ದಾವಣಗೆರೆ, ಏ.6-ಬಾಗಲ ಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಮಾಲೀಕತ್ವದ ಇಂಡಿಯನ್ ಪವರ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯು ಅತಿ ಹೆಚ್ಚು ಟನ್ ಕಬ್ಬು ಅರೆದು ಸಕ್ಕರೆ ಉತ್ಪಾದಿಸುವಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ಪ್ರಸಕ್ತ ವರ್ಷ ಕಾರ್ಖಾನೆಯಲ್ಲಿ 20,14, 850 ಮೆಟ್ರಿಕ್ ಟನ್ ಕಬ್ಬು ಅರೆದು ಸಕ್ಕರೆ ಉತ್ಪಾ ದಿಸಿರುವುದು ಸಿಂಗಲ್ ಕಾಂಪ್ಲೆಕ್ಸ್ ಕಾರ್ಖಾನೆಗಳ ಪೈಕಿ ಭಾರತದಲ್ಲಿಯೇ ಪ್ರಥಮವಾಗಿದೆ. ಕಳೆದ ವರ್ಷ ಇದೇ ಕಾರ್ಖಾನೆ 10.75 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು ಸಕ್ಕರೆ ಉತ್ಪಾದನೆ ಮಾಡಿತ್ತು.
ಕಾರ್ಖಾನೆ ನಿರ್ಮಾಣ 2005ರಿಂದ ಆರಂಭವಾಗಿ, 2008ಕ್ಕೆ ಕೆಲಸ ಆರಂಭಿಸಿತ್ತು. ಆರಂಭದಲ್ಲಿ ದಿನಕ್ಕೆ 5 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ, 28 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಮಾತ್ರ ಹೊಂದಿದ್ದ ಕಾರ್ಖಾನೆ ನಂತರ 2018ಕ್ಕೆ ತನ್ನ ಸಾಮರ್ಥ್ಯವನ್ನು 24 ಸಾವಿರ ಮೆಟ್ರಿಕ್ ಟನ್ ಮತ್ತು ವಿದ್ಯುತ್ ಉತ್ಪಾದನೆ ಸಾಮರ್ಥ್ಯ 83 ಮೆಗಾವ್ಯಾಟ್ ಗೆ ಹೆಚ್ಚಿಸಿಕೊಡಿತ್ತು.
ಒಟ್ಟಾರೆ ಕಬ್ಬು ಅರೆಯುವ ಹಾಗೂ ವಿದ್ಯುತ್ ಉತ್ಪಾದಿಸುವಲ್ಲಿ ಐಸಿಪಿಎಲ್ ಕಾರ್ಖಾನೆ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಉದ್ದಿಮೆದಾರರನ್ನು ಗೌರವಿಸಲು ಒತ್ತಾಯ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾರ್ಗದರ್ಶನದಲ್ಲಿ ದೇಶ ವಿದೇಶಗಳನ್ನು ಸುತ್ತಿ ಸದಾ ಹೊಸ ಆವಿಷ್ಕಾರ, ವಿಶಿಷ್ಟ ರೀತಿಯ ಯೋಜನೆಗಳನ್ನು ರೂಪಿಸುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಸಾಧನೆಗೆ ಕಾರಣೀಕರ್ತರಾಗಿದ್ದು, ಯಶಸ್ವಿ ಉದ್ದಿಮೆದಾರರನ್ನು ಗೌರವಿಸಿ, ಪ್ರಶಸ್ತಿ ನೀಡುವ ಮೂಲಕ ಉತ್ತೇಜಿಸಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲ ತಾಣ ವಿಭಾಗದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಸ್ಸೆಸ್ಸೆಂ ಅವರು ಪ್ರಾರಂಭಿಸಿರುವ ಕಾರ್ಖಾನೆಯಂತೆ ಜಿಲ್ಲೆಯಲ್ಲಿಯೂ ಹೊಸ ಕಾರ್ಖಾನೆಗಳನ್ನು ಸರ್ಕಾರವು ಪ್ರಾರಂಭಿಸಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಬೇಕು ಎಂದವರು ಹೇಳಿದ್ದಾರೆ.