ಜಕಣಾಚಾರಿ ಸಂಸ್ಮರಣೋತ್ಸವ ಜಯಂತಿ ಆಚರಣೆ ಜಾರಿಗೆ ಶ್ಲ್ಯಾಘನೀಯ

ಜಕಣಾಚಾರಿ ಸಂಸ್ಮರಣೋತ್ಸವ ಜಯಂತಿ ಆಚರಣೆ ಜಾರಿಗೆ ಶ್ಲ್ಯಾಘನೀಯ - Janathavaniಹರಿಹರ, ಜ.1- ಅಮರಶಿಲ್ಪಿ ಜಕಣಾಚಾರಿ ಕೆಲವೊಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ. ಅವರು ಜಗತ್ತಿನ ಮಹಾನ್ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅಂತಹ ಚೇತನಕ್ಕೆ ಸರ್ಕಾರದಿಂದ ಸಂಸ್ಮರಣೋತ್ಸವ ನಡೆಸುವ ಕಾರ್ಯವನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಕಾರ್ಯ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿರುವ ಬಿರ್ಲಾ ಕಲ್ಯಾಣ ಮಂಟಪ ದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಇಂದು ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ವಿಶ್ವಕರ್ಮ ಸಮಾಜದ ಜಕಣಾಚಾರಿ ಯವರ ಕೆತ್ತನೆಯ ಕಲೆಗಾರಿಕೆ ಕೆಲಸವು ವಿಶ್ವವೇ ಮೆಚ್ಚುವಂತೆ ಮಾಡಿದೆ. ಅವರ ಕಾಲದಲ್ಲಿ ಬೇಲೂರು, ಹಳೇಬೀಡು, ಹರಿಹರೇಶ್ವರ ಮುಂತಾದ ದೇವಸ್ಥಾನಗಳಲ್ಲಿ ವಿದೇಶಿಯರು ಹೆಚ್ಚಿನ ದಿನಗಳು ಉಳಿದುಕೊಂಡು ಇಲ್ಲಿನ ಇತಿಹಾಸದ ಬಗ್ಗೆ ತಮ್ಮ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದು ನಮ್ಮ ದೇಶದ ಧರ್ಮ ಪರಂಪರೆಯ ಮತ್ತು ಸಂಸ್ಕೃತಿಗಳ ಶಕ್ತಿಯನ್ನು ಅವರ ದೇಶದ ಜನರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಾರೆ. ಇದನ್ನು ಗಮನಿಸಿ ರಾಜ್ಯದ ಮುಖ್ಯಮಂತ್ರಿಗಳು ಜಕಣಾಚಾರಿ ಸಂಸ್ಮರಣೋತ್ಸವ ಜಯಂತಿಯನ್ನು ಆಚರಣೆಗೆ ತಂದಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಸಮಾಜದ ಮುಂದಿನ ಪೀಳಿಗೆಗೆ ಜಕಣಾಚಾರಿಯವರ ಕಲೆಯನ್ನು ತಿಳಿಸುವ ಮೂಲಕ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸವನ್ನು ಸಮಾಜದ ಮುಖಂಡರು ಮಾಡುವಂತೆ ಹೇಳಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿ ಹೆಚ್ಚಾಗಿ ಬಡವರು ಇರುವುದರಿಂದ ಅವರು ಮಕ್ಕಳಿಗೆ ವಿದ್ಯಾಭ್ಯಾಸ ವನ್ನು ನೀಡಿ ಆಸ್ತಿಯನ್ನು ಮಾಡುವುದು ಕಷ್ಟಕರ. ಆಗಾಗಿ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನು ಆಸ್ತಿಯನ್ನಾಗಿ ಮಾಡುವಂತೆ ಮತ್ತು ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನ ಕಟ್ಟಡದ ನಿರ್ಮಾಣ ಮಾಡುವುದಕ್ಕೆ ನಿವೇಶನ ಕೊಡಿಸುವ ಭರವಸೆಯನ್ನು ನೀಡಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಸರ್ಕಾರ ಸಮಾಜಕ್ಕೆ ಒಂದು ಜಯಂತಿ ಆಚರಣೆಯನ್ನು ಜಾರಿಗೆ ತಂದು ಸಮಾಜದ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿನ ಬಡವರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಭಾವಿಸಲಾಗಿದ್ದು, ಆದರ ಜೊತೆಯಲ್ಲಿ ಸಮಾಜದ ಮತಗಳನ್ನು ತಮ್ಮ ಪಕ್ಷಗಳಿಗೆ ಪಡೆಯಲು ಜಯಂತಿ ಆಚರಣೆ ವ್ಯವಸ್ಥೆ ನಡೆಯುತ್ತದೆ. ಇದರಿಂದ ವರ್ಷದಲ್ಲಿ ಶೇ. 40 ರಷ್ಟು ಸರ್ಕಾರಿ ರಜೆಗಳು ಜಯಂತಿ ಆಚರಣೆಗೆ ಸಿಮೀತವಾಗಿವೆ. ಆದ್ದರಿಂದ ಮಹಾತ್ಮರ ಜಯಂತಿ ದಿನದಂದು ಒಂದು ಗಂಟೆ ಜಯಂತಿ ಆಚರಣೆ ಮಾಡಿ ನಂತರದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ವ್ಯವಸ್ಥೆ ಬರಬೇಕು‌ ಎಂದು ತಿಳಿಸಿದರು. 

ವಿಶ್ವಕರ್ಮ ಸಮಾಜದವರು ಮಾಡುವ ಕಾಯಕದಿಂದ ರೈತನ ಬದುಕು ಹಸನಾಗುತ್ತದೆ, ಮಹಿಳೆಯರು ಹಾಕಿಕೊಳ್ಳುವ ಆಭರಣದಿಂದ ಸೌಂದರ್ಯ ಹೆಚ್ಚಾಗುತ್ತದೆ. ಜಕಣಾಚಾರಿ ಅವರು ತಮ್ಮ ಪವಿತ್ರ ಮನಸ್ಸಿಗೆ ಮತ್ತು ಪ್ರಾಮಾಣಿಕ ಸೇವೆಯನ್ನು ಮಾಡುವ ಮೂಲಕ ನಾಡಿನಲ್ಲಿ ಇಂದಿಗೂ ಸಹ ಪ್ರಸಿದ್ಧರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಉಪನ್ಯಾಸಕರಾಗಿ ಶಿವಮೊಗ್ಗದ ಭಾಸ್ಕರ ಆಚಾರ್‌ ಮತ್ತು ಸಮಾಜದ ಅಧ್ಯಕ್ಷ ಎಸ್. ರುದ್ರಚಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ.ಆರ್. ಬಡಿಗೇರ, ರಾಜಾಚಾರ್, ಲಕ್ಷ್ಮಣಚಾರ್, ಪರಿಸರ ಪ್ರೇಮಿ ವೀರಾಚಾರಿ, ಲಕ್ಷ್ಮಿ ರಾಜಾಚಾರ್, ನೇತ್ರಾವತಿ ಪ್ಯಾಟಿ, ನಾಗರಾಜ್ ಆಚಾರ್‌,  ಜನಾರ್ಧನ್ ಪ್ಯಾಟಿ, ಸುರೇಂದ್ರಚಾರ್ ಮತ್ತು ಇತರರು ಹಾಜರಿದ್ದರು.

error: Content is protected !!