ದಾವಣಗೆರೆ, ಜ. 7- ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ ಸನಾತನ ಪದದ ಬಳಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರದ ಈ ಜಾಹೀರಾತಿನಲ್ಲಿ `ಸನಾತನ ಪ್ರಗತಿಪರ’ ಎಂದು ಕರೆದಿರು ವುದು ಸದ್ಯ ಬಸವ ತತ್ವ ಪಾಲಕರು, ಪ್ರಗತಿ ಪರರು, ಚಿಂತಕರ ಆಕ್ರೋಶಕ್ಕೆ ಕಾರಣವಾಗಿದೆ.
ವೈದಿಕತೆ ಮತ್ತು ಸನಾತನ ಆಚರಣೆ ಗಳನ್ನು ಬದುಕಿನುದ್ದಕ್ಕೂ ಕಟುವಾಗಿ ವಿರೋಧಿಸುತ್ತಲೇ ಬಂದ ಬಸವಣ್ಣ ನವರನ್ನು, ಬಸವ ತತ್ವವನ್ನು ಸನಾತನ ತತ್ವ ಎಂದು ಪ್ರತಿಪಾದಿಸಲು ಹೊರಟಿದ್ದಾರೆ ಎಂದು ಬಸವ ತತ್ವ ಪ್ರತಿ ಪಾದಕರು ಕಿಡಿ ಕಾರಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲೂ ಈ ಕುರಿತು ಆಕ್ರೋಶ ಭುಗಿಲೆದ್ದಿದ್ದು, ಬಸವಣ್ಣನನ್ನು ಹೇಗೆ ಸನಾತನ ಪ್ರಗತಿಪರ ಎಂದು ಬಿಂಬಿಸುತ್ತೀರಿ ? ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ.
ಹಿರಿಯ ಸಾಹಿತಿ ಗೊ.ರು ಚನ್ನಬಸಪ್ಪ, ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯಲ್ಲ. `ಶರಣರ ಚಿಂತನೆಯ ಮರುಸೃಷ್ಟಿ’ ಅಂತ ಆಗಬೇಕಿತ್ತು ಎಂದಿದ್ದಾರೆ.
ವಾಕ್ಯವೇ ವಿಚಿತ್ರ- ಜಾಮದಾರ್ : ಸರ್ಕಾರದ ಜಾಹೀರಾತಿನಲ್ಲಿ `ಸನಾತನ ಪ್ರಗತಿಪರ ಚಿಂತನೆಯ ಮರು ಸೃಷ್ಟಿ’ ವಾಕ್ಯ ವಿಚಿತ್ರವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಹೇಳಿದ್ದಾರೆ.
‘ಅನುಭವ ಮಂಟಪ ನಿರ್ಮಾಣದ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ನೆರವೇರಿಸುವ ಜಾಹೀರಾತು ನೋಡಿ ಸಂತಸವಾಯಿತು. ಆದರೆ, ಆರಂಭದಲ್ಲೇ ಎದ್ದು ಕಾಣುವ ‘ಸನಾತನ’ ಎಂಬ ಪದಬಳಕೆ ಗಮನಿಸಿದಾಗ ಮೊಸರಲ್ಲಿ ಕಲ್ಲು ಸಿಕ್ಕಂತಾಯಿತು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿ ಪೂಜೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಉಲ್ಲೇಖವಾಗಿರುವ ‘ಸನಾತನ’ ಪದಕ್ಕೆ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮೇಲಿನಂತೆ ನುಡಿದರು.
‘ಶರಣರದು ನಡೆ, ನುಡಿ ಒಂದಾದ ಪ್ರಾಯೋಗಿಕ ಮತ್ತು ವೈಚಾರಿಕ ಧರ್ಮ. ಅವರ ಹೋರಾಟ ಸನಾತನ ಗೊಡ್ಡು ಪರಂಪರೆಗಳ ವಿರುದ್ಧ ನಡೆದಿದೆ. ವೇದ, ಶಾಸ್ತ್ರ, ಪುರಾಣ, ಆಗಮಗಳ ವಿರುದ್ಧ ಧ್ವನಿ ಎತ್ತಿದ್ದನ್ನು ವಚನಗಳಲ್ಲಿ ಕಾಣಬಹುದು. ಈ ಸನಾತನ ಪರಂಪರೆಯವರೇ ಕಲ್ಯಾಣದಲ್ಲಿ ರಕ್ತಕ್ರಾಂತಿಯ ಬೀಜ ಬಿತ್ತಿ ವಚನ ಸಾಹಿತ್ಯವನ್ನು ಭಸ್ಮ ಮಾಡಲು ಮುಂದಾಗಿದ್ದು. ಅದರ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ’ ಎಂದು ಶ್ರೀಗಳು ಕಿಡಿ ಕಾರಿದ್ದಾರೆ.
‘ಅನುಭವ ಮಂಟಪ ಸನಾತನಿಗಳ ಆಡಳಿತಕ್ಕೆ ಸಿಕ್ಕರೆ ಬಸವಾದಿ ಶಿವಶರಣರ ಸಮಾಜೋಧಾರ್ಮಿಕ ಚಿಂತನೆಯನ್ನು ಹಿಸುಕಿ ಮತ್ತೆ ಪುರೋಹಿತ ಪರಂಪರೆಯನ್ನು ಬೆಳೆಸಿದಂತೆ ಆಗುತ್ತದೆ. ಇಂತಹ ದೋಷಗಳು ಮುಂದೆ ಆಗದಂತೆ ಬಸವಾನುಯಾಯಿಗಳು ಜಾಗರೂಕರಾಗಿರಬೇಕಾಗಿದೆ. ಸರ್ಕಾರ ಸಹ ಶರಣರ ಆಚಾರ ವಿಚಾರಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಟೆಂಡರ್ ಆಗದೆ, ಕಾಮಗಾರಿಗೆ ಒಪ್ಪಿಗೆಯನ್ನೂ ಪಡೆಯದೆ ತರಾತುರಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿದೆ ಎಂದು ಅವರು ಟೀಕಿಸಿದ್ದಾರೆ.
ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಜನವರಿ 2 ಮತ್ತು 3 ರಂದು ಜಾಹೀರಾತು ನೀಡಲಾಗಿತ್ತು. ಜನವರಿ 6 ರಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಹತ್ತಿರ ಬರುತ್ತಿರುವುದರಿಂದ ಚುನಾವಣಾ ಉದ್ದೇಶದಿಂದ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಗೊ.ರು.ಚ ಆಕ್ಷೇಪ: ಇದು ಸನಾತನ ಅಲ್ಲ, ಶರಣರ ಪ್ರಗತಿಪರ ಚಿಂತನೆಯ ಮರುಸೃಷ್ಟಿಯ ಅನುಭವ ಮಂಟಪ ನಿರ್ಮಾಣವಾಗುತ್ತಿದೆ ಎಂದು ಮುದ್ರಿತವಾಗಬೇಕಾಗಿತ್ತು ಎಂದು ನೂತನ ಅನುಭವ ಮಂಟಪ ರೂಪುರೇಷೆ ತಯಾರಿಕ ತಜ್ಞರ ಸಲಹಾ ಸಮಿತಿ ಅಧ್ಯಕ್ಷರೂ, ಹಿರಿಯ ಸಾಹಿತಿಗಳೂ ಆದ ಗೊ.ರು. ಚನ್ನಬಸಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿಯೇ ಗೊ.ರು.ಚ. ಅವರ ಸನಾತನ ಪದಕ್ಕೆ ಉಂಟಾದ ತೀಕ್ಷ್ಣ ಆಕ್ಷೇಪಕ್ಕೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.