ಹಸಿರು ನಗರ, ಜಿಲ್ಲೆಯ ಸುಸ್ಥಿರ ಅಭಿವೃದ್ಧಿ

ಹಸಿರು ನಗರ, ಜಿಲ್ಲೆಯ ಸುಸ್ಥಿರ ಅಭಿವೃದ್ಧಿ - Janathavaniಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಆಶಯ

ದಾವಣಗೆರೆ, ಜ. 5 – ಸ್ಮಾರ್ಟ್ ಸಿಟಿ ಎಂದರೆ ಸಿಮೆಂಟ್, ಕಬ್ಬಿಣದ ಕಟ್ಟಡಗಳ ನಿರ್ಮಾಣವಲ್ಲ. ಅದು ನೈಜವಾಗಿ ಹಸಿರಿನಿಂದ ಕೂಡಿರುವ ನಗರ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂ ಗಣದಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ ಕುರಿತಾದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೀವ ವೈವಿಧ್ಯತೆಗೆ ಪೂರಕವಾಗಿ ಬಯೋಗ್ಯಾಸ್ ತಯಾರಿಸುವ ಘಟಕಗಳನ್ನು ನಿರ್ಮಿಸಲು ಈಗಾಗಲೇ ತರಬೇತಿ ನೀಡಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸುಲಭವಾಗಲಿದ್ದು, ಸಾಕಷ್ಟು ಇಂಧನ ಕೂಡ ದೊರೆಯಲಿದೆ. ಹೋಟೆಲ್‍ಗಳು, ಹಾಸ್ಟೆಲ್‍ಗಳು, ಕಲ್ಯಾಣ ಮಂಟಪಗಳಲ್ಲಿ ಉಳಿ ಯುವ ತ್ಯಾಜ್ಯಗಳಿಂದ ಬಯೋಗ್ಯಾಸ್ ಉತ್ಪಾದಿ ಸುವುದರಿಂದ ಪರಿಸರ ರಕ್ಷಣೆಗೂ ಅನುಕೂಲ ವಾಗಲಿದೆ ಎಂದರು. ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ಹಾಗೂ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟಗಳಲ್ಲಿ ಈಗಾಗಲೇ ರಚನೆಯಾಗಿರುವ ಸಮಿತಿಗಳು ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ವರದಿ ಕೂಡ ನೀಡಿವೆ. ಈ ಕೆಲಸಗಳು ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಮೇ 22 ನ್ನು ಜೀವ ವೈವಿಧ್ಯ ದಿನವನ್ನಾಗಿ ಎಲ್ಲೆಡೆ ಆಚರಿಸುವ ಮೂಲಕ ಆ ವರ್ಷದಲ್ಲಿ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇ ಕೆಂಬ ನೀಲನಕ್ಷೆಯನ್ನು ತಯಾರಿಸಿಕೊಂಡು ಜೀವ ವೈವಿಧ್ಯ ತಾಣಗಳನ್ನು ಪಂಚಾಯಿತಿ ಹಂತದಲ್ಲಿಯೇ ಗುರುತಿಸಿ ಸ್ಥಳೀಯ ಬೆಟ್ಟ, ಗುಡ್ಡ, ಕೆರೆಗಳನ್ನು ಅಭಿವೃದಿಪಡಿಸುವ ಮೂಲಕ ಜೀವ ವೈವಿಧ್ಯ ತಾಣಗಳನ್ನಾಗಿ ಮಾಡಬಹುದಾಗಿದೆ. 

ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಕೀಟ ನಾಶಕಗಳನ್ನು ಬಳಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಕೃಷಿ ಅಧಿಕಾ ರಿಗಳು ಈ ಬಗ್ಗೆ ಗಮನ ಹರಿಸಬೇಕು. ನಿಷೇಧಿತ ಕೀಟನಾಶಕಗಳು ಅಂಗಡಿಗಳಲ್ಲಿ ಮಾರಾಟವಾ ಗದಂತೆ ಹಾಗೂ ನಿಷೇಧಿತ ಕೀಟ ನಾಶಕಗಳು ಬೇರೆ ಬ್ರಾಂಡ್ ಹಾಗೂ ಬೇರೆ ಹೆಸರುಗಳಿಂದ ಮಾರುಕಟ್ಟೆಗೆ ಬರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಜೀವ ವೈವಿಧ್ಯ ದಾಖಲಾತಿ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಜೀವ ವೈವಿಧ್ಯ ಹಾಟ್‍ಸ್ಪಾಟ್‍ಗಳಿದ್ದು, ಕೊಮಾರನಹಳ್ಳಿ ಗುಡ್ಡ ಅತ್ಯಂತ ಮೌಲ್ಯಯುತ ಜೀವ ವೈವಿಧ್ಯವನ್ನು ಹೊಂದಿದೆ. ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಗಿಡಮರಗಳು ಕಂಡು ಬರುತ್ತಿದ್ದ ಗುಡ್ಡದಲ್ಲಿ ಇತ್ತೀಚಿನ ದಿನಗಳಲ್ಲಿ ಜೋಳದ ಬೆಳೆ ಕಂಡುಬರುತ್ತಿದೆ. ಹಾಗಾಗಿ ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ದಾವಣಗೆರೆ ಸಮೀಪವಿರುವ ಬಾತಿ ಗುಡ್ಡವನ್ನು ಅಭಿವೃದ್ದಿಪಡಿಸಿದರೆ ತುಮಕೂರಿನ ಸಿದ್ದರ ಬೆಟ್ಟದಂತೆ ಅಭಿವೃದ್ದಿಪಡಿಸಬಹುದಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯ ಆವರಣದಲ್ಲಿ 10 ಎಕರೆ ಪ್ರದೇಶವಿದ್ದು, ಈಗಾಗಲೇ ಅಲ್ಲಿನ ಸಿಬ್ಬಂದಿ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ ಎಂದು ಹೇಳಿದರು.

ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ಗುಡ್ಡಗಳ ಸುತ್ತ ಟ್ರಂಚ್ ನಿರ್ಮಿಸಿ, ಅದರ ಬದುಗಳ ಮೇಲೆ ಗಿಡಗಳನ್ನು ಬೆಳೆಸಲಾಗುತ್ತಿದೆ. ಜಗಳೂರು ಹೊರ ವಲಯದಲ್ಲಿ ಹೆಚ್ಚಿನ ಅರಣ್ಯೀಕರಣ ಆಗುತ್ತಿದೆ. ಚನ್ನಗಿರಿಯ ದಾಗಿನಕಟ್ಟೆ, ದಿದ್ದಿಗಿ, ಹರಿಹರದ ಸಾರಥಿ ಈ ಪ್ರದೇಶಗಳಲ್ಲಿ ಹಸಿರನ್ನು ಕಾಪಾಡಿ, ನರೇಗಾ ಯೋಜನೆಯಡಿ ಹೆಚ್ಚು ಗಿಡಗಳನ್ನು ಬೆಳೆಸಲಾಗುತ್ತಿದೆ. ಕೇಂದ್ರ ಸರ್ಕಾರದ ದೀನ್ ದಯಾಳ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ಅರಣ್ಯ ಪ್ರದೇಶವನ್ನು ಗುರುತಿಸಿ, ಜಿಲ್ಲಾ ಪಂಚಾಯ್ತಿಗೆ ಪ್ರಶಸ್ತಿ ದೊರೆತಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

error: Content is protected !!