ಹೊಸ ಆಸ್ತಿ ತೆರಿಗೆ ಪದ್ಧತಿಗೆ ಪಾಲಿಕೆ ಅಸ್ತು: ಕೈ ವಿರೋಧ

ದಾವಣಗೆರೆ, ಏ.7- ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ಮಹಾನಗರ ಪಾಲಿಕೆ ನೂತನ ಆಸ್ತಿ ತೆರಿಗೆ ಪದ್ಧತಿಯನ್ನು ಗುರುವಾರ  ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅನುಷ್ಠಾನಕ್ಕೆ ತರಲಾಯಿತು.

ಪಾಲಿಕೆ ಉಪ ಆಯುಕ್ತ ಎ.ನಾಗರಾಜ್ ಸಭೆಯ ಆರಂಭದಲ್ಲಿ ಕಾಯ್ದೆಯಲ್ಲಿ ಆಸ್ತಿ ತೆರಿಗೆ ತಿದ್ದುಪಡಿಯ ಉದ್ದೇಶ ಹಾಗೂ ತಿದ್ದುಪಡಿಗಳ ಬಗ್ಗೆ ವಿವರಿಸಿದರು. 

ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಬಿಜೆಪಿ ಸದಸ್ಯರು ಕಾಯ್ದೆ ಬಡವರ ಪರವಾಗಿದ್ದು, ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಕಾಯ್ದೆ ಅನುಷ್ಠಾನಗೊಳ್ಳಲಿ ಎಂದು ಪಟ್ಟು ಹಿಡಿದರು.

ಈ ವೇಳೆ ಮೇಯರ್ ವೀರೇಶ್, ಕಾಯ್ದೆ ಪರ ಹಾಗೂ ವಿರೋಧ ಇರುವವರು ಕೈ ಎತ್ತಲು ಸೂಚಿಸಿ ದಾಗ, ಸಭೆಯಲ್ಲಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಸೇರಿದಂತೆ ಬಿಜೆಪಿ ಸದಸ್ಯರೆಲ್ಲರೂ ಕೈ ಎತ್ತಿ ಕಾಯ್ದೆ ಪರ ಇರುವುದಾಗಿ ಹೇಳಿದರು. ಕಾಂಗ್ರೆಸ್ ಸದಸ್ಯರು ಕಾಯ್ದೆ ವಿರುದ್ಧವಾಗಿ ಕೈ ಎತ್ತಿದರು. ಜೆಡಿಎಸ್ ಸದಸ್ಯೆಯೂ ಸಹ ಕಾಯ್ದೆ ಪರ ಕೈ ಎತ್ತಿ ಬೆಂಬಲ ಸೂಚಿಸಿದರು. ಒಟ್ಟಾರೆ 23 ಸದಸ್ಯರು ಕಾಯ್ದೆ ಪರ ಹಾಗೂ 16 ಜನರು ವಿರುದ್ಧ ಕೈ ಎತ್ತಿದಾಗ ಬಹುಜನರ ಬೆಂಬಲದ ಹಿನ್ನೆಲೆಯಲ್ಲಿ ಕಾಯ್ದೆ ಅನುಷ್ಠಾನಗೊಳಿಸಿರುವುದಾಗಿ ಮೇಯರ್ ವೀರೇಶ್ ಘೋಷಿಸಿದರು. 

ಇದಕ್ಕೂ ಮುನ್ನ ಮಾತನಾಡಿದ ಎ.ನಾಗರಾಜ್, ಪ್ರಸ್ತುತ ಜನತೆ ಕೊರೊನಾ ಸಂಕಷ್ಟದಲ್ಲಿದ್ದಾರೆ. ಜನರಲ್ಲಿ ತೆರಿಗೆ ಕಟ್ಟಲೂ ಹಣವಿಲ್ಲವಾಗಿದೆ. ಇಂತಹ ವೇಳೆ ತಿದ್ದುಪಡಿ ತಂದು, ತೆರಿಗೆ ಹೆಚ್ಚಿಸುವುದು ಸೂಕ್ತವಲ್ಲ. ಕಾಯ್ದೆಯಲ್ಲಿ ಗೊಂದಲವಿದೆ. ಇದರಿಂದ ಸಾರ್ವಜನಿಕರಿಗೆ ಹೊರೆಯಾಗುವುದು ಬೇಡ. ಆದ್ದರಿಂದ ಅವಸರ ಮಾಡದೆ ಮತ್ತಷ್ಟು ಸಮಯಾವಕಾಶ ಪಡೆದು ಕೂಲಂಕುಶವಾಗಿ ಚರ್ಚಿಸಿ ತೀರ್ಮಾನಿಸಬೇಕು ಎಂದು ಮನವಿ ಮಾಡಿದರು.

ಮುಂದುವರೆದು ಮಾತನಾಡಿದ ಅವರು, ಪಾಲಿಕೆಯಿಂದ ತೆರಿಗೆ ಕಟ್ಟದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಆದ್ದರಿಂದ ತೆರಿಗೆಯನ್ನು ವರ್ಷಕ್ಕೆ ಇಂತಿಷ್ಟು ಎಂದು ನಿರ್ಧಾರ ಮಾಡಬೇಕು. ತೆರಿಗೆ ಜೊತೆ ಶೇ.26ರಷ್ಟು ಸೆಸ್ ಹಾಕಲಾಗುತ್ತದೆ. ದಂಡದ ಮೊತ್ತ ಹಾಗೂ ತೆರಿಗೆ ಎರಡಕ್ಕೂ ಸೇರಿಸಿ ಸೆಸ್ ವಿಧಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಆದ್ದರಿಂದ ಮೂಲ ಕಂದಾಯಕ್ಕೆ ಮಾತ್ರ  ಸೆಸ್ ವಿಧಿಸಬೇಕು. ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ಸದಸ್ಯ ಪ್ರಸನ್ನಕುಮಾರ್,  ಆಸ್ತಿ ತೆರಿಗೆ ತಿದ್ದುಪಡಿ ಕುರಿತು ಈಗಾಗಲೇ ಕೆಲ ಸಭೆಗಳಲ್ಲಿ ಚರ್ಚಿಸಲಾಗಿದೆ. 2005 ರಿಂದ ಇಲ್ಲಿಯವರೆಗೆ ಶೇ.84ರಷ್ಟು ತೆರಿಗೆ ಹೆಚ್ಚು ಮಾಡಲಾಗಿದೆ. ತಿದ್ದುಪಡಿ ಕಾಯ್ದೆ ಪ್ರಕಾರ ಆಯಾ ಪ್ರದೇಶದ ಮಾರುಕಟ್ಟೆ ಮೌಲ್ಯಕ್ಕೆ ಅನುಸಾರವಾಗಿ ತೆರಿಗೆ ಕಟ್ಟಬೇಕಾಗಿದೆ. ಇದರಿಂದ ಮೌಲ್ಯ ಹೆಚ್ಚಾಗಿರುವ ಪ್ರದೇಶದ ಜನರು ಹೆಚ್ಚು ತೆರಿಗೆ ಹಾಗೂ ಕಡಿಮೆ ಮೌಲ್ಯ ಇರುವ ಪ್ರದೇಶದ ಜನತೆ ಕಡಿಮೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾಯ್ದೆ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಕೈ ಬರಹದಲ್ಲಿ ತೆರಿಗೆ ಹಾಗೂ ದಂಡ ವಿಧಿಸುತ್ತಿದ್ದುದರಿಂದ ತೆರಿಗೆ ಹಣ ಲೋಪವಾಗುವ ಸಂಭವವಿತ್ತು. ಇದೀಗ ತೆರಿಗೆ ಪದ್ಧತಿ ಗಣಕೀಕೃತವಾಗಿ ನಡೆಯಲಿದ್ದು, ಯಾವುದೇ ಲೋಪಕ್ಕೆ ಆಸ್ಪದವಿಲ್ಲದೆ ಪಾಲಿಕೆಗೆ ಆದಾಯ ಬರುತ್ತದೆ ಎಂದರು.

ಸದಸ್ಯ ಶಿವಪ್ರಕಾಶ್, ಉಮಾ ಪ್ರಕಾಶ್ ಕಾಯ್ದೆ ಪರ ಮಾತನಾಡಿದರು.  ಹಿರಿಯ ಸದಸ್ಯ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್ ವಿರೋಧವಿರುವುದಾಗಿ ಹೇಳಿದರು.

ಆಯುಕ್ತ ವಿಶ್ವನಾಥ್ ಮುದಜ್ಜಿ, ತೆರಿಗೆ ಜನತೆಗೆ ಹೊರೆಯಾಗದಂತೆ ಹಾಗೂ ಹಿಂದಿಗಿಂತಲೂ ಕಡಿಮೆ ಆಗದಂತೆ ಪರಿಷ್ಕರಣೆ ಮಾಡಲು ಸರ್ಕಾರ ಸೂಚಿಸಿದೆ. ಅಲ್ಲದೆ, ತೆರಿಗೆ ಪರಿಷ್ಕರಿಸಿ ಅನುಷ್ಠಾನಗೊಳಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸ್ಥಗಿತಗೊಳಿಸುವಂತೆ ಹೇಳಿದೆ. ಆದ್ದರಿಂದ ಜನತೆಗೆ ಹೊರೆಯಾಗದಂತೆ ಪರಿಷ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೇಯರ್ ಎಸ್.ಟಿ. ವೀರೇಶ್, ಇದು ತೆರಿಗೆ ಪರಿಷ್ಕರಣೆಯಲ್ಲ, ಮೊದಲಿದ್ದ ಪದ್ಧತಿ ಬದಲಾವಣೆ ಅಷ್ಟೇ. ಜನತೆ ಮೇಲಿರುವ ಕಾಂಗ್ರೆಸ್ ಸದಸ್ಯರ ಕಳಕಳಿಯನ್ನು ಗೌರವಿಸುತ್ತೇವೆ. ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ. ಆತಂಕ ಬೇಡ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್ ಸೇರಿದಂತೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಕೊರೊನಾದಲ್ಲಿ ಮೃತರಾದವರಿಗೆ ಹಾಗೂ ಇತ್ತೀಚೆಗೆ ನಕ್ಸಲ್ ದಾಳಿಗೆ ತುತ್ತಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

error: Content is protected !!