ಬಿಐಇಟಿ 10 ಪ್ರಾಜೆಕ್ಟ್‌ಗಳು ಅತ್ಯುತ್ತಮ : 30 ಲಕ್ಷ ರೂ. ಅನುದಾನ

ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಾಧನೆಗೆ ಎಸ್ಸೆಸ್, ಎಸ್ಸೆಸ್ಸೆಂ ಶ್ಲ್ಯಾಘನೆ

ದಾವಣಗೆರೆ, ಜ.21- ನಗರದ ಬಾಪೂಜಿ ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ವಿದ್ಯಾಲಯದ ವಿವಿಧ ವಿಭಾಗಗಳಿಂದ ಸಲ್ಲಿಸಿದ 15 ಪ್ರಾಜೆಕ್ಟ್‌ಗಳಲ್ಲಿ 10 ಪ್ರಾಜೆಕ್ಟ್‌ಗಳನ್ನು ಅತ್ಯುತ್ತಮ ಎಂದು ಪರಿಗಣಿಸಿದೆ.

ಬಿಐಇಟಿಯ ವಿವಿಧ ವಿಭಾಗಗಳಿಂದ ಒಟ್ಟು 15 ಪ್ರಾಜೆಕ್ಟ್‌ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇವುಗಳಲ್ಲಿ  10 ಪ್ರಾಜೆಕ್ಟ್‌ಗಳು ಅತ್ಯುತ್ತಮವೆಂದು ಆಯ್ಕೆಗೊಂಡು ಒಟ್ಟು 30 ಲಕ್ಷ ರೂ.ಗಳ ಅನುದಾನ ಪಡೆದಿವೆ.

ಸಿವಿಲ್, ಕಂಪ್ಯೂಟರ್‌ ಹಾಗೂ ಐ.ಎಸ್. ವಿಭಾಗದಿಂದ ತಲಾ ಎರಡು, ಕೆಮಿಕಲ್‌, ಇಲೆಕ್ಟ್ರಿಕಲ್, ಬಿ.ಟಿ. ಮತ್ತು ಮೆಕ್ಯಾನಿಕಲ್‌ ವಿಭಾಗದಿಂದ ತಲಾ ಒಂದು ಪ್ರಾಜೆಕ್ಟ್‌ಗಳು ಅನುದಾನ ಪಡೆಯಲು ಆಯ್ಕೆಯಾಗಿವೆ.

ಸರ್ಕಾರವು ವಿದ್ಯುನ್ಮಾನ, ಐ.ಟಿ., ಬಿ.ಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಪ್ರತಿವರ್ಷ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಸ್ವ-ಉದ್ಯಮಶೀಲತೆಗೆ ಸಹಕಾರಿಯಾಗುವ ಪ್ರಾಜೆಕ್ಟ್‌ ವರ್ಕ್‌ ಕೈಗೊಳ್ಳಲು ಧನಸಹಾಯ ನೀಡುತ್ತದೆ.

ಸಮಾಜಕ್ಕೆ ಉಪಯುಕ್ತವಾಗುವ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಪ್ರಾಜೆಕ್ಟ್‌ಗಳು ಇದಕ್ಕಾಗಿ ಆಯ್ಕೆಗೊಳ್ಳುತ್ತವೆ. ಈ ಆಯ್ಕೆಗಾಗಿ ನಿಗದಿತ ಮಾನದಂಡವಿದ್ದು, ಪ್ರತಿ ಪ್ರಾಜೆಕ್ಟನ್ನು ತಜ್ಞರ ತಂಡ ಸೂಕ್ಷ್ಮವಾಗಿ ಪರಿಶೀಲಿಸಿ, ಆಯ್ಕೆ ಮಾಡುತ್ತದೆ.

ಸರ್ಕಾರವು ಪ್ರತಿವರ್ಷ ಈ ಅನುದಾನ ನೀಡುತ್ತಿದ್ದು, ಇದು ಎರಡನೆಯ ಗುಂಪಿನ ಆಯ್ಕೆಯಾಗಿರುತ್ತದೆ. ಮೊದಲ ಗುಂಪಿನಲ್ಲಿ ಕಾಲೇಜಿನ ಹತ್ತು ಪ್ರಾಜೆಕ್ಟ್ಸ್‌ಗಳು ಒಟ್ಟು 22 ಲಕ್ಷ ಅನುದಾನದೊಂದಿಗೆ ಆಯ್ಕೆಯಾಗಿದ್ದವು.

ಜಗತ್ತಿನಾದ್ಯಂತ ಕೋವಿಡ್‌-19 ತಂದಿಟ್ಟ ಈ ಕಠಿಣ ಪರಿಸ್ಥಿತಿಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಈ ಸಾಧನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಶಾಮನೂರು ಮಲ್ಲಿಕಾರ್ಜುನ್‌, ಬಿ.ಐ.ಇ.ಟಿ ಪ್ರಾಂಶುಪಾಲ ಡಾ. ಎಚ್‌.ಬಿ. ಅರವಿಂದ್‌ ಮತ್ತು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅವರು ಅಭಿನಂದಿಸಿದ್ದಾರೆಂದು ಬಿ.ಐ.ಇ.ಟಿ ನೈನ್‌ ಸೆಂಟರಿನ ಡಾ. ಪೂರ್ಣಿಮಾ ಮತ್ತು ಭರತ್ ತಿಳಿಸಿದ್ದಾರೆ.

error: Content is protected !!