ಜಲ ಜೀವನ್ ಮಿಷನ್ ಗ್ರಾಮೀಣರಿಗೆ ಹೊರೆ

ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಯೋಜನೆಗೆ ಸದಸ್ಯರ ವಿರೋಧ

ಆರ್‍ಟಿಇ ಮಕ್ಕಳಿಂದ ಶುಲ್ಕ ವಸೂಲಿ: ಸದಸ್ಯೆಯೋರ್ವರ ಅಸಮಾಧಾನ

ಸಬ್ ರಿಜಿಸ್ಟರ್ ಕಚೇರಿಯಲ್ಲಿನ ಮೂಲ ಸೌಕರ್ಯ ಕೊರತೆ: ಆಕ್ಷೇಪ

ದಾವಣಗೆರೆ, ಜ.21- ಜಲ ಜೀವನ್ ಮಿಷನ್ ಯೋಜನೆಯಾದ ಮನೆ ಮನೆಗೆ ಗಂಗೆ ಮುಖೇನ ನೀರಿಗಾಗಿ ಗ್ರಾಮೀಣ ಪ್ರದೇಶದ ಜನರಿಂದ ಹಣ ವಸೂಲಿ ಮಾಡಿ ಆರ್ಥಿಕ ಹೊರೆಯಾಗುವುದೆಂದು ವಿರೋಧ. ಆರ್‍ಟಿಇ ಮೂಲಕ ಆಯ್ಕೆಯಾದ ಮಕ್ಕಳಿಗೆ ಶಿಕ್ಷಣ ನೀಡದೇ ಕೆಲ ಖಾಸಗಿ ಶಾಲೆಗಳು ಶುಲ್ಕ ವಸೂಲಿಗಿಳಿದಿರುವುದಾಗಿ ಅಸಮಾಧಾನ. ತಾಲ್ಲೂಕಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಮತ್ತು ಸರ್ವರ್ ಸಮಸ್ಯೆಗೆ ಆಕ್ಷೇಪ.

ಇಂದು ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳ ಅಸಮಾಧಾನ.

ಮನೆ ಮನೆ ಗಂಗೆ ಗ್ರಾಮೀಣರಿಗೆ ಹೊರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವದ ಯೋಜನೆಯಾದ ಜಲ ಜೀವನ್ ಮೀಷನ್ ಮನೆ ಮನೆಗೆ ಗಂಗೆ ಉತ್ತಮ ಯೋಜನೆ ಆಗಿದ್ದರೂ, ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಹೊರೆಯಾಗಲಿದೆಯಲ್ಲದೇ, ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಹೆಚ್ಚು ಹಣ ವ್ಯಯಿಸಬೇಕಾಗಲಿದೆ ಎಂಬ ಆತಂಕದೊಂದಿಗೆ ಯೋಜನೆಯನ್ನು ಬಗ್ಗೆ ಪಂಚಾಯತ್ ಸದಸ್ಯರುಗಳು ವಿರೋಧಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ನೀರು ಬಳಸುವಂತೆ ಪ್ರತಿ ಮನೆಗೆ ಪ್ರತ್ಯೇಕವಾಗಿ ನಳ, ಮೀಟರ್ ಅಳವಡಿಸಲಾಗುವುದು. ನೀರು ಬಳಸಿದ್ದಕ್ಕೆ ಶುಲ್ಕ ನಿಗದಿ ಮಾಡಲಾಗುವುದು. ಪ್ರಾಯೋಗಿಕವಾಗಿ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಯೋಜನೆ ಶುರು ಮಾಡಿದ್ದು, ಯಶಸ್ಸು ಕಂಡಿದೆ. ಆದ್ದರಿಂದ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲೂ ಹಂತ ಹಂತವಾಗಿ ಜಾರಿ ಮಾಡಲಾಗುವುದೆಂದರು.

ಇದಕ್ಕೆ ಆಕ್ಷೇಪಿಸಿದ ಶಿರಮಗೊಂಡನಹಳ್ಳಿ ಕ್ಷೇತ್ರದ ಸದಸ್ಯ ಮಂಜಪ್ಪ ಮತ್ತು ಚಿಕ್ಕತೊಗಲೇರಿ ಸದಸ್ಯ ಅಶೋಕ್, ಈ ಯೋಜನೆ ಗ್ರಾಮೀಣ ಪ್ರದೇಶದ ಜನರು, ರೈತರಿಗೆ ಅಸಮರ್ಪಕವಾಗಿದ್ದು, ನೀರು ಕೊಳ್ಳಲು ದುಡಿದ ಹಣವನ್ನು ವ್ಯಯಿಸುವುದರಿಂದ ದುಬಾರಿಯಾಗಲಿದೆ. ಜಾನುವಾರುಗಳಿಗೆ ನಿತ್ಯ ನೂರಾರು ಲೀಟರ್ ನೀರಿನ ಅವಶ್ಯಕತೆ ಇದ್ದು, ಈ ಯೋಜನೆಯಿಂದ ಅದು ಸಾಧ್ಯವಾಗುವುದಿಲ್ಲ. ಆರಂಭದಲ್ಲಿ 2 ರೂ. ಇದ್ದ ಶುದ್ಧ ಕುಡಿಯುವ ನೀರಿನ ಪ್ರತಿ ಕ್ಯಾನಿಗೆ ಇದೀಗ 5 ರೂ. ನೀಡಬೇಕಾಗಿದೆ. ಮುಂದೆ ಮನೆ ಮನೆ ಗಂಗೆಯೂ ಸಹ ಹೀಗೆ ದುಬಾರಿಯಾಗಲಿದ್ದು, ಗ್ರಾಮೀಣ ಪ್ರದೇಶದ ಜನರು ನೀರಿಗಾಗಿಯೇ ದುಡಿಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರಲ್ಲದೇ, ಗ್ರಾಮೀಣದಲ್ಲಿ ಈ ಯೊಜನೆಯಲ್ಲಿ ರಿಯಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಆಶಾ ಮುರುಳಿ, ಮುರುಗೇಂದ್ರಪ್ಪ ಮತ್ತಿತರರು, ರಸ್ತೆಗಳನ್ನು ಕಿತ್ತು ಹೊಸದಾಗಿ ಪೈಪ್ ಲೈನ್ ಸಂಪರ್ಕ ಕಲ್ಪಿಸಲು ಪ್ರತಿ ಮೀಟರ್ ಅಳವಡಿಕೆಗೆ 15 ಸಾವಿರ ರೂ ವೆಚ್ಚವಾಗುತ್ತದೆ. ಇದು ಗ್ರಾಮೀಣರಿಗೆ ಅನಾನೂಕೂಲ ಎಂದು ಆಕ್ಷೇಪಿಸಿದರು.

ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ. 45ರಷ್ಟು ತಲಾ ಅನುದಾನದ ಜೊತೆಗೆ ಗ್ರಾಮ ಪಂಚಾಯತಿಯ ಶೇ. 10ರಷ್ಟು ಜನರ ವಂತಿಕೆ ಅನುದಾನ ಸೇರಿದ್ದು, ಹೊರೆಯಾಗದು. ಭವಿಷ್ಯದಲ್ಲಿ ನೀರು ಸಂರಕ್ಷಿಸುವ ಸಲುವಾಗಿ ಈ ಯೋಜನೆ ಜಾರಿಗೆ ಬಂದಿದೆ. ಜಾನುವಾರುಗಳಿಗೆ ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ತೊಟ್ಟಿ ನಿರ್ಮಾಣ ಮಾಡಿಕೊಡಲಾಗುವುದು. ಶುಲ್ಕ ಪಾವತಿಸಲಾಗದ ಕುಟುಂಬಗಳಿಗೆ ರಿಯಾಯಿತಿ ನೀಡಲು ಯೋಜನೆಯಲ್ಲಿ ಅವಕಾಶ ಇದೆ ಎಂದರು.

ಸಬ್ ರಿಜಿಸ್ಟರ್ ಕಚೇರಿಯಲ್ಲಿನ ಅವ್ಯವಸ್ಥೆಗೆ ಅಸಮಾಧಾನ: ರಾಜ್ಯದಲ್ಲೇ ಅತ್ಯಂತ ಹೆಚ್ಚು ಆದಾಯ ತಂದುಕೊಡುವ ತಾಲ್ಲೂಕು ವ್ಯಾಪ್ತಿಯ ದಾವಣಗೆರೆಯ ಸಬ್ ರಿಜಿಸ್ಟರ್ ಕಚೇರಿಗೆ ಪ್ರತಿ ದಿನ ಸಾರ್ವಜನಿಕರು, ವೃದ್ಧರು, ಅಂಗವಿಕಲರು, ರೈತರು ಹೀಗೆ ಸಾವಿರಾರು ಸಂಖ್ಯೆಯಲ್ಲಿ ಕಚೇರಿಗೆ ನಾನಾ ಕೆಲಸದ ನಿಮಿತ್ತ ಆಗಮಿಸಿದಾಗ ನೀರು, ಆಸನ ಮತ್ತು ನೆರಳಿನ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಇನ್ನೂ ಹಳೇ ಕಾಲದ ಕಂಪ್ಯೂಟರ್ ಇದ್ದು, ಸರ್ವರ್ ಸಮಸ್ಯೆ ಉದ್ಬವಿಸುತ್ತಿದ್ದು, ಕೆಲಸ ಕಾರ್ಯ ವಿಳಂಬ ಮಾಡಲಾಗುತ್ತಿದೆ. ಜನರು ದಿನಗಟ್ಟಲೇ ಕಾಯಬೇಕಾಗಿದೆ. ಎಂದು ಪಂಚಾಯತ್ ಸದಸ್ಯ ಮುರುಗೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಈ ಬಗ್ಗೆ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು.

ಬಹುತೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿ, ನೋಂದಣಾಧಿಕಾರಿಯನ್ನು ಸಭೆಗೆ ಕರೆಯಿಸಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸುವಂತೆ ಆಗ್ರಹಿಸಿದರು.

ತಾ.ಪಂ. ಸಿಇಓ ದಾರುಕೇಶ್ ಮಾತನಾಡಿ, ಸರ್ವರ್ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಬಿಎಸ್‍ಎನ್‍ಎಲ್‍ನಲ್ಲೇ ಬಿಬಿಎಂಎಲ್ ವಿಭಾಗ ಪ್ರತ್ಯೇಕವಾಗಿದ್ದು, ಅದು ಸರ್ವರ್ ನಿರ್ವಹಣೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಬಗ್ಗೆ ಅಧಿಕಾರಿ ಕರೆಸಿ ಕ್ರಮಕ್ಕೆ ಸೂಚಿಸಲಾಗುವುದೆಂದರು.

ಆರ್‍ಟಿಇ ಅಡಿ ಮಕ್ಕಳಿಗೂ ಶುಲ್ಕ ಪಾವತಿಗೆ ಒತ್ತಡ: ಆರ್‍ಟಿಇ ಅಡಿ ಶಾಲೆಗೆ ದಾಖಲಾದ ಮಕ್ಕಳ ಪೋಷಕರಿಗೆ ಶುಲ್ಕ ಭರಿಸುವಂತೆ ಕೆಲ ಖಾಸಗಿ ಶಾಲೆಗಳಲ್ಲಿ ಒತ್ತಡ ಹಾಕಲಾಗುತ್ತಿದೆ. ಶುಲ್ಕ ಪಾವತಿ ಮಾಡುವವರೆಗೂ ತರಗತಿಗೆ ಸೇರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ನನಗೂ ಸ್ವತಃ ಅನುಭವವಾಗಿದೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯೆ ಆಶಾ ಮುರುಳಿ ಶಿಕ್ಷಣ ಇಲಾಖೆಗೆ ಒತ್ತಾಯಿಸಿದರು.

ದಾವಣಗೆರೆ ದಕ್ಷಿಣ ವಲಯ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಮಾತನಾಡಿ, ಆರ್‍ಟಿಇ ಮಕ್ಕಳ ಪೋಷಕರು ಶುಲ್ಕ ಭರಿಸುವಂತಿಲ್ಲ. ಸರ್ಕಾರವೇ ಶುಲ್ಕ ನೀಡುತ್ತದೆ. ಒಂದು ವೇಳೆ ಶಾಲೆಯವರು ಈ ರೀತಿ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಖಾಸಗಿ ಶಾಲೆಗಳು ಮಕ್ಕಳಿಗೆ ಪೂರ್ಣ ಶುಲ್ಕ ಕಟ್ಟುವಂತೆ ಒತ್ತಡ ಹಾಕುವಂತಿಲ್ಲ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರವಾಗಿ ತಂಡ ರಚನೆ ಮಾಡಿದ್ದು, ಶುಲ್ಕ ನಿಗದಿ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ನಂತರ ಈ ಬಗ್ಗೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗುವುದೆಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಕಲಾ, ರೇಷ್ಮೆ ಇಲಾಖೆ ಅಧಿಕಾರಿ ಮಂಜುನಾಥ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಯೋಜನೆಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮೀನಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ, ಸದಸ್ಯರಾದ ಆಲೂರು ಲಿಂಗರಾಜ್, ಎಂ. ಮಂಜಪ್ಪ ಚರ್ಚೆಯಲ್ಲಿ ಭಾಗವಹಿಸಿದ್ದರು.

error: Content is protected !!