ಜಗಳೂರು, ಫೆ.11- ಸ್ಥಳೀಯ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ 2021-22 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯು ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿತು.
ಪಟ್ಟಣ ಪಂಚಾಯ್ತಿಯ ಈ ಸಾಲಿನ ಆಯ-ವ್ಯಯ ತಯಾರಿಸಲು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ನೀಡುವಂತೆ ತಿಪ್ಪೇಸ್ವಾಮಿ ಮನವಿ ಮಾಡಿಕೊಂಡರು.
ಪೂರ್ವಭಾವಿ ಸಭೆಯಲ್ಲಿ ಸ್ವೀಕರಿಸಿದ ಲಿಖಿತ ಹಾಗೂ ಮೌಖಿಕ ಸಲಹೆಗಳಿಂದ ಸಂಪನ್ಮೂಲ ಕ್ರೋಢೀಕರಣಕ್ಕೆ ಪಟ್ಟಣದ ವಾರ್ಡ್ಗಳಲ್ಲಿ ಬೀದಿದೀಪ, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ಪೂರಕವಾಗಿರುವ ಸೂಕ್ತ ಬಜೆಟ್ ಮಂಡನೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹಿರಿಯ ನಾಗರಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಪಾರ್ಕ್ಗಳ ಅಭಿವೃದ್ಧಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೇಶನ, ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ.ಪಂ. ಉಪಾಧ್ಯಕ್ಷೆ ಲಲಿತ ಶಿವಣ್ಣ, ಸದಸ್ಯರಾದ ಪಾಪಲಿಂಗಪ್ಪ, ಲುಕ್ಮಾನ್ಖಾನ್, ಮಂಜಮ್ಮ, ದೇವರಾಜ್, ನವೀನ್ ಕುಮಾರ್, ಪ.ಪಂ. ಮುಖ್ಯಾಧಿಕಾರಿ ರಾಜು.ಡಿ. ಬಣಕಾರ್, ಕಂದಾಯ ನಿರೀಕ್ಷಕ ಸಂತೋಷ್ ಇನ್ನಿತರರಿದ್ದರು.