ಲಸಿಕೆಗೆ ಕೊನೆ, ಲಾಕ್‌ಗೆ ಮೊದಲು

ಮಕ್ಕಳ ಶಿಕ್ಷಣದ ಜೊತೆ ತಜ್ಞ ಜೀವಿಗಳ ಚೆಲ್ಲಾಟ

14  ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮ ಕಡಿಮೆ ಎಂದು ಸ್ವತಃ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಲೋಕಸಭೆಗೆ ತಿಳಿಸಿದ್ದಾರೆ. ವಿಪರ್ಯಾಸ ಎಂದರೆ ಕೊರೊನಾ ಹೆಚ್ಚಾಯಿತು ಎಂದು ಕರ್ನಾಟಕದಲ್ಲಿ 9ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡಲಾಗಿದೆ!

ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಆದರೂ, ಕೇಂದ್ರದ ಆರೋಗ್ಯ ಸಚಿವರು ಆಡಿದ ಮಾತುಗಳು ರಾಜ್ಯಕ್ಕೆ ತಲುಪದೇ ಇರುವುದು ಆಶ್ಚರ್ಯಕರ.

2020ರಲ್ಲಿ ತಜ್ಞ ಜೀವಿಗಳು ನಡೆಸಿದ ಲಾಕ್‌ಡೌನ್‌ ವರ್ಣರಂಜಿತವಾಗಿತ್ತು. ಏಕೆಂದರೆ ಜಿಲ್ಲೆಗಳನ್ನು ಹಸಿರು, ಕೆಂಪು, ಹಳದಿ ಬಣ್ಣಗಳಲ್ಲಿ ವಿಂಗಡಿಸಿ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ವಿಧದ ಲಾಕ್‌ಡೌನ್‌ ಹೇರಲಾಗಿತ್ತು. ಇಷ್ಟಾದರೂ ಸೋಂಕು ತಾರಕಕ್ಕೇರುವುದು ತಪ್ಪಲಿಲ್ಲ.

2021ರಲ್ಲೂ ಕರ್ನಾಟಕದ ತಜ್ಞ ಜೀವಿಗಳು ಬಾರ್ ಮತ್ತು ಸಿನೆಮಾಗಳನ್ನು ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಹೌಸ್‌ಫುಲ್‌ ಆಗಿರಲು ಬಿಟ್ಟು, 9ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡಿದ್ದಾರೆ. ಇದು ತಜ್ಞ ಜೀವಿಗಳ ಸಾಮಾನ್ಯ ಜ್ಞಾನವನ್ನು ಪ್ರಶ್ನಿಸುವಂತೆ ಮಾಡುತ್ತಿದೆ.

ಕೇಂದ್ರ ಸರ್ಕಾರ ಲಸಿಕೆಗೆ ವಯೋಮಾನ ನಿಗದಿ ಪಡಿಸುತ್ತಾ ಬಂದಿದೆ. ಮೊದಲು 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಟ್ಟರೆ, ನಂತರ 45 ಮೀರಿದವರಿಗೆ ಕೊಡಲಾಗುತ್ತಿದೆ. ಅದರ ಅರ್ಥ, ವಯಸ್ಸು ಕಡಿಮೆ ಆದಷ್ಟೂ ಕೊರೊನಾ ಅಪಾಯ ಕಡಿಮೆ ಎಂದು. ಈ ವೇಗ ನೋಡಿದರೆ ಮಕ್ಕಳಿಗೆ ಲಸಿಕೆ ತಲುಪಲು ಇನ್ನೊಂದು ವರ್ಷವೇ ಬೇಕಾಗಬಹುದು. ಏಕೆಂದರೆ ಮಕ್ಕಳಿಗೆ ಅಪಾಯ ತೀರಾ ಕಡಿಮೆ ಎಂಬುದು ಕೇಂದ್ರ ಸರ್ಕಾರದ ನಿಲುವು.

ಆದರೆ, ರಾಜ್ಯ ಸರ್ಕಾರ ಮಕ್ಕಳನ್ನು ಮನೆಯಲ್ಲಿ ಉಳಿಸಿ, ಅಪಾಯ ಹೆಚ್ಚಾಗಿರುವ ದೊಡ್ಡವರನ್ನು ಮುಕ್ತವಾಗಿರಿಸಿದೆ. ಲಸಿಕೆ ವಿಷಯ ಬಂದಾಗ ಮಕ್ಕಳು ಕೊನೆ, ಲಾಕ್‌ ವಿಷಯ ಬಂದಾಗ ಮಕ್ಕಳು ಮೊದಲು ಎಂಬುದರ ತರ್ಕ ಏನು ಎಂಬುದನ್ನು ತಜ್ಞ ಜೀವಿಗಳೇ ಹೇಳಬೇಕಷ್ಟೇ. 

ನಷ್ಟ ಎಷ್ಟು? : ಕಳೆದ ವರ್ಷ ಹೇರಲಾದ ಆರ್ಥಿಕ ಲಾಕ್‌ಡೌನ್‌ ಕಾರಣದಿಂದಾಗಿ ಭಾರತ ಸಾಕಷ್ಟು ನಷ್ಟ ಅನುಭವಿಸಿತು. ಅದರ ಹಾನಿ ಈಗ ಕಣ್ಣಿಗೆ ರಾಚುತ್ತಿದೆ. ಆದರೆ, ಶೈಕ್ಷಣಿಕ ಲಾಕ್‌ಡೌನ್‌ ಕಾರಣದಿಂದ ಆಗುವ ನಷ್ಟ ಇನ್ನೂ ಘೋರವಾಗಿರುತ್ತದೆ. ಆರ್ಥಿಕ ನಷ್ಟದಂತೆ ಶೈಕ್ಷಣಿಕ ನಷ್ಟ ತಕ್ಷಣಕ್ಕೆ ಕಣ್ಣಿಗೆ ಕಾಣುವುದಿಲ್ಲ. ಆದರೆ, ದಶಕದ ನಂತರ ದಾರಿ ತಪ್ಪಿದ ಒಂದು ಪೀಳಿಗೆಯೇ ಕಣ್ಣೆದುರಿಗೆ ನಿಂತಿರುತ್ತದೆ. ಒಂದು ದೇಶವನ್ನು ನಾಶ ಮಾಡಲು ಒಂದೇ ಪೀಳಿಗೆಯ ಶಿಕ್ಷಣ ನಾಶ ಮಾಡಿದರೆ ಸಾಕು. ಹೆಚ್ಚಿನ ವಿವರಗಳಿಗೆ ಮೆಕಾಲೆ ಶಿಕ್ಷಣ ಪದ್ಧತಿ ಹೇರಿದ ಬ್ರಿಟಿಷರನ್ನು ಸಂಪರ್ಕಿಸಬಹುದು.

ಇನ್ನೆಷ್ಟು ದಿನ ಲಾಕ್‌ : ಶಾಲೆಗೆ ಲಾಕ್‌ ಮಾಡುವುದು ಇನ್ನೆಷ್ಟು ದಿನ ಎಂಬುದೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಚೀನಾ ಕೊರೊನಾ ವೈರಸ್ ಬಂದರೆ, ಈ ವರ್ಷ ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್‌ ಕಡೆಯಿಂದ ಬಂದಿದೆ. ಮುಂದಿನ ವರ್ಷ ಇನ್ನೆಷ್ಟು ದೇಶಗಳಿಂದ ಬರುತ್ತದೋ ಗೊತ್ತಿಲ್ಲ. ಹಾಗೆಂದು ಬಾರ್ – ರೆಸ್ಟೋರೆಂಟ್, ಸಿನೆಮಾ ಮೋಜಿ ಮಸ್ತಿ ನಿಲ್ಲಿಸಬೇಕಿಲ್ಲ. ಶಾಲೆಗಳು ಮಾತ್ರ ಬಂದ್ ಆಗಿರಬೇಕು?!

ಲಸಿಕೆ ಹಾಕಿದರೂ ಕೊರೊನಾ ನಿವಾರಣೆಯಾಗದು ಎಂದು ಪರಿಣಿತರು ಹೇಳುತ್ತಿದ್ದಾರೆ. ಹೀಗಿರುವಾಗ ಕೊರೊನಾ ವೈರಸ್ ಇನ್ನಷ್ಟು ವರ್ಷ ಇರುವುದು ಖಾಯಂ. ಹೀಗಿರುವಾಗ ಶಾಲೆಗಳಿಗೆ ವರ್ಷಗಳ ಕಾಲ ಬೀಗ  ಹಾಕಿದರೆ ಗತಿ ಏನು?

ದುಡ್ಡಿದ್ದವರಿಗೆ ಶಿಕ್ಷಣ : ಪರಿಸ್ಥಿತಿ ಹೀಗೇ ಮುಂದುವರೆದು ಶಾಲೆಗಳಿಗೆ ಬೀಗ ಹಾಕಿದರೆ ಉಳ್ಳವರು ಕಳೆದುಕೊಳ್ಳುವುದು ಕಡಿಮೆಯೇ. ಈಗಾಗಲೇ ಸಾಕಷ್ಟು ಜನರು ಮನೆಗಳಲ್ಲೇ ಪಾಠ ಕಲಿಕೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಶಾಲೆ ಬಂದ್ ಮಾಡಿದರೆ ಅಂಥವರಿಗೆ ಹೆಚ್ಚು ಕಷ್ಟವಾಗದು. ಆದರೆ, ಬಡವರ ಮಕ್ಕಳ ಗತಿ ಏನು? ಶೈಕ್ಷಣಿಕ ಅಸಮಾನತೆಯ ಉರುಳಿಗೆ ಬಡವರು – ಗ್ರಾಮೀಣರನ್ನು ದೂಡಿದರೆ ದೇಶದ ಗತಿ ಏನಾಗಬೇಕು?

ಕಡ್ಡಾಯ ಬಂದ್ ಸರಿಯಲ್ಲ : ಹತ್ತನೇ ತರಗತಿ ಮೇಲಿನ ಮಕ್ಕಳು ಶಾಲೆಗೆ ಬರಲು ಅವಕಾಶ ಕಲ್ಪಿಸಲಾಗಿದೆಯಾದರೂ, ಹಾಜರಿ ಕಡ್ಡಾಯ ಇಲ್ಲ. ಇದೇ ಸೌಲಭ್ಯವನ್ನು 9ನೇ ತರಗತಿಯವರೆಗಿನ ಮಕ್ಕಳಿಗೂ ಕೊಡಲು ಅವಕಾಶವಿದೆ. ಕೊರೊನಾಗೆ ಅಂಜುವವರು ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಲಿ. ಆದರೆ, ಕಲಿಕೆಗೆ ಬಯಕೆ ಇದ್ದರೂ ಅವರಿಗೆ ಬಲವಂತವಾಗಿ ಬಾಗಿಲು ಬಂದ್ ಮಾಡುವುದು ಏಕೆ?

ಆನ್‌ಲೈನ್‌ ಶಿಕ್ಷಣದ ಮೂಲಕ ನೇರ ಶಿಕ್ಷಣದ ಕೊರತೆ ನೀಗಿಸುತ್ತೇವೆ ಎಂಬುದು ಶತಮಾನದ ಜೋಕ್ ಅಷ್ಟೇ. ಹೀಗೆ ಇನ್ನಷ್ಟು ಕಾಲ ಬಿಟ್ಟರೆ ಮಕ್ಕಳು ಸಂಪೂರ್ಣ ದಾರಿ ತಪ್ಪುವ ಅಪಾಯ ಇದೆ. ನಂತರ ಬೀದಿಗೊಂದು ಸಿ.ಡಿ. ಲೇಡಿ – ಹೊಣೆಗೇಡಿ ರಾಜಕಾರಣಿಯಂತಹ ಬುದ್ಧಿ ಹೊಂದಿದವರು ಕಂಡು ಬಂದರೆ ಅಚ್ಚರಿ ಪಡಬೇಕಿಲ್ಲ.


– ಎಸ್.ಎ. ಶ್ರೀನಿವಾಸ್‌,
[email protected]

error: Content is protected !!