರಿಸುತ್ತಾರೆ.
ಮಾಯಕೊಂಡದಲ್ಲಿ ಚಿತ್ರದುರ್ಗದ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ವ್ಯಾಸನತೊಳು ಮತ್ತು ನಂದೀ ಧ್ವಜವನ್ನು ಬಕ್ಕೇಶ್ವರ ಶ್ರೀಗಳು ಮತ್ತು ಹೆಬ್ಬಾಳ ಶ್ರೀಗಳು ಸ್ವತಃ ಹಿಡಿದು ಕೊಂಡು ಹೊರಟಿದ್ದರು, ಅದನ್ನು ತಡೆಯಲು ಸರ್ಕಾರದಿಂದ ಧ್ವಜಗಳನ್ನು ಹಿಡಿಯಬಾರದು ಎಂಬ ಆದೇಶವನ್ನು ತಂದವರು ಪ್ರತಿಭಟಿಸಲು ಮುನ್ನುಗ್ಗಿದಾಗ ಕಣ್ಣುಗಳು ಕಾಣದಾದವು, ಮೆರವ ಣಿಗೆ ಮುಗಿದ ನಂತರ, ಶ್ರೀ ಗುರುಗಳ ಬಳಿ ಬಂದು ಕ್ಷಮೆ ಯಾಚಿಸಿದಾಗ ಅವರುಗಳ ದೃಷ್ಟಿ ಮರಳಿತು.
ಈ ಮೆರವಣಿಗೆಯನ್ನು ಪೂರೈಸಿ, ದಾವಣಗೆರೆಯ ಎಲ್ಲಾ ಭಕ್ತರನ್ನು ಶ್ರೀಮಠಕ್ಕೆ ಬರಮಾಡಿಕೊಂಡು ತಮ್ಮ ಅವತಾರವನ್ನು ಮುಗಿಸಿ, ತನ್ನ ಬಳಿಗೆ ಬರಬೇಕೆಂದು ಆಜ್ಞಾಪಿಸಿರುವ ಆ ಪರಶಿವನ ಅಪ್ಪಣೆಯನ್ನು ತಿಳಿಸಿದಾಗ, ಭಕ್ತಾದಿಗಳು ಗರಬಡಿದವರಂತೆ ನಿಂತರು, ಇನ್ನೂ ಕೆಲಕಾಲ ಇರುವಂತೆ ವಿನಂತಿಸಿದರು, ಆಗ ಶ್ರೀಗಳು ಶಿವನ ಅಪ್ಪಣೆಯನ್ನು ಯಾರೂ ಮೀರಬಾರದು ಎಂದು ಸಾಂತ್ವನ ಹೇಳಿದರು.
ಶ್ರೀಗಳ ಗದ್ದುಗೆಯನ್ನು ಈ ಗ್ರಾಮದ ಆಗ್ನೇಯ ದಿಕ್ಕಿನಲ್ಲಿರುವ ಸುಂದರವಾದ ತೋಟದಲ್ಲಿಯೇ ನೆಲೆಗೊಳಿಸಿ ಎಂದಾಗ ಅದಕ್ಕೆ ಕೆಲ ಭಕ್ತರು `ಬುದ್ದಿ.. ತಾವು ಹೇಳಿದ ಜಾಗ ಸರಿಯಾಗಿದೆ, ಆದರೆ ಊರು ಬಿಟ್ಟು ದೂರವಿರುವುದರಿಂದ ದರ್ಶನಕ್ಕೆ ಬರಲು ತೊಂದರೆಯಾಗುತ್ತದೆ’ ಎಂದು ನಿವೇದಿಸಿಕೊಂಡಾಗ ಬಕ್ಕೇಶ್ವರರು ಮುಂದಿನ ಶತಮಾನಗಳಲ್ಲಿ ಅದು ಬೆಳೆದು ಚೌಕಿಪೇಟೆಯೆಂಬ ಹೆಸರಿನಿಂದ ಪ್ರಸಿದ್ಧವಾಗಿ ಊರಿನ ಮಧ್ಯಭಾಗವಾಗುವುದು ಎಂದು ತಿಳಿಸಿ ಲಿಂಗ ಲೀಲೆಯಲ್ಲಿ ಲೀನವಾಗಿ ಅನೇಕ ಮಹಾತ್ಮರನ್ನು ಬಿನ್ನವಿಸಿಕೊಂಡು ಬರಲು ತಿಳಿಸಿ, ಚಿತ್ರದುರ್ಗದ ಮಹಾಸ್ವಾಮಿಗಳವರಿಗೂ ಬಿನ್ನಹ ಮಾಡುತ್ತಾರೆ.
ಅಂತೆಯೇ ಲಿಂಗಲೀಲೆಯಲ್ಲಿ ಕುಳಿತು ಚೈತ್ರಶುದ್ಧ ಪಂಚಮಿಯ ದಿನ ಸೋಮವಾರ ಅನುಭವ ಗೋಷ್ಠಿಯನ್ನು ಪೂರೈಸಿ ಮಹಾಲಿಂಗವನ್ನು ನೋಡುತ್ತಾ ಲಿಂಗದಲ್ಲಿ ಲೀನವಾಗಿ `ಹರ ಹರ ಮಹಾದೇವಾ, ಶಂಭೋ ಬಸವೇಶ’ ಎನ್ನುತ್ತಾ ಮಹಾಲಿಂಗದಲ್ಲಿ ಬೆರೆತರು. ಆಗ ಅಲ್ಲಿದ್ದ ಭಕ್ತರೆಲ್ಲಾ ಜಯಘೋಷ ಮಾಡುತ್ತಾ ದಾವಣಗೆರೆಯಾದ್ಯಂತ ಭಜನೆ, ವಾದ್ಯ, ವೈಭವಗಳಿಂದ ಮೆರವಣಿಗೆ ಮಾಡಿ ಅವರು ಸೂಚಿಸಿದ ಸ್ಥಾನದಲ್ಲಿ ಕ್ರಿಯಾಸಮಾಧಿಯನ್ನು ನೆರವೇರಿಸುತ್ತಾರೆ.
ಅಂದಿನಿಂದ ಇಂದಿನವರೆಗೂ ಬಕ್ಕೇಶ್ವರರ ಗದ್ದುಗೆಗೆ ತ್ರಿಕಾಲ ಪೂಜೆ, ರುದ್ರಾಭಿಷೇಕ, ಕಾರ್ತಿಕೋತ್ಸವ, ರಥೋತ್ಸವ ಇತ್ಯಾದಿಗಳು ಬಹುವಿಜೃಂಭಣೆಯಿಂದ ನೆರವೇರುತ್ತಾ, ದಾನದ ನಾಡಾಗಿ ಬೆಳೆಯುತ್ತಿದೆ.
ಎಂ.ಕೆ. ಬಕ್ಕಪ್ಪ, ದಾವಣಗೆರೆ.
ಸಹ ಕಾರ್ಯದರ್ಶಿ,
ಶ್ರೀ ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ.