ಜನವರಿ 26 ಬಂತೆಂದರೆ ಪ್ರತಿಯೊಬ್ಬ ಭಾರತೀಯರ ಮನೆ, ಮನಗಳಲ್ಲಿ ಮೂಡುವುದು ಗಣರಾಜ್ಯೋತ್ಸವದ ಸಂಭ್ರಮ. ಇದನ್ನು ಪ್ರಜಾ ರಾಜ್ಯೋತ್ಸವವೆಂತಲೂ ಕರೆಯುವರು, ಏಕೆಂದರೆ ಇದು ಭಾರತದಲ್ಲಿರುವ 135 ಕೋಟಿ ಪ್ರಜೆಗಳೆಲ್ಲರೂ ಸೇರಿ ಆಚರಿಸುವ ಒಂದು ರಾಷ್ಟ್ರೀಯ ಹಬ್ಬ. 1950 ಜನವರಿ 26 ರಂದು ಸಂವಿಧಾನ ಜಾರಿಗೆ ಬಂದ ಸವಿನೆನಪಿಗಾಗಿ ಪ್ರತಿ ವರ್ಷ ಜನವರಿ 26 ರಂದು ದೇಶದೆಲ್ಲೆಡೆ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸ ಲಾಗುವುದು. ಇಂದು ವಿಶೇಷವಾಗಿ ಸಂವಿಧಾ ನದ ಪಿತಾಮಹ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ಹಾಗೂ ಇದರ ರಚನೆಗೆ ಶ್ರಮಿಸಿದ ಇತರೆ ಎಲ್ಲಾ ಮಹನೀಯರುಗಳನ್ನು ನೆನಪಿಸಿಕೊಳ್ಳುವ ದಿನವೂ ಹೌದು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆಯ ಜೊತೆಗೆ ಅನೇಕ ಸಣ್ಣಪುಟ್ಟ ಸಂಸ್ಥಾನಗಳು ವಿವಿಧ ಪ್ರಾಂತ್ಯಗಳನ್ನು ಆಳ್ವಿಕೆ ಮಾಡುತ್ತಿದ್ದವು. ಇವರಿವರಲ್ಲಿಯೇ ಆಗಾಗ್ಗೆ ಸಾಮ್ರಾಜ್ಯ ವಿಸ್ತರಣೆಯ ದೃಷ್ಟಿಯಿಂದ ಘರ್ಷಣೆಗಳು ನಡೆಯುತ್ತಿದ್ದವು, ಇದಲ್ಲದೆ ವಿವಿಧ ಭಾಷೆಗಳನ್ನಾಡುವ ಜನರು ದೇಶದ ಉದ್ದಗಲಕ್ಕೂ ಹರಿದು ಹಂಚಿ ಹೋಗಿದ್ದರ ಪರಿಣಾಮ ದೇಶವನ್ನು ಭಾಷೆಗಳ ಆಧಾರದ ಮೇಲೆ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ, ಎಲ್ಲಾ ಪ್ರಾಂತ್ಯ (ರಾಜ್ಯ)ಗಳನ್ನು ಒಂದು ಒಕ್ಕೂಟ ವ್ಯವಸ್ಥೆಯಡಿಯಲ್ಲಿ ತಂದು ಆಡಳಿತವನ್ನು ವಿಕೇಂದ್ರೀಕರಣಗೊಳಿಸಿ, ಪ್ರಜಾಪ್ರಭುತ್ವದ ನೈಜ ನೆಲೆಗಟ್ಟಿನಲ್ಲಿ ಅಧಿಕಾರವನ್ನು ನಡೆಸುವ ದೃಷ್ಟಿಯಿಂದ ಸಂವಿಧಾನದ ರಚನೆಯ ಅಗತ್ಯತೆಯನ್ನು ಮನಗಂಡ ರಾಷ್ಟ್ರೀಯ ನಾಯಕರು, ದೇಶಕ್ಕೊಂದು ಸುಭದ್ರವಾದ ಸಂವಿಧಾನವನ್ನು ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಅದರಂತೆ ಡಿಸೆಂಬರ್ 06, 1946 ರಂದು ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಿದರು. ಈ ರಚನಾ ಸಭೆಯು ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಸರಿ ಸುಮಾರು 328 ಪ್ರತಿನಿಧಿಗಳನ್ನು ಒಳಗೊಂಡಿತ್ತು. ಇದರ ಮೊದಲನೆಯ ಸಭೆ ಡಿಸೆಂಬರ್ 09, 1946 ರಂದು ಪಾರ್ಲಿಮೆಂಟ್ ಭವನದ ಸಭಾಂಗಣ ದಲ್ಲಿ ಸಮಾ ವೇಶಗೊಂಡಿತು. ಸಂವಿಧಾನ ರಚನಾ ಸಭೆಯ (Constituent assembly) ಅಧ್ಯಕ್ಷತೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ರವರು ಮತ್ತು ಕರಡು ರಚನಾ ಸಮಿತಿಯ (Drafting committee) ಅಧ್ಯಕ್ಷತೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ರವರು ವಹಿಸಿಕೊಂಡರು. ಇವರ ಜೊತೆಗೆ ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭ ಬಾಯಿ ಪಟೇಲ್, ಆಚಾರ್ಯ ಕೃಪಲಾನಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ಬಲದೇವ ಸಿಂಗ್, ಸಿ. ರಾಜಗೋಪಾಲಚಾರಿ, ಸರೋ ಜಿನಿ ನಾಯ್ಡು, ವಿಜಯಲಕ್ಷ್ಮಿ ಸಿಂಗ್, ಕರ್ನಾ ಟಕದವರಾದ ಎಸ್. ನಿಜಲಿಂಗಪ್ಪ, ಬೆನಗಲ್ ಶಿವರಾಂ, ಕೆ. ಸಿ. ರೆಡ್ಡಿ, ಕೆಂಗಲ್ ಹನುಮಂ ತಯ್ಯ, ಫಾದರ್ ಡಿಸೋಜ ಇನ್ನು ಮುಂತಾ ದವರು ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಇವರೆಲ್ಲರೂ ರಾಷ್ಟ್ರ ಕ್ಕೊಂದು ಉತ್ತಮ ಸಂವಿಧಾನವನ್ನು ಕೊಡಬೇಕೆಂಬ ಸದುದ್ಧೇಶ ದಿಂದ ವಿಶ್ವದ ಹಲವು ರಾಷ್ಟ್ರಗಳಾದ ಬ್ರಿಟನ್, ಅಮೆರಿಕಾ, ಐರ್ಲೆಂಡ್, ಫ್ರಾನ್ಸ್, ಕೆನಡಾ, ದಕ್ಷಿಣ ಆಫ್ರಿಕಾ, ಸೋವಿಯತ್ ರಷ್ಯಾ, ಜಪಾನ್ ಇನ್ನು ಮೊದಲಾದ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಂವಿಧಾನ ಗಳು ಒಳಗೊಂಡ ಅಂಶಗಳನ್ನು ಕೂಲಂಕುಶ ವಾಗಿ ಅಧ್ಯಯನ ಮಾಡಿ, ಅವುಗಳಲ್ಲಿ ನಮಗೆ ಅಗತ್ಯವಾಗಿ ಬೇಕಾದ ಅಂಶ ಗಳನ್ನು ಗಣನೆಗೆ ತೆಗೆದುಕೊಂಡು ಸಂವಿಧಾನವನ್ನು ರಚಿಸಲು ಮುಂದಾದರು. ಇವರು ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ 2 ವರ್ಷ, 11 ತಿಂಗಳು, 18 ದಿನ. ಇದರ ಪರಿಶೀಲನೆಗೆಂದು 114 ದಿನಗಳನ್ನು ತೆಗೆದುಕೊಳ್ಳಲಾಯಿತು. ರಚನೆಗೆ ತಗುಲಿದ ವೆಚ್ಚ 6.4 ಕೋಟಿ ರೂ. ಗಳು. 1949 ರ ನವೆಂಬರ್ 26 ರಂದು ಅಂಗೀಕೃತವಾದ ಸಂವಿಧಾನ ಮೂಲತಃ 395 ವಿಧಿಗಳು, 22 ಅಧ್ಯಾಯಗಳು ಮತ್ತು 8 ಅನುಸೂಚಿಗಳನ್ನು ಒಳಗೊಂಡಿತ್ತು.
ಸಂವಿಧಾನದ ಪೂರ್ವಪೀಠಿಕೆಯು (preamble of the constitution) ಏಕ ವಾಕ್ಯದಿಂದ ಕೂಡಿದ್ದು ಅದು ಹೀಗಿದೆ : ” ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರ ಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ ವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಇಲ್ಲಿನ ಸಮಸ್ತ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಹಾಗೂ ಅವರೆಲ್ಲರಲ್ಲಿನ ವ್ಯಕ್ತಿಗತ ಗೌರವ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಆಶ್ವಾಸನೆಯೊಂದಿಗೆ ಭ್ರಾತೃತ್ವವನ್ನು ವೃದ್ಧಿಗೊಳಿಸಲು ಈ ದಿನ ಅಂದರೆ 26ನೇ ನವೆಂಬರ್ 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ”. ಇದು ಇಡೀ ಸಂವಿಧಾನದ ಮೂಲ ತಿರುಳನ್ನು ಸ್ಪಷ್ಟಪಡಿಸುತ್ತದೆ. ಈ ವಿಚಾರವನ್ನು ಗಣರಾ ಜ್ಯೋತ್ಸವ ದಿನದಂದು ಭಾರತೀಯರೆಲ್ಲರಿಗೂ ತಿಳಿ ಹೇಳುವ ಸಮಯ ಇದಾಗಿದೆ .
ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ವ್ಯಾಪಕ ಮತ್ತು ಸುದೀರ್ಘ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಯಿದ್ದು, ಅಂತಿಮವಾಗಿ 1950 ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿತು. ಇಂತಹ ಮಹತ್ವದ ದಿನವನ್ನು ದೇಶಾದ್ಯಂತ ಇಂದು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸಂವಿಧಾನವು ಪ್ರಮುಖವಾಗಿ ಸರ್ಕಾರದ ಸ್ವರೂಪ ಮತ್ತು ಸ್ವಭಾವವನ್ನು ನಿರ್ಧರಿಸುವ ನಿಯಮ ಮಾತ್ರವಾಗಿರದೆ, ರಾಜ್ಯದ ಮೂಲ ತತ್ವಗಳನ್ನೂ ಪ್ರತಿಬಿಂಬಿಸುವುದು. ರಾಜ್ಯವು ತನಗಾಗಿ ಆಯ್ಕೆ ಮಾಡಿಕೊಂಡ ಜೀವನದ ಒಂದು ಮಾರ್ಗವಾಗಿರದೆ, ಸಮಗ್ರ ರಾಜಕೀಯ ತಳಪಾಯವೂ ಆಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದ ಪರಮೋಚ್ಚ ಅಧಿಕಾರವನ್ನು ಹಂಚಿಕೆ ಮಾಡುವಲ್ಲಿ ಪ್ರಭಾವ ಬೀರುವ ನಿಯಮಗಳನ್ನು ಸಂವಿಧಾನವು ಒಳಗೊಂಡಿದೆ. ಈ ಎಲ್ಲಾ ಅಂಶಗಳನ್ನು ಪ್ರಜೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ಸಂಭ್ರಮ ಸಹಕಾರಿಯಾಗುವುದು.
ಸಂವಿಧಾನದ ಪೂರ್ವಪೀಠಿಕೆಯು (preamble of the constitution) ಏಕ ವಾಕ್ಯದಿಂದ ಕೂಡಿದ್ದು ಅದು ಹೀಗಿದೆ : ” ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರ ಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ ವನ್ನಾಗಿ ನಿರ್ಮಿಸುವ ಸಲುವಾಗಿ ಮತ್ತು ಇಲ್ಲಿನ ಸಮಸ್ತ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ವಿಶ್ವಾಸ ಹಾಗೂ ಅವರೆಲ್ಲರಲ್ಲಿನ ವ್ಯಕ್ತಿಗತ ಗೌರವ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಆಶ್ವಾಸನೆಯೊಂದಿಗೆ ಭ್ರಾತೃತ್ವವನ್ನು ವೃದ್ಧಿಗೊಳಿಸಲು ಈ ದಿನ ಅಂದರೆ 26ನೇ ನವೆಂಬರ್ 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ”. ಇದು ಇಡೀ ಸಂವಿಧಾನದ ಮೂಲ ತಿರುಳನ್ನು ಸ್ಪಷ್ಟಪಡಿಸುತ್ತದೆ. ಈ ವಿಚಾರವನ್ನು ಗಣರಾ ಜ್ಯೋತ್ಸವ ದಿನದಂದು ಭಾರತೀಯರೆಲ್ಲರಿಗೂ ತಿಳಿ ಹೇಳುವ ಸಮಯ ಇದಾಗಿದೆ .
ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ವ್ಯಾಪಕ ಮತ್ತು ಸುದೀರ್ಘ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಯಿದ್ದು, ಅಂತಿಮವಾಗಿ 1950 ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿತು. ಇಂತಹ ಮಹತ್ವದ ದಿನವನ್ನು ದೇಶಾದ್ಯಂತ ಇಂದು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸಂವಿಧಾನವು ಪ್ರಮುಖವಾಗಿ ಸರ್ಕಾ ರದ ಸ್ವರೂಪ ಮತ್ತು ಸ್ವಭಾವವನ್ನು ನಿರ್ಧರಿಸುವ ನಿಯಮ ಮಾತ್ರವಾಗಿರದೆ, ರಾಜ್ಯದ ಮೂಲ ತತ್ವಗಳನ್ನೂ ಪ್ರತಿಬಿಂಬಿಸುವುದು. ರಾಜ್ಯವು ತನಗಾಗಿ ಆಯ್ಕೆ ಮಾಡಿಕೊಂಡ ಜೀವನದ ಒಂದು ಮಾರ್ಗವಾಗಿರದೆ, ಸಮಗ್ರ ರಾಜಕೀಯ ತಳಪಾಯವೂ ಆಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದ ಪರಮೋಚ್ಚ ಅಧಿಕಾರವನ್ನು ಹಂಚಿಕೆ ಮಾಡುವಲ್ಲಿ ಪ್ರಭಾವ ಬೀರುವ ನಿಯಮಗಳನ್ನು ಸಂವಿಧಾನವು ಒಳ ಗೊಂಡಿದೆ. ಈ ಎಲ್ಲಾ ಅಂಶಗಳನ್ನು ಪ್ರಜೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗಣರಾಜ್ಯೋತ್ಸವ ಸಂಭ್ರಮ ಸಹಕಾರಿಯಾಗುವುದು.
ಭಾರತ ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಎಂತಹ ನಾಯಕರನ್ನು ಆರಿಸಿ, ಸರ್ಕಾರ ರಚಿಸಲು ಕಳುಹಿಸಿಕೊಡು ತ್ತೇವೆ ಎಂಬುದು ಮುಖ್ಯ. ಅಮೆರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ರವರು `ಪ್ರಜಾಪ್ರಭುತ್ವ ‘ ಎಂಬ ಪದವನ್ನು “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋ ಸ್ಕರ (by the people, for the people, of the people) ಆಡಳಿತ ನಡೆಸುವ ಸರ್ಕಾರ ಎಂದು ಬಣ್ಣಿಸಿದ್ದಾರೆ. ಆದರೆ ಈ ಮಾತು ಆ ಕಾಲಕ್ಕೆ ಸರಿ, ಇದೀಗ ಇದಕ್ಕೆ ಬೇರೆಯದೇ ಅರ್ಥವಿದೆ. ಅಂದರೆ, buy the people, far the people and off the people ಎನ್ನುವಂತಾಗಿದೆ. ಪ್ರಜಾಪ್ರಭುತ್ವದ ಅಳಿವು ಉಳಿವು ದೇಶದ ಸತ್ ಪ್ರಜೆಗಳಲ್ಲಿದೆ. ಚುನಾವಣಾ ಸಂದರ್ಭದಲ್ಲಿ ಪ್ರಜೆಗಳು ಯಾವುದೇ ಹಣದ ಆಮಿಷಕ್ಕೆ ಒಳಗಾಗದೆ ತಮ್ಮ ಪವಿತ್ರವಾದ ಮತವನ್ನು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಬಳಕೆ ಮಾಡಿಕೊಳ್ಳಬೇಕು. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. `ಓಟು ಕೊಡಿ ನೋಟು ತಗೊಳ್ಳಿ’ ಅರ್ಥಾತ್ `ಓಟಿಗಾಗಿ ನೋಟು’ ಎಂಬಂತಾಗಿದೆ. ಈ ತರದ ಸನ್ನಿವೇಶಗಳನ್ನು ಹತ್ತಿಕ್ಕಲು ಚುನಾವಣಾ ಆಯೋಗ ಏನೇ ಕ್ರಮಗಳನ್ನು ತೆಗೆದುಕೊಂಡರೂ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಮೊದಲು ಪ್ರಜೆಗಳು ಬುದ್ಧಿವಂತರಾದರೆ ಮಾತ್ರ ಇವುಗಳಿಗೆ ತಡೆ ನೀಡಬಹುದು, ಆಗ ಮಾತ್ರ ನಾವು ಬಯಸಿದ ಸರ್ಕಾರವನ್ನು ತರಬಹುದು . ಇದರ ಜೊತೆಗೆ ಸಂವಿಧಾನವು ಒದಗಿಸಿಕೊಟ್ಟಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಚಿಂತನೆ ನಡೆಸುವ ಮಹ ತ್ವದ ದಿನ ಇಂದಿನ ಗಣರಾಜ್ಯೋತ್ಸವದ ದಿನ.
ಈ ಎಲ್ಲದರ ಹಿನ್ನೆಲೆಯನ್ನು ಗಮನದಲ್ಲಿ ಟ್ಟುಕೊಂಡು ಗಣರಾಜ್ಯೋತ್ಸವವನ್ನು ದೇಶದೆಲ್ಲೆಡೆ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಪ್ರತಿಯೊಬ್ಬ ಭಾರತೀ ಯನೂ ಇಂದಿನ ದಿನದ ಆಚರಣೆಯ ಉದ್ದೇಶವನ್ನು ಅರಿತು ಅದನ್ನು ಸದಾ ಮನಸ್ಸಿ ನಲ್ಲಿ ಜಾಗೃತವಾಗಿರಿಸಿಕೊಂಡು ಕಾರ್ಯ ರೂಪಕ್ಕೆ ತಂದಲ್ಲಿ ಇದೇ ನಾವುಗಳು ದೇಶಕ್ಕೆ ನೀಡುವ ಅತಿ ದೊಡ್ಡ ಕಾಣಿಕೆ. ಒಟ್ಟಾರೆ ನಾವೆಲ್ಲರೂ ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳೋಣ, ದೇಶದ ಅಭಿವೃದ್ಧಿಗೆ ಪಣ ತೊಡೋಣ, ಈ ರಾಷ್ಟ್ರವನ್ನು ಕಟ್ಟಲು ಮುಂದಾಗೋಣ.
ಡಾ. ಎಸ್. ಶಿವಯ್ಯ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
[email protected]