ನಕಲಿ ಬಂಗಾರ ನೀಡಿ ವಂಚನೆ : ಬಂಧನ

ದಾವಣಗೆರೆ, ಏ.9- ಅಸಲಿ ಎಂದು ನಂಬಿಸಿ, ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ 2.10 ಲಕ್ಷ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಓರ್ವನನ್ನು ಬಂಧಿಸಿ, ಮತ್ತೋರ್ವನ ಸೆರೆಗಾಗಿ ನ್ಯಾಮತಿ ಪೊಲೀಸರು ಬಲೆ ಬೀಸಿದ್ದಾರೆ. 

ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದ ಬುಟ್ಟಿ ಹೆಣೆಯುವ ಕೆಲಸಗಾರ ತಿಮ್ಮೇಶ ಬಂಧಿತ ಆರೋಪಿ. ಈತನಿಂದ 2.10 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯವನ್ನು ನಡೆಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ಕುಂದೂರು ಪೋಸ್ಟ್‍ನ ಸಾರಾಡೋಗು ಗ್ರಾಮದ ರೈತ ಮಂಜುನಾಥ ದೊಡ್ಡೇಗೌಡ ಹಾಗೂ ಕುಟುಂಬಸ್ಥರು ಮಾ.9ರಂದು ಧರ್ಮಸ್ಥಳಕ್ಕೆ ಹೋಗಿದ್ದಾಗ ಅಲ್ಲಿ ರಾಜ ಎಂಬುದಾಗಿ ಪರಿಚಯಿಸಿಕೊಂಡ ಆರೋಪಿ ರಾಜ ಎಂಬಾತ ಕಷ್ಟ ಹೇಳಿಕೊಂಡು ಹಣ ಸಹಾಯ ಪಡೆದಿದ್ದ. ರೈತ ಮಂಜುನಾಥನ ಮೊಬೈಲ್ ನಂಬರ್ ಸಹ ಪಡೆದಿದ್ದ ಆರೋಪಿತನು ದೂರವಾಣಿ ಕರೆ ಮಾಡಿ ಧರ್ಮಸ್ಥಳದಲ್ಲಿ ಪರಿಚಯವಾದ ಬಗ್ಗೆ ತಿಳಿಸಿ, ನನ್ನ ಮನೆ ಪಕ್ಕದ ಅಜ್ಜಿ ಮನೆ ಪಾಯ ತೆಗೆಸುತ್ತಿದ್ದಾಗ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಅಜ್ಜಿ ತನ್ನ ಮಗಳ ಮದುವೆ ಮಾಡಬೇಕಿದೆ. ಸಿಕ್ಕಿರುವ ಚಿನ್ನದ ಬಿಲ್ಲೆಗಳನ್ನು ನಿಮಗೆ ಕೊಡಿಸುತ್ತೇನೆ. ಅದಕ್ಕೆ ಪ್ರತಿಯಾಗಿ ಹಣ ಮತ್ತು ಚಿನ್ನದ ಸರ ಕೊಡುವಂತೆ ಕೇಳಿದ್ದ. ಮಾ.18ರಂದು ಕುದುರೆಕೊಂಡ ಗ್ರಾಮದಿಂದ ಸ್ವಲ್ಪ ಮುಂದೆ ಯರಗನಾಳು ಗ್ರಾಮದ ರಸ್ತೆಗೆ ಕರೆದೊಯ್ದು, ತನ್ನಲ್ಲಿದ್ದ ಒಂದು ಗಂಟನ್ನು ತೋರಿಸಿ, ಅದರಲ್ಲಿ 1 ಬಿಲ್ಲೆಯನ್ನು ಕೊಟ್ಟು ಪರೀಕ್ಷೆ ಮಾಡಿಸುವಂತೆ ರೈತ ಮಂಜುನಾಥನಿಗೆ ಆರೋಪಿತನು ಹೇಳಿದ್ದ.

ಒಂದು ಬಿಲ್ಲೆ ಜೊತೆಗೆ ಇನ್ನೊಂದು ಬಿಲ್ಲೆ ನೀಡುವಂತೆ ಕೇಳಿದ್ದರಿಂದ ಮಂಜುನಾಥಗೆ ಆರೋಪಿ ರಾಜ ಎಂಬಾತ ಮತ್ತೊಂದು ಬಿಲ್ಲೆ ಕೊಟ್ಟಿದ್ದು, 2 ಬಿಲ್ಲೆಗಳಿಗೆ 1500 ಹಣ ಪಡೆದಿದ್ದ. ಅವೆರಡನ್ನೂ ಬಾಳೆಹೊನ್ನೂರಿನ ಒಂದು ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಚಿನ್ನವೆಂಬುದು ಗೊತ್ತಾಯಿತು. ನಂತರ ಆರೋ ಪಿತನು ತಿಳಿಸಿದಂತೆ ಮಾ.20ರಂದು ಬೆಳಿಗ್ಗೆ ಮಂಜುನಾಥ ಮತ್ತು ಪತ್ನಿ ಕುದುರೆಕೊಂಡ ಗ್ರಾಮಕ್ಕೆ ಬಂದು ಆರೋಪಿತನಿಗೆ ಕರೆ ಮಾಡಿದಾಗ, ಅವನು, ತಿಳಿಸಿದಂತೆ ಅಲ್ಲಿಂದ ಯರಗನಾಳು ಗ್ರಾಮಕ್ಕೆ ಹೋಗುವ ರಸ್ತೆಗೆ ಬಂದಾಗ, ಅಲ್ಲಿದ್ದ ಆರೋಪಿ ರಾಜ ಮತ್ತು ಆತನ ಜೊತೆಗಿದ್ದ ಹೆಂಗಸು ಹಣ, ಚಿನ್ನದ ಸರ ತಂದಿದ್ದೀರಾ? ಎಂಬುದಾಗಿ ಪ್ರಶ್ನಿಸಿದರು. 

ಆಗ ಮಂಜುನಾಥ 2.10 ಲಕ್ಷ ಹಣ, 20 ಗ್ರಾಂ ಚಿನ್ನದ ಸರ ತಂದಿದ್ದಾಗಿ ಹೇಳಿದ್ದಾರೆ. ಮೊದಲು ಹಣವನ್ನು ಕೊಡಲು ಕೇಳಿದ್ದರಿಂದ ನೀವು ಮೊದಲು ಚಿನ್ನ ಕೊಡಿ ಎಂಬುದಾಗಿ ಮಂಜುನಾಥ ದಂಪತಿ ಕೇಳಿದ್ದಾರೆ. ಆಗ ಅರ್ಧ ಕೆಜಿ ತೂಕದಷ್ಟು ಬಿಲ್ಲೆಗಳಿರುವ ಒಂದು ಬಟ್ಟೆ ಗಂಟನ್ನು ಕೊಟ್ಟು 2.10 ಲಕ್ಷ ನಗದು, 20 ಗ್ರಾಂ ಚಿನ್ನದ ಸರವನ್ನು ಆರೋಪಿ ರಾಜ ಮತ್ತು ಅಪರಿಚಿತ ಮಹಿಳೆ ಪಡೆದು, ಯಾರಾದರೂ ಬರುತ್ತಾರೆ, ಇಲ್ಲಿಂದ ಬೇಗ ಹೊರಡಿ ಎಂಬುದಾಗಿ ಹೇಳಿ, ಕಳಿಸಿದ್ದಾರೆ. ಆಗ ಗಾಬರಿಯಿಂದ ಮಂಜುನಾಥ ಬಿಲ್ಲೆ ಗಂಟನ್ನು ತೆಗೆದುಕೊಂಡು, ಶಿವಮೊಗ್ಗದ ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಅದು ನಕಲಿ ಚಿನ್ನದ ಬಿಲ್ಲೆಗಳೆಂದು ಗೊತ್ತಾಗಿದೆ.

ಆರೋಪಿ ರಾಜನಿಗೆ ಮಂಜುನಾಥ ಕರೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ. ತಕ್ಷಣವೇ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಸ್ಪಿ ಗಮನಕ್ಕೆ ತರಲಾಯಿತು. ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್, ಚನ್ನಗಿರಿ ಡಿವೈಎಸ್ಪಿ ಡಾ. ಕೆ.ಎಂ. ಸಂತೋಷ ಮಾರ್ಗದರ್ಶನದಲ್ಲಿ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ನ್ಯಾಮತಿ ಪಿಎಸ್‍ಐ, ಸಿಬ್ಬಂದಿ ನಕಲಿ ಬಂಗಾರ ನೀಡುವವರ ಮಾಹಿತಿ ಸಂಗ್ರಹಿಸಿ, ನಂತರ ಬಾತ್ಮೀದಾರರಿಂದ ಮಾಹಿತಿ ಮೇರೆಗೆ ಸವಳಂಗ ಗ್ರಾಮದಲ್ಲಿ ಮೈಸೂರು ತಾಲ್ಲೂಕು ತಿಮ್ಮೇಶ ಎಂಬಾತನನ್ನು ಬಂಧಿಸಿ, 2.10 ಲಕ್ಷ ನಗದು, 20 ಗ್ರಾಂ ಚಿನ್ನದ ಸರ ಜಪ್ತು ಮಾಡಲಾಯಿತು. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆದಿದೆ.

error: Content is protected !!