ಪುರೋಹಿತರು, ಅರ್ಚಕರನ್ನು ಅಸಂಘಟಿತರೆಂದು ಪರಿಗಣಿಸಬೇಕು

ಪುರೋಹಿತ ಸಂಘದ ರಾಜ್ಯಾಧ್ಯಕ್ಷ ಡಾ. ಅನಂತಮೂರ್ತಿ ಒತ್ತಾಯ

ದಾವಣಗೆರೆ, ಫೆ.3- ವೃತ್ತಿಪರ ಪುರೋಹಿತರು ಮತ್ತು ಅರ್ಚಕರ ಸಂಕುಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅಳಿವಿನಂಚಿಗೆ ಬಂದಿದ್ದಾರೆ. ಆದ್ದರಿಂದ ಇವರನ್ನು ಅಸಂಘಟಿತರೆಂದು ಪರಿಗಣಿಸುವಂತೆ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಂ.ಬಿ. ಅನಂತಮೂರ್ತಿ ಒತ್ತಾಯಿಸಿದರು.

ಅವರು, ಇಂದು ನಗರದ ರಂಗಮಹಲ್‍ನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ದೇವಾಲಯಗಳಲ್ಲಿ ಹಾಗೂ ಪೌರೋಹಿತ್ಯ ನಡೆಸುವ ವೃತ್ತಿಪರ ಪುರೋಹಿತರು ಮತ್ತು ಅರ್ಚಕರ ಜೀವನ ಸಂಕಷ್ಟಕ್ಕೆ ಸಿಲುಕಿ ಭದ್ರತೆ ಇಲ್ಲವಾಗಿದೆ. ಸರ್ಕಾರಿ ಸೌಲಭ್ಯಗಳು ಸಿಗದಂತಾಗಿದೆ. ಯಾವುದೇ ಕ್ಷೇತ್ರದಲ್ಲೂ ಮೀಸಲಾತಿ ಇಲ್ಲ ಎಂದು ನೋವು ವ್ಯಕ್ತಪಡಿಸಿದರು.

ಮಂತ್ರ ಮತ್ತು ಬುದ್ಧಿಶಕ್ತಿಯಿಂದ ಲೋಕಕ್ಕೆ ಸುಖ-ಶಾಂತಿ ಬಯಸುತ್ತಿರುವ ಇವರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಸರ್ಕಾರದ ಅಧಿಕೃತ ಗುರುತಿನ ಚೀಟಿ ನೀಡಿ, ಸರ್ಕಾರಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸ, ಕೌಶಲ್ಯ ಅಭಿವೃದ್ಧಿ ತರಬೇತಿ, ಪಿಂಚಣಿ ಯೋಜನೆ ನೀಡಬೇಕು ಎಂದು ಆಗ್ರಹಿಸಿದರಲ್ಲದೇ, ಹಾಗೇನಾದರೂ ಗುರುತಿನ ಚೀಟಿ ನೀಡದಿದ್ದರೆ ಬೆಂಗಳೂರಿನ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು. 

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಆರ್. ವರದರಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ನಾಗೇಂದ್ರ ಕುಮಾರ್, ರಾಜ್ಯ ಗೌರವಾಧ್ಯಕ್ಷ ಪ್ರಭು ಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ಡಿ.ಎಸ್. ರಾಜೇಶ್, ಎಸ್. ನಾಗೇಶ್, ಜಿಲ್ಲಾಧ್ಯಕ್ಷ ಎಸ್.ಎ. ಆಂಜನೇಯ, ಉಪಾಧ್ಯಕ್ಷ ಎಂ.ಡಿ. ಮುರುಳೀಧರರಾವ್, ಕಾರ್ಯದರ್ಶಿ ಆರ್.ಬಿ. ನಾಗರಾಜ್, ಸಹ ಕಾರ್ಯದರ್ಶಿ ಎಸ್.ಎ. ವಿನಯ್, ಖಜಾಂಚಿ ರಂಗನಾಥ್ ಭಾರಧ್ವಜ್, ಸದಸ್ಯರಾದ ಎಸ್. ನಾಗರಾಜ್, ಕೆ.ವಿ. ಅಮರನಾಥ್, ನಾಗೇಶ್ ಭಟ್, ಯೋಗ ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.

error: Content is protected !!