ಹೆಣ್ಣೊಂದು ಕಲಿತರೆ ಶಾಲೆಯೊಂದು ತರೆದಂತೆ ಎಂಬುದನ್ನು ಅಕ್ಷರಶಃ ಆಚರಣೆಗೆ ತಂದವರು ವೀರಭದ್ರಪ್ಪ ಎಂ. ಚಿಗಟೇರಿ.
– ಎಂ.ಕೆ. ಬಕ್ಕಪ್ಪ, ಸಹ ಕಾರ್ಯದರ್ಶಿ, ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ
ದಾವಣಗೆರೆ, ಫೆ.14- ಶ್ರೀ ವೀರಭದ್ರಪ್ಪ ಎಂ. ಚಿಗಟೇರಿಯವರ 31 ನೇ ಸ್ಮರಣೋತ್ಸವ ಹಾಗೂ ಲಿಂ. ಶ್ರೀಮತಿ ವೀರಮ್ಮ, ಶಿವಪ್ಪ ಕುಬುಸದ ಸ್ಮಾರಕ ವಚನಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಶ್ರೀ ವೀರಭದ್ರಪ್ಪ ಎಂ. ಚಿಗಟೇರಿ ವಿದ್ಯಾಭವನ (ಶ್ರೀ ಮುರುಘರಾಜೇಂದ್ರ ಪ್ರೌಢಶಾಲೆ) ಇಂದು ನಡೆಯಿತು.
ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಸವರಾಜಪ್ಪ ಬೆಳಗಾವಿ ಅವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಂ. ಕೆ. ಬಕ್ಕಪ್ಪ ಅವರು ಸಾಂದರ್ಭಿಕವಾಗಿ ಮಾತನಾಡಿ, 1962 ರಲ್ಲಿ ದಾವಣಗೆರೆಯ ಹಳೇ ನಗರ ಪ್ರದೇಶದಲ್ಲಿ ಮಹಿಳೆಯರು ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಹಳಿ ಆಚೆ ಇದ್ದ ಸೀತಮ್ಮ ಬಾಲಿಕೆಯರ ಪ್ರೌಢಶಾಲೆಗೆ ಹೋಗಬೇಕಿತ್ತು. ಅನೇಕ ಪೋಷಕರು 7ನೆ ತರಗತಿಗೇ ತಮ್ಮ ಹೆಣ್ಣುಮಕ್ಕಳ ಶಿಕ್ಷಣ ವನ್ನು ಮೊಟಕುಗೊಳಿಸುತ್ತಿದುದನ್ನು ವೀರಭದ್ರಪ್ಪ ಎಂ. ಚಿಗಟೇರಿ ಅವರು ಮನಗೊಂಡು, ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಯನ್ನು ಪ್ರಾರಂಭಿಸುವುದರ ಮುಖಾಂ ತರ, ಹೆಣ್ಣೊಂದು ಕಲಿತರೆ ಶಾಲೆಯೊಂದು ತರೆದಂತೆ ಎಂಬುದನ್ನು ಆಚರಣೆಗೆ ತಂದರು ಎಂದು ಹೇಳಿದರು.
ಅದೇ ವರ್ಷ ಬಾಲಕರಿಗಾಗಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ ತೆರೆದು, ವಿದ್ಯಾಸಂಸ್ಥೆಗೆ 1962 ರಲ್ಲಿ ಚೀನಾ ಯುದ್ಧ ನಡೆದಾಗ ಚಿತ್ರದುರ್ಗ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರು ರಾಷ್ಟ್ರಕ್ಕೆ ಮಠದ ಖಜಾನೆಯಲ್ಲಿ ಇದ್ದ ಬಂಗಾರದ ಆವುಗೆ, ಕಿರೀಟ, ಮುದ್ರೆಯುಂಗುರ ಹಾಗೂ ಇಡೀ ಬಂಗಾರವನ್ನೇ ಅರ್ಪಿ ಸಿದ್ದ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ ವಿದ್ಯಾಸಂಸ್ಥೆ ಎಂದು ನಾಮಕರಣ ಮಾಡಿದರು ಎಂದು ಬಕ್ಕಪ್ಪ ತಿಳಿಸಿದರು.
ಅತೀ ಕಡಿಮೆ ಶುಲ್ಕ ಪಡೆದು, ಎರಡೂ ಶಾಲೆಗಳು ಅತ್ಯುತ್ತಮ ಫಲಿತಾಂಶ ನೀಡುತ್ತಿವೆ. ಈಗ ಈ ಸಂಸ್ಥೆಯ ಆಶ್ರಯದಲ್ಲಿ 9 ಶಾಲೆಗಳು ಸುವ್ಯವಸ್ಥಿತವಾಗಿ ನಡೆಯುತ್ತಿವೆ. ಇಂತಹ ವಿದ್ಯಾಪೋಷಕರು ಲಿಂಗೈಕ್ಯರಾಗಿ ಇಂದಿಗೆ 31 ವರ್ಷಗಳು ತುಂಬಿವೆ. ಅವರ ಜೊತೆ ಕೈಜೋಡಿಸಿದ್ದ ಎಂ. ಕೆ. ಶಿವಪ್ಪನವರು ಮಕ್ಕಳಲ್ಲಿ ವಚನ ಸಾಹಿತ್ಯ ಕಲಿಸಿದರೆ ಮುಂದೆ ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವ ಉದ್ಧೇಶದಿಂದ ವಚನ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದರು ಎಂದು ಮಾರ್ಮಿಕವಾಗಿ ನುಡಿದರು.
ಎಂ. ಕೆ. ಶಿವಯೋಗಪ್ಪ, ಎಂ. ಕೆ. ನಾಗರಾಜ್, ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಕೆ. ಬಿ. ಶಾಂತಕುಮಾರಿ ಹಾಗೂ ಶ್ರೀಮತಿ ಎಸ್. ಎಂ. ಶೈಲಜಾ, ಎಸ್. ನಾಗರಾಜ್, ಶ್ರೀಮತಿ ಎಂ. ಎಸ್. ವೀರಮ್ಮ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಾಂತಯ್ಯ ಪರಡಿಮಠ್ ನಿರೂಪಿಸಿದರು. ಜಿ. ಎಂ. ಪ್ರಭುದೇವ್ ವಂದಿಸಿದರು.