ಪ್ರಸ್ತುತ ಖಿನ್ನತೆಗೊಳ್ಳುತ್ತಿರುವ ಯುವ ಸಮೂಹ

ಬೆಂಗಳೂರು ನಿಮ್ಹಾನ್ಸ್ ಕ್ಷೇತ್ರ ಸಂಪರ್ಕ ಅಧಿಕಾರಿ ಸಲೀಂ

ದಾವಣಗೆರೆ, ಏ. 18- ಇಂದಿನ ದಿನಮಾನಗಳಲ್ಲಿ ಯುವ ಸಮುದಾಯ ಖಿನ್ನತೆಗೆ ಒಳಗಾಗುತ್ತಿದ್ದು, ಆತ್ಮಹತ್ಯೆಯಂತಹ ಮಟ್ಟಕ್ಕೆ ಬಂದು ನಿಲ್ಲುತ್ತಿದ್ದಾರೆ. ಇಂತಹ ಸಂದರ್ಭಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಆಧುನಿಕ ಜೀವನ ಶೈಲಿಯಿಂದ ಯುವ ಸಮುದಾಯ ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದೆ ಎಂದು ಬೆಂಗಳೂರಿನ ನಿಮ್ಹಾನ್ಸ್ ಕ್ಷೇತ್ರ ಸಂಪರ್ಕ ಅಧಿಕಾರಿ ಸಲೀಂ ತಿಳಿಸಿದರು. 

ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿಮ್ಹಾನ್ಸ್, ಬೆಂಗಳೂರು, ಯುವ ಸ್ಪಂದನ ದಾವಣಗೆರೆ ಇವರ ಸಹಯೋಗದೊಂದಿಗೆ ನಗರದ ಡಾ. ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ `ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಯುವ ಜನತೆ ದುಶ್ಚಟಗಳಿಗೆ ಮಾರುಹೋಗಿ ಯೌವ್ವನವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಸರಿಯಾದ ಜೀವನದ ಮಾರ್ಗದರ್ಶನ ಮಾಡಲು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಯುವ ಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಜೊತೆಗೂಡಿ ನಿಮ್ಹಾನ್ಸ್ `ಯುವ ಸ್ಪಂದನ ಕೇಂದ್ರ’ ತೆರೆದಿದೆ. ಯುವಕ-ಯುವತಿಯರು ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆ ಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ ಎಂದು ಯುವ ಜನತೆಗೆ ಮನವಿ ಮಾಡಿದರು.

ಯುವ ಪರಿವರ್ತಕ ಷಣ್ಮುಖಪ್ಪ ಮಾತನಾಡಿ ದರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಸೈಯದ್ ಮುಜೀಬುಲ್ಲಾ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚಕರಾದ ಎಸ್.ಬಿ. ಶಿಲ್ಪಾ ಯುವ ಪರಿವರ್ತಕರಾದ ನೇತ್ರಾವತಿ, ಪ್ರೌಢಶಾಲಾ ಸಹಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ಸಲ್ಮಾ ಬೇಗಂ ವಂದಿಸಿದರು.

error: Content is protected !!