ಉಕ್ಕಡಗಾತ್ರಿಯಲ್ಲಿ ಕಿಸಾನ್ ಸಮ್ಮಾನ್ ಫಲಾನುಭವಿಗಳ ಸಮಾವೇಶದಲ್ಲಿ ಬಿ.ಪಿ. ಹರೀಶ್
ಮಲೇಬೆನ್ನೂರು, ಏ. 11 – ಬಿಜೆಪಿ ಸರ್ಕಾರ ರೈತರ ಪರವಾಗಿದ್ದು ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ರೂ ಹಣ ಜಮಾ ಆಗುತ್ತಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಅವರು ಉಕ್ಕಡಗಾತ್ರಿ ಗ್ರಾಮದಲ್ಲಿ ಹರಿಹರ ತಾ. ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಮಾವೇಶ ಮತ್ತು ಉಕ್ಕಡಗಾತ್ರಿ, ನಂದಿಗುಡಿ, ವಾಸನ ಗ್ರಾಮಗಳ ಬಿಜೆಪಿ ರೈತ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ರಸಗೊಬ್ಬರದ ಅಭಾವ ಆಗಿಲ್ಲ, ಇತ್ತೀಚಿಗೆ ದಿಢೀರ್ ಏರಿಕೆ ಆಗಿದ್ದ ರಸಗೊಬ್ಬರದ ಬೆಲೆಯನ್ನು ಕೇಂದ್ರ ಸರ್ಕಾರ ಈ ಹಿಂದಿನ ದರದಲ್ಲೇ ನೀಡುವಂತೆ ಸೂಚಿಸಿದೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಸಮಸ್ಯೆ ಗಳ ಬಗ್ಗೆ ಹೋರಾಟ ಮಾಡುವುದನ್ನು ಬಿಟ್ಟು ಸಾರಿಗೆ ನೌಕ ರರ ಮುಷ್ಕರ ಮಾಡಿ ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಹರೀಶ್ ದೂರಿದರು.
ಬಿಜೆಪಿ ರೈತ ಮೋರ್ಚಾ ಗ್ರಾಮ ಘಟಕಗಳು ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಅವುಗಳ ಪ್ರಯೋಜನ ಪಡೆಯಲು ನೆರವಾಗಬೇಕೆಂದು ಬಿ.ಪಿ. ಹರೀಶ್ ಮನವಿ ಮಾಡಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ನರೇಂದ್ರ ಮೋದಿ ಅವರು ರೈತರ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದಾರೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂಗಳನ್ನು 3 ಕಂತುಗಳಲ್ಲಿ ಜಮಾ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವೂ ಕೂಡ 4 ಸಾವಿರ ರೂ ಗಳನ್ನು ರೈತರ ಖಾತೆಗೆ ಹಾಕುತ್ತಿದೆ.
ಎಪಿಎಂಸಿ ಕಾಯ್ದೆ ಬಗ್ಗೆ ರೈತರಿಗೆ ಗೊಂದಲ ಬೇಡ, ಎಪಿಎಂಸಿಯನ್ನು ಮುಚ್ಚುವುದಿಲ್ಲ, ರೈತ ತಾನು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಲಾಬಿ ಇಲ್ಲದೆ ನೇರವಾಗಿ ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಶಿವ ಪ್ರಸಾದ್ ಹೇಳಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ರೈತರ ಪರವಾಗಿರುವ ಬಿಜೆಪಿ ಸರ್ಕಾರ ಎಂದಿಗೂ ಸುಭದ್ರವಾಗಿರುತ್ತದೆ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಸಂಚಾಲಕ ಕೊಳೇನಹಳ್ಳಿ ಸತೀಶ್ ಮಾತನಾಡಿದರು. ಹರಿಹರ ತಾ.ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವೀರಣ್ಣ ಕೊಂಡಜ್ಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ ಅಧ್ಯಕ್ಷ ಕರಿಬಸಪ್ಪ, ಹರಿಹರ ತಾ. ಗ್ರಾ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ನಂದಿಗುಡಿ ಕೆಂಚ ವೀರಯ್ಯ, ತಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತ ಧನರಾಜ್ ಮತ್ತಿತರರು ವೇದಿಕೆಯಲ್ಲಿದ್ದರು.
ಉಕ್ಕಡಗಾತ್ರಿ ಸಿದ್ದನಗೌಡ ಸ್ವಾಗತಿಸಿದರು, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎನ್ ಹಳ್ಳಿ ನಾಗನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೆಳ್ಳೂಡಿ ಗೀತಮ್ಮ ನಿರೂಪಿಸಿದರೆ ಕೊನೆಯಲ್ಲಿ ಉಕ್ಕಡಗಾತ್ರಿ ಚಂದ್ರೇಗೌಡ ವಂದಿಸಿದ್ದರು.