ನೀಲಗುಂದ ಜಯಮ್ಮ ಅವರಿಗೆ `ಕದಳಿ ಶ್ರೀ’ ಪ್ರಶಸ್ತಿ ಪ್ರದಾನ

ದಾವಣಗೆರೆ,ಜ.8- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆ ಕದಳಿ ಮಹಿಳಾ ವೇದಿಕೆಯ ಪ್ರತಿಷ್ಠಿತ `ಕದಳಿ ಶ್ರೀ’ ಪ್ರಶಸ್ತಿಯನ್ನು ಸಾಮಾಜಿಕ ಸೇವಾ ಕಾರ್ಯಕರ್ತರಾದ ಶ್ರೀಮತಿ ನೀಲಗುಂದ ಜಯಮ್ಮ ಅವರಿಗೆ ಪ್ರದಾನ ಮಾಡಲಾಯಿತು.

ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮತ್ತು ಪ್ರತಿಭಾನ್ವಿತ ಮಹಿಳೆಯರಿಗೆ ಕದಳಿ ವೇದಿಕೆಯು ಪ್ರತಿ ವರ್ಷ ತನ್ನ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಕೊಡ ಮಾಡುವ `ಕದಳಿ ಶ್ರೀ’ ಪ್ರಶಸ್ತಿ ಯನ್ನು 2021ನೇ ಸಾಲಿಗೆ ನೀಲಗುಂದ ಜಯಮ್ಮ ಅವರಿಗೆ ನೀಡಲಾಗಿದೆ.

ಕೊರೊನಾ ವೈರಸ್ – 19 ಹಿನ್ನೆಲೆಯಲ್ಲಿ ಸರ್ಕಾರ ಮಾಡಿರುವ ಮಾರ್ಗಸೂಚಿಯ ಕಾರಣದಿಂದಾಗಿ ರಚಿಸಲಾಗಿದ್ದ ವಾಟ್ಸಾಪ್ ಗುಂಪಿನಲ್ಲಿ ನೀಲಗುಂದ ಜಯಮ್ಮ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿ, `ಕದಳಿ ಶ್ರೀ’ ಫಲಕ, ಫಲ -ಪುಷ್ಪ, ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕದಳಿ ವೇದಿಕೆಯ ಹಿರಿಯ ಸದಸ್ಯರುಗಳಲ್ಲೊಬ್ಬರಾದ ಶ್ರೀಮತಿ ಯಶಾ ದಿನೇಶ್ ಅವರು ತಮ್ಮ ತಾಯಿ ಶ್ರೀಮತಿ ಸಾವಿತ್ರಮ್ಮ ಮತ್ತು ತಂದೆ ರೊ. ಪ್ರೊ. ಬಿ.ಕೆ .ಸಿದ್ದಪ್ಪ (ಬಾಡಾ) ದಂಪತಿ ಹೆಸರಿನಲ್ಲಿ `ಕದಳಿ ಶ್ರೀ’ ಪ್ರಶಸ್ತಿ ದತ್ತಿಯನ್ನು ಸ್ಥಾಪಿಸಿದ್ದು, ಈ ಪ್ರಶಸ್ತಿಯು ಕದಳಿ ವೇದಿಕೆಯಲ್ಲಿ ತನ್ನದೇ ಆದ ಪ್ರತಿಷ್ಠಿತೆ ಪಡೆದುಕೊಂಡಿದೆ.

ನೀಲಗುಂದ ಜಯಮ್ಮ ಅವರಿಗೆ `ಕದಳಿ ಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಮಾತನಾಡಿದ ಅತಿಥಿ ಗಣ್ಯರು, ಶಾಲಾ ಶಿಕ್ಷಕರಾಗಿ ನಿವೃತ್ತರಾದ ನಂತರವೂ ತಮ್ಮ ಇಳಿ ವಯಸ್ಸಿನಲ್ಲೂ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವುದರ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲ್ಯಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆ ಗೌರವಾಧ್ಯಕ್ಷರಾದ ಶ್ರೀಮತಿ ಜಯಶೀಲ ಷಡಾಕ್ಷರಪ್ಪ ಅವರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇದಿಕೆಯಲ್ಲಿ ಹಿರಿಯ ಸದಸ್ಯರಾಗಿದ್ದುಕೊಂಡು ಪದಾಧಿಕಾರಿಗಳಿಗೆ ಸೂಕ್ತ ಸಲಹೆ – ಸೂಚನೆ – ಮಾರ್ಗದರ್ಶನ ಮಾಡುತ್ತಿರುವ ಜಯಶೀಲ ಹೆಚ್ಚೆನ್ನೆಸ್ ಅವರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಲಾಯಿತು.

ಇದೇ ಸಂದರ್ಭದಲ್ಲಿ 2020ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅವರನ್ನೂ ಗೌರವಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಾ. ಈಶ್ವರಪ್ಪ, 12ನೇ ಶತಮಾನದ ಅಕ್ಕಮಹಾದೇವಿ ಯಂತಹ ಧೀಮಂತ ಮಹಿಳೆ ಸ್ತ್ರೀ ಕುಲಕ್ಕೆ ಆದರ್ಶ ಎಂದು ಬಣ್ಣಿಸಿದರು. 

ಕದಳಿ ಮಹಿಳಾ ವೇದಿಕೆಯು ತನ್ನ 12ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಕೊರೊನಾ ವೈರಸ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ ಮಹಿಳಾ ವೈದ್ಯರು ಮತ್ತು ಸಮಾಜ ಸೇವಕರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಅರಿವಳಿಕೆ ತಜ್ಞರಾದ ಡಾ. ಉಮಾ ಪ್ರಸನ್ನ ಅವರು ಮಾತನಾಡಿ,  ಕದಳಿ ಮಹಿಳಾ ವೇದಿಕೆಯ ಕಾರ್ಯ ಚಟುವಟಿಕೆಗಳು, ಸನ್ಮಾನಿತರ ಸಾಮಾಜಿಕ ಸೇವೆಯನ್ನು ಮೆಲುಕು ಹಾಕಿದರಲ್ಲದೇ, ಕದಳಿ ವೇದಿಕೆ ಸಮಾಜದಲ್ಲಿ ಸದಾ ಪ್ರಜ್ವಲಿಸುವಂತಾಗಲಿ ಎಂದು ಹಾರೈಸಿದರು.

ಕದಳಿ ವೇದಿಕೆಯ ಶ್ರೀಮತಿ ಟಿ. ನೀಲಾಂಬಿಕಾ, ಶ್ರೀಮತಿ ಕಂಚಿಕೆರೆ ಸುಶೀಲಮ್ಮ, ಶ್ರೀಮತಿ ಸುವರ್ಣ ದೊಗ್ಗಳ್ಳಿ, ಶ್ರೀಮತಿ ಪಂಕಜಾ ದಯಾನಂದ್, ಶ್ರೀಮತಿ ಪ್ರಮೀಳಾ ನಟರಾಜ್, ಶ್ರೀಮತಿ ಸುಧಾ ದಿಬ್ದಳ್ಳಿ, ಶ್ರೀಮತಿ ಸುಜಾತ ರವೀಂದ್ರ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಚನ ತಂಡದ ಸದಸ್ಯರ ಪ್ರಾರ್ಥನೆಯ ನಂತರ ಶ್ರೀಮತಿ ನಿರ್ಮಲಾ ಶಿವಕುಮಾರ್ ಸ್ವಾಗತಿಸಿದರು. ಶ್ರೀಮತಿ ಕುಸುಮಾ ಲೋಕೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ರತ್ನ ಸಿ. ರೆಡ್ಡಿ, ಶ್ರೀಮತಿ ವಿಜಯಲಕ್ಷ್ಮಿ ಬಸವರಾಜ್, ಶ್ರೀಮತಿ ಪೂರ್ಣಿಮಾ ಪ್ರಸನ್ನ, ಶ್ರೀಮತಿ ವಿಜಯಾ ಚಂದ್ರಶೇಖರ್ ಅವರುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀಮತಿ ಆಶಾ ಮಹಾಬಲೇಶ್ವರ್ ವಂದಿಸಿದರು.

ಶ್ರೀಮತಿ ಸೌಮ್ಯ ಸತೀಶ್ ಸ್ಪರ್ಧಾ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. ಶ್ರೀಮತಿ ಮಮತಾ ನಾಗರಾಜ್, ಶ್ರೀಮತಿ ಚಂದ್ರಿಕಾ ಮಂಜುನಾಥ್, ಶ್ರೀಮತಿ ಗಾಯತ್ರಿ ವಸ್ತ್ರದ್, ಶ್ರೀಮತಿ ರೇಖಾ ಓಂಕಾರಪ್ಪ, ಶ್ರೀಮತಿ ವಿನೋದ ಅಜಗಣ್ಣನವರ್ ಅವರುಗಳು ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಶ್ರೀಮತಿ ಪಲ್ಲವಿ ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಶ್ರೀಮತಿ ಉಜ್ವಲಾ ಸುಭಾಷ್ ಮತ್ತು ತಂಡದವರು, ಶ್ರೀಮತಿ ಪೂರ್ಣಿಮಾ ಪ್ರಸನ್ನ ಮತ್ತು ತಂಡದವರು ವಚನ ನೃತ್ಯ, ಶ್ರೀಮತಿ ಮಮತಾ ನಾಗರಾಜ್ ಮತ್ತು ತಂಡದವರು ಕಿರು ನಾಟಕವನ್ನು ಪ್ರಸ್ತುತಪಡಿಸಿದರು.

ಕದಳಿ ವೇದಿಕೆಗೆ 2021ನೇ ಸಾಲಿನ ಗೌರವಾಧ್ಯಕ್ಷರಾಗಿ ಶ್ರೀಮತಿ ಶಂಶಾದ್ ಬೇಗಂ, ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ಆಶಾ ಮಹಾಬಲೇಶ್ವರ್ ಆಯ್ಕೆಯಾಗಿದ್ದು, ಶ್ರೀಮತಿ ಕೆ.ಆರ್. ವಸಂತ ಪದಗ್ರಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

error: Content is protected !!