ನಮ್ಮಲ್ಲಿ ಇಚ್ಛಾಶಕ್ತಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ

ಎಸ್ಪಿ ರವಿ ಚೆನ್ನಣ್ಣನವರ್‌ ಪ್ರತಿಪಾದನೆ

ರಾಜನಹಳ್ಳಿ (ಚಳ್ಳಕೆರೆ ತಿಪ್ಪೇರುದ್ರಸ್ವಾಮಿ ವೇದಿಕೆ) ಫೆ.8- ನಮ್ಮಲ್ಲಿ ಇಚ್ಛಾಶಕ್ತಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ ಹೇಳಿದರು.

ಇಲ್ಲಿನ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಆರಂಭಗೊಂಡ 2 ದಿನಗಳ ವಾಲ್ಮೀಕಿ ಜಾತ್ರೆಯಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಎಸ್ಟಿ ನೌಕರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಗುರಿ, ಯೋಜನೆಗಳ ಬಗ್ಗೆ ದೃಢ ನಿರ್ಧಾರ ಇರಬೇಕು. ಜನರ ಸಮಸ್ಯೆ ನನ್ನ ಸಮಸ್ಯೆ ಎನ್ನುವ ಹಾಗೆ ನಾವು ಬದುಕಬೇಕು. ನಾವು ಸರ್ಕಾರಿ ನೌಕರರಾಗಿರುವ ಬಗ್ಗೆ ನಮಗೆ ಹೆಮ್ಮೆ ಇರಬೇಕೆಂದು ನೌಕರರನ್ನು ಹುರಿದುಂಬಿಸಿದರು.

ಸಾಧನೆ ಮಾಡುತ್ತೇನೆಂಬ ಹಂಬಲ ನಮ್ಮಲ್ಲಿ ಮೊಳಕೆ ಒಡೆದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಗೆಲ್ಲುವವರೆಗೂ ಸೋಲನ್ನು ಒಪ್ಪಿಕೊಳ್ಳಬೇಡಿ. ಈ ಜಗತ್ತು ಸಾಧಕರ ಸ್ವತ್ತು ಎಂದು ಸಭಿಕರನ್ನು ಉತ್ಸಾಹಿಸಿದ ರವಿ ಚೆನ್ನಣ್ಣನವರ್‌, ಬದುಕಿನಲ್ಲಿ ಕೊಟ್ಟು ಹೋಗಬೇಕು, ಇಲ್ಲವೇ ಬಿಟ್ಟು ಹೋಗಬೇಕು. ಇದರಲ್ಲಿ ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಎಂಬ ಮಾತು ಎಲ್ಲರನ್ನು ಆಕರ್ಷಿಸಿತು.

ಎಲ್ಲಿಯವರೆಗೆ ನಮಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಇದು ನಮಗೆ ನಿಜವಾದ ಸ್ವಾತಂತ್ರ್ಯ ಅಲ್ಲ ಎಂಬ ಅಂಬೇಡ್ಕರ್‌ ಅವರ ಮಾತನ್ನು ನೀವೆಲ್ಲರೂ ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಂಡು ಹೋರಾಡಬೇಕು. ಮನೆಗೊಬ್ಬ ನಾಯಕ ಹುಟ್ಟುವಂತೆ ನಾವು ಪ್ರೇರಣೆ ನೀಡಬೇಕು. ಜನ ಕೆಲಸಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸುವ ಬಗ್ಗೆ ನಾವು ಆಲೋ ಚನೆ ಮಾಡಬೇಕು. ಉತ್ತಮ ಆಲೋಚನೆ, ಇಚ್ಛಾಶಕ್ತಿ ಇದ್ದರೆ ಪ್ರಗತಿ ಕಟ್ಟಿಟ್ಟ ಬುತ್ತಿ ಎಂದು ರವಿ ಚೆನ್ನಣ್ಣನವರ್‌ ಅಭಿಪ್ರಾಯಪಟ್ಟರು.

ರಾಜ್ಯ ಎಸ್ಸಿ-ಎಸ್ಟಿ ನೌಕರರ ಅಧ್ಯಕ್ಷ ಡಿ. ಶಿವಶಂಕರ್‌ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ವ್ಯವಸ್ಥೆ ಕಡಿಮೆ ಆಗುತ್ತಿದೆ. ಅಂಬೇಡ್ಕರ್‌ ಅವರು ಅಂದು ತಾವು ಕಷ್ಟಪಟ್ಟು ಇಂದು ನಾವೆಲ್ಲರೂ ಈ ರೀತಿ ವೇದಿಕೆಯಲ್ಲಿ ನಿಂತು ಮಾತನಾಡುವಂತೆ ಮಾಡಿದ್ದಾರೆ. ಅವರು ನೀಡಿದ ಸಂವಿಧಾನದ ಆಶಯಗಳನ್ನು ನಮ್ಮನ್ನಾಳುವ ಸರ್ಕಾರಗಳು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವ ಕಾರಣ ಇವತ್ತು ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಜಾತಿ ಹೆಸರಿನಲ್ಲಿ ನೌಕರರು ಸಂಘಟನೆ ಮಾಡಬಾರದೆಂಬ ಸರ್ಕಾರದ ಆದೇಶ ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಶಿವಶಂಕರ್‌ ಅವರು, ನಾವು ಯಾರ ವಿರುದ್ಧವೂ ಸಂಘಟನೆ ಮಾಡುತ್ತಿಲ್ಲ, ನಮ್ಮ ಹಕ್ಕಿಗಾಗಿ ಸಂಘಟನೆ ಮಾಡಿಕೊಂಡು ಹೋರಾಟ ಮಾಡುತ್ತಿದ್ದೇವೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆಪಿಎಸ್‌ಸಿ ಸದಸ್ಯರಾದ ಡಾ. ರಂಗರಾಜ್‌ ವನದುರ್ಗ ಅವರು, ಕಾಡಿನಿಂದ ನಾಡಿಗೆ ಬಂದಿರುವ ನಾವು ನಾಯಕತ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ. ವಾಲ್ಮೀಕಿ ಜಾತ್ರೆ ವಿಚಾರದ್ದೇ ವೇದಿಕೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್‌ ಅಧಿಕಾರಿಗಳಾದ ಪಂಪಾ ಪತಿ, ಪ್ರಕಾಶ್‌, ಮಂಜುನಾಥ್‌ ತಳವಾರ್, ವೇಣುಗೋಪಾಲ್‌, ತಿಪ್ಪೇಸ್ವಾಮಿ, ಶರಣಬಸಪ್ಪ ಸುಬೇದಾರ್‌, ಎಂ.ಎನ್‌. ರುದ್ರಪ್ಪ, ರವೀಂದ್ರ ನಾಯ್ಕೋಟಿ ಮತ್ತು ಮುಖ್ಯ ಪೇದೆ ಗುಮ್ಮನೂರು ಪ್ರಕಾಶ್‌ ಮತ್ತಿತರರನ್ನು  ಸನ್ಮಾನಿಸಲಾಯಿತು.

ಅಬಕಾರಿ ಅಧೀಕ್ಷಕ ಡಾ. ವೈ. ಮಂಜುನಾಥ್‌, ಸಾರಿಗೆ ಇಲಾಖೆಯ ಪ್ರಾದೇಶಿಕ ಆಯುಕ್ತ ಶಿವರಾಜ್ ಪಾಟೀಲ್‌, ನಿವೃತ್ತ ಡಿಪಿಜಿ ಎಂ.ಎನ್‌ ನಾಗರಾಜ್, ವಾಣಿಜ್ಯ ತೆರಿಗೆ ಇಲಾಖೆಯ ಡಿಸಿ ಹೆಚ್‌.ಎಸ್‌. ಮಂಜುನಾಥ್‌, ಕೆಪಿಟಿಸಿಎಲ್‌ ಇಇ ಕೆ.ಎಸ್‌ ಜಯಪ್ಪ, ನಿವೃತ್ತ ಜಂಟಿ ನಿರ್ದೇಶಕ ಕೆ.ಹೆಚ್‌ ಓಬಳಪ್ಪ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು. 

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎ. ರಾಜಶೇಖರ್‌, ಉಪಾಧ್ಯಕ್ಷ ಕೆ. ನಾಗರಾಜ್‌, ದಾವಣಗೆರೆ ಜಿಲ್ಲಾಧ್ಯಕ್ಷ ಶ್ರೀನಿವಾಸ್‌ ನಾಯಕ, ಹರಿಹರ ತಾ. ಅಧ್ಯಕ್ಷ ಶ್ರೀನಿವಾಸ್‌, ಶಿಕ್ಷಕ ಜಿ.ಆರ್‌. ನಾಗರಾಜ್, ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

`ವಾಲ್ಮೀಕಿ ವಿಜಯಸ್ಮರಣೆ’ ಸಂಪುಟದ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ ಅವ ರನ್ನು ಗೌರವಿಸಲಾಯಿತು. ನೌಕರರ ಸಂಘದ ಉಪಾಧ್ಯಕ್ಷ ಆರ್‌.ಜಿ. ಸಣ್ಣಿ ಸ್ವಾಗತಿಸಿದರು. ಹರಿಹರ ತಾ. ಪ್ರಾ. ಶಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್‌. ಚಂದ್ರಪ್ಪ ನಿರೂಪಿಸಿದರೆ, ಶಿಕ್ಷಕ ದಾಗಿನಕಟ್ಟೆ ರಂಗಸ್ವಾಮಿ ವಂದಿಸಿದರು.


ನಮ್ಮಲ್ಲಿ ಇಚ್ಛಾಶಕ್ತಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ - Janathavaniಜಿಗಳಿ ಪ್ರಕಾಶ್,
[email protected]

error: Content is protected !!