ದಾವಣಗೆರೆ, ಜ.19- ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂಬ ಕೂಗಿನೊಂದಿಗೆ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಾದ ಯಾತ್ರೆಯು ಇಂದು ಸಂಜೆ ನಗರ ಕ್ಕಾಗಮಿಸಿತು. ಈ ವೇಳೆ ಭಕ್ತಿಪೂರ್ವಕ ವಾಗಿ ಶ್ರೀಗಳನ್ನೊಳಗೊಂಡಂತೆ ಅದ್ಧೂರಿ ಪಾದಯಾತ್ರೆಯನ್ನು ಸ್ವಾಗತಿಸಲಾಯಿತು.
ಹರಿಹರದಿಂದ ದೊಡ್ಡ ಬಾತಿಗೆ ಆಗಮಿಸಿ ನಂತರ ನಗರಕ್ಕಾಗಮಿಸಿದ ಪಾದಯಾತ್ರೆಯನ್ನು ನಗರದ ಪ್ರವೇಶ ದ್ವಾರದ ಬಳಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯ ಕುರುಬರ ಎಸ್ಟಿ ಹೋರಾಟ ಸಮಿತಿ ಖಜಾಂಚಿ ಕೆ.ಇ. ಕಾಂತೇಶ್ ಸೇರಿದಂತೆ ಸಮುದಾಯದ ಮುಖಂಡರು, ಭಕ್ತರು ಶ್ರೀಗಳಿಗೆ ಪುಷ್ಪ ಹಾರ ಸಮರ್ಪಿಸಿ ಸ್ವಾಗತಿಸಿದರಲ್ಲದೇ, ಕಾರ್ಯಕ್ರಮದ ಸ್ಥಳದವರೆಗೂ ಪಾದಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು. ನಗರ ಪ್ರವೇಶ ಮಾಡಿದ ಸಂದರ್ಭದಲ್ಲಿ ಮಹಿಳೆಯರು ಕಳಸ ದೊಂದಿಗೆ ಆರತಿ ಬೆಳಗಿ ಶ್ರೀಗಳನ್ನು, ಪಾದಯಾತ್ರಿಗಳನ್ನು ಸ್ವಾಗತಿಸಿದರು.
ಜಿಎಂಐಟಿ ಬಳಿ ಸಂಸದ ಜಿ.ಎಂ. ಸಿದ್ದೇಶ್ವರ ಶ್ರೀಗಳನ್ನು ಸ್ವಾಗತಿಸಿದರು. ಪಾಲಿಕೆ ಉಪ ಮೇಯರ್ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಇದ್ದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀಗಳ ನೇತೃತ್ವದ ಪಾದಯಾತ್ರೆಯನ್ನು ಅದ್ಧೂರಿ ಯಾಗಿ ಸಮುದಾಯದ ಮುಖಂಡರು, ಭಕ್ತರು ಪುಷ್ಪಾರ್ಚನೆ ಮಾಡಿ, ಸ್ವಾಗತಿಸಿದರು. ಆನೆಯೂ ಶ್ರೀಗಳಿಗೆ ಪುಷ್ಪ ಹಾರ ಹಾಕುವುದರ ಮೂಲಕ ಆಶೀರ್ವದಿಸಿತು. ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಶ್ರೀಗಳಿಗೆ ಭಕ್ತರು, ಸಮಾಜದ ಜನರು ಪುಷ್ಪವೃಷ್ಟಿಗೈದು ಸ್ವಾಗತಿಸಿದರು. ಈ ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ಶ್ರೀಗಳಿಗೆ ಪುಷ್ಪ ಹಾರ ಸಮರ್ಪಿಸಿ, ಆಶೀರ್ವಾದ ಪಡೆದರು.
ಕುರುಬ ಸಮುದಾಯ ಬುಡಕಟ್ಟು ಜನಾಂಗದವರು, ಎಸ್ಟಿ ಮೀಸಲಾತಿ ನಮ್ಮ ಹಕ್ಕು ಎಂಬಿತ್ಯಾದಿ ಘೋಷ ವಾಕ್ಯಗಳನ್ನು ಮೊಳಗಿಸುತ್ತಾ ಪಾದಯಾತ್ರಿಗಳು ಹಿಂಡು ಹಿಂಡಾಗಿ ಸಾಗಿದರು. ಶ್ರೀಗಳು ಅವರ ಹಿಂದೆ ಸಾಗಿದರು. ಪಾದಯಾತ್ರೆಯಲ್ಲಿ ಬೆಳ್ಳಿರಥ ಸಾರೋಟದಲ್ಲಿ ಶ್ರೀ ಕನಕ ಗುರುವಿನ ಮೂರ್ತಿ, ಡೊಳ್ಳು ಕುಣಿತ, ಗೋರಪ್ಪಗಳ ಗುಂಪು ಮೆರಗು ನೀಡಿತು. ಪಾದಯಾತ್ರಿಗಳು ಹಳದಿ ಬಣ್ಣದ ಪೇಟೆ, ಕಂಬಳಿ ಹೆಗಲ ಮೇಲೆ ಹೊತ್ತು ಸಾಗಿದ್ದು ಕಳೆ ನೀಡಿತು.
ಶ್ರೀಗಳು ನಗರ ಪ್ರವೇಶ ಮಾಡುತ್ತಿದ್ದಂತೆ ಯುವಕರು ಶ್ರೀಗಳ ಬಳಿ ತೆರಳಿ ಸೆಲ್ಫಿ ಪಡೆಯುತ್ತಿದ್ದರು. ರಸ್ತೆಯ ಒಂದು ಭಾಗದಲ್ಲಿ ಸಾಗುತ್ತಿದ್ದ ಪಾದಯಾತ್ರೆಯಲ್ಲಿ ವೃದ್ದರೂ ಊರುಗೋಲು ಹಿಡಿದು ಸಾಗುತ್ತಿದ್ದರೆ, ಯುವಕರು ಘೋಷಣೆ ಕೂಗುತ್ತಿದ್ದರು. ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.