ದಾವಣಗೆರೆ, ಜ.4- 4 ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದ ಬಳಿ ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು, ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 18 ವರ್ಷಗಳಿಂದ ಮಧ್ನಾಹ್ನದ ಉಪಹಾರ ಯೋಜನೆಯಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸು ತ್ತಿದ್ದಾರೆ. ಆದರೆ, ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ಈ 4 ತಿಂಗಳ ವೇತನವನ್ನು ಬಿಡುಗಡೆ ಮಾಡಿಲ್ಲ. ವೇತನವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ವೇತನ ಬಿಡುಗಡೆಯಾಗದಿರು ವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಬಿಸಿಯೂಟ ತಯಾರಕರು ಅಳಲಿಟ್ಟರು.
ಬಿಸಿಯೂಟ ತಯಾರಕರಿಗೆ ಕೂಡಲೇ 4 ತಿಂಗಳ ವೇತನ ಬಿಡುಗಡೆ ಮಾಡಬೇಕು. ಸರ್ಕಾರ ಕನಿಷ್ಟ ಕೂಲಿ ಜಾರಿಗೊಳಿಸಬೇಕು. ಬಿಸಿಯೂಟ ತಯಾರಕರ ಕಲ್ಯಾಣ ಮಂಡಳಿ ಜಾರಿಗೆ ತರಬೇಕು. ಪಿಎಫ್, ಇಎಸ್‌ಐ ಯೋಜನೆ ಜಾರಿಗೆ ತರಬೇಕು. ಬಿಸಿಯೂಟ ತಯಾರಕರಿಗೆ ಅಪಘಾತ ಮತ್ತು ಮರಣ ಪರಿಹಾರ 5 ಲಕ್ಷ ರೂ. ಹಣ ಜಾರಿಗೆ ತರಬೇಕು. ಅಡುಗೆ ತಯಾರಕನ್ನು ಶಾಲಾ ಸಿಬ್ಬಂದಿ ಯನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ಅಡುಗೆ ಸಿಬ್ಬಂದಿಯವರ ಸಂಖ್ಯೆಯನ್ನು ಮೂಲ ಕೈಪಿಡಿಯಲ್ಲಿರುವಂತೆ ಪುನಃ ನಿಗದಿಪಡಿಸಬೇಕು. ಬೇಸಿಗೆ ರಜೆ ಹಾಗೂ ದಸರಾ ರಜೆ ಜಾರಿಗೊಳಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನಂದು ಸಂಬಳ ಕೊಡಬೇಕು. 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರಿಗೆ ಮಾಸಿಕ 5 ಸಾವಿರ ನಿವೃತ್ತಿ ಪಿಂಚಣಿ ಕೊಡಬೇಕು ಮತ್ತು 2 ಲಕ್ಷ ರೂ. ಇಡುಗಂಟು ಹಣ ಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ರಾಜ್ಯ ಖಜಾಂಚಿ ಬೆಳಗೆರೆ ರುದ್ರಮ್ಮ, ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಸಂಚಾಲಕ ಗದಿಗೇಶ್ ಪಾಳೇದ, ಆವರಗೆರೆ ವಾಸು, ಸತೀಶ್ ಅರವಿಂದ್, ಮಳಲ್ಕೆರೆ ಜಯಮ್ಮ, ಸಿ. ರಮೇಶ, ಲಲಿತಮ್ಮ, ಜಯಮ್ಮ, ಮಂಗಳಗೌರಿ, ಅನ್ನಪೂರ್ಣ, ಸರೋಜ, ರಾಧಮ್ಮ, ವನಜಾಕ್ಷಮ್ಮ, ಅರುಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.