ಸಾಮಾಜಿಕ ನ್ಯಾಯಕ್ಕಾಗಿ ಬಾಬೂಜಿ ಹೋರಾಟ ಮಾದರಿ

ಡಾ. ಬಾಬು ಜಗಜೀವನ ರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಹಲಸೆ ಅಭಿಪ್ರಾಯ

ದಾವಣಗೆರೆ, ಏ.5 – ಆರ್ಥಿಕ, ಸಾಮಾಜಿಕ ಸಮಾನತೆಯ ಮೂಲಕ ಸಮಾಜದ ಸುಧಾರಣೆ ಸಾಧ್ಯ ಎಂಬುದನ್ನು ಪ್ರತಿಪಾದಿಸಿ, ಆ ತತ್ವಗಳ ಮೂಲಕ ದೇಶದ ಉನ್ನತಿಗೆ ಶ್ರಮಿಸಿದ ಮಹಾನ್ ನಾಯಕ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ಡಾ.ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬಾಬೂಜಿ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಆಹಾರದ ಸಂಕಷ್ಟ ಎದುರಾಗಿದ್ದಾಗ ಹಸಿರು ಕ್ರಾಂತಿಯ ಮೂಲಕ ಜನರ ಹಸಿವನ್ನು ಇಂಗಿಸಿದರು. ಅಲ್ಲದೆ ಇತರೆ ದೇಶಗಳಿಗೂ ಆಹಾರ ನೀಡಿ, ಜಾಗತಿಕ ಮಟ್ಟದಲ್ಲಿ ಭಾರತದ ಸೌಹಾರ್ದ ಸಹಬಾಳ್ವೆಯ ಸಂಬಂಧವನ್ನು ಎತ್ತಿ ಹಿಡಿದರು. ಅವರ ಮೌಲಿಕ ತತ್ವಗಳು, ಆದರ್ಶಗಳು ಯುವಜನರಿಗೆ ಮಾರ್ಗದರ್ಶನವಾಗಿವೆ ಎಂದು ನುಡಿದರು.

ಸಮಾಜದಲ್ಲಿ ತಾರತಮ್ಯ ಧೋರಣೆ ನಿವಾರಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಬಾಬೂಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಕಾರ್ಮಿಕರು, ರೈತರು, ಕೃಷಿ ಕೂಲಿ ಕಾರ್ಮಿಕರ ಏಳ್ಗೆಗೆ ಹಲವಾರು ಯೋಜನೆ ಗಳನ್ನು ಅನುಷ್ಠಾನಕ್ಕೆ ತಂದರು. ಬಡಜನರ ಆರ್ಥಿಕ ಭದ್ರತೆ, ಕೌಟುಂಬಿಕ ನೆಮ್ಮದಿ ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ ಕಾರ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು ಗಮನಾರ್ಹ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಶಿವಾನಂದ ಕೆಳಗಿನಮನಿ ಅವರು ಹಸಿರು ಕ್ರಾಂತಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಡಾ.ಬಾಬು ಜಗಜೀವನರಾಂ ಅವರ ಪಾತ್ರ ಕುರಿತು ಮಾತನಾಡಿ, ದೇಶವನ್ನು ಹೀನಾಯವಾಗಿ ಕಾಡುತ್ತಿದ್ದ, ಸಾಮಾಜಿಕ ವ್ಯವಸ್ಥೆಯ ಮೂಲ ಸಮಸ್ಯೆಯಾಗಿದ್ದ ಅಸ್ಪೃಶ್ಯತೆ, ತಾರತಮ್ಯ ಧೋರಣೆ ಹಾಗೂ ಮೇಲು-ಕೀಳು ಎಂಬ ಭೇದಭಾವವನ್ನು ತೊಡೆದು ಹಾಕಲು ಬಾಬೂಜಿ ಅವರ ಹೋರಾಟ ಅವಿಸ್ಮರಣೀಯ ಎಂದರು.

ಸಿಂಡಿಕೇಟ್ ಸದಸ್ಯ ಟಿ. ಇನಾಯತ್‍ಉಲ್ಲಾ, ಬಾಬೂಜಿ ಕೇವಲ ರಾಜಕಾರಣಿ ಅಲ್ಲ. ಅವರೊಬ್ಬ ಹೋರಾಟಗಾರ. ದಕ್ಷ ಮತ್ತು ಪ್ರಾಮಾಣಿಕ ಆಡಳಿತಗಾರರಾಗಿದ್ದರು. ನಾಲ್ಕು ದಶಕಗಳ ಕಾಲ ಸಂಸದರಾಗಿ ಜನಸೇವೆ ಸಲ್ಲಿಸಿದ್ದಾರೆ ಎಂದರು.

ಕುಲಸಚಿವರಾದ ಪ್ರೊ.ಗಾಯತ್ರಿ ದೇವರಾಜ್‍ ಮಾತನಾಡಿ, ಅವರ ಸಾಮಾಜಿಕ ಕಳಕಳಿ, ರಾಜಕೀಯ ಚಿಂತನೆಗಳು, ಹೋರಾಟದ ಮನೋಭಾವ, ಅಭಿವೃದ್ಧಿಪರ ಕನಸುಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ನುಡಿದರು.

ಪರೀಕ್ಷಾಂಗ ಕುಲಸಚಿವರಾದ ಪ್ರೊ. ಅನಿತಾ ಎಚ್.ಎಸ್,  ಹಣಕಾಸು ಅಧಿಕಾರಿ ಪ್ರಿಯಾಂಕ ಡಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಬಿ.ಎಸ್. ಪ್ರದೀಪ್ ಸ್ವಾಗತಿಸಿದರು. 

ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗೋಪಿನಾಥ ವಂದಿಸಿದರು. ಡಾ. ಭೀಮಾಶಂಕರ ಜೋಶಿ  ನಿರೂಪಿಸಿದರು.

error: Content is protected !!