ಕಲ್ಯಾಣ ಮಂಟಪಗಳಿಗೆ ದಂಡ

ಕೋವಿಡ್ ಹಿನ್ನೆಲೆಯಲ್ಲಿ ಆಯುಕ್ತರ ದಿಢೀರ್ ಭೇಟಿ

ದಾವಣಗೆರೆ, ಏ.18- ಕೋವಿಡ್ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ತಹಸೀಲ್ದಾರ್ ಗಿರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ತಂಡ ನಗರದಲ್ಲಿನ ಕಲ್ಯಾಣ ಮಂಟಪಗಳಿಗೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಕ್ಕೇಶ್ವರ ಕಲ್ಯಾಣ ಮಂಟಪ, ಬಾಪೂಜಿ ಬ್ಯಾಂಕ್ ಸಮುದಾಯ ಭವನ, ಆರ್.ಹೆಚ್.ಕಲ್ಯಾಣ ಮಂಟಪ, ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವರ-ವಧುವಿನ ಕಡೆಯವರಿಗೆ ದಂಡ: ಕೋವಿಡ್ ನಿಯಮಗಳನ್ನು ಪಾಲಿಸದ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಅಡುಗೆಯವರು ಸೇರಿದಂತೆ ಸಿಬ್ಬಂದಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದ ಕಾರಣ ಕಲ್ಯಾಣ ಮಂಟಪದ ಮಾಲೀಕರಿಗೆ 10 ಸಾವಿರ ದಂಡ, ಬಾಪೂಜಿ ಸಮುದಾಯ ಭವನದಲ್ಲಿ 100ಕ್ಕಿಂತ ಹೆಚ್ಚು ಜನ ಜಮಾಯಿಸಿದ್ದರ ಜೊತೆಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಂಡು ಬರಲಿಲ್ಲ. ಕಾರಣ ವರ ಮತ್ತು ವಧುವಿನ ಕಡೆಯವರಿಗೆ ತಲಾ 10 ಸಾವಿರ ದಂಡ ವಿಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾಹಿತಿ ನೀಡಿದ್ದಾರೆ.

ಎಲ್ಲಾ ಕಲ್ಯಾಣ ಮಂಟಪಗಳು ಕೋವಿಡ್ ನಿಯಮ ಪಾಲಿಸಬೇಕೆಂದು ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ನಗರ ಪಾಲಿಕೆಯಿಂದ ಪ್ರತ್ಯೇಕವಾಗಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದ್ದಜ್ಜಿ ತಿಳಿಸಿದ್ದಾರೆ.

error: Content is protected !!