ಸಂಘಟನೆಯಿಂದ ಸಮಾಜಕ್ಕೆ ಉತ್ಸಾಹ, ಶಕ್ತಿ

ಆರ್.ಎಸ್.ಎಸ್. ರೀತಿಯಲ್ಲಿ ಶಿಸ್ತಿನ ಸಂಘಟನೆಗೆ ವಚನಾನಂದ ಶ್ರೀಗಳ ಕರೆ

ಹರಿಹರ, ಮಾ.6- ಪಂಚಮಸಾಲಿ ಸಮಾಜವು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸಂಘಟನೆಯಾದರೆ, ಸಮಾಜಕ್ಕೆ ಉತ್ಸಾಹ ಮತ್ತು ಶಕ್ತಿ ಹೆಚ್ಚಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಗುರು ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮಿಗಳು ಹೇಳಿದರು.

ನಗರದ ಪಂಚಮಸಾಲಿ ಗುರು ಪೀಠದ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಸ್ವಯಂ ಸಂಘಟನೆ ತರಹದಲ್ಲಿ ನಮ್ಮ ಸಮಾಜ ಶಿಸ್ತಿನಿಂದ ಸಂಘಟನೆ ಮಾಡುವುದಕ್ಕೆ ಮುಂದಾಗಬೇಕು. ಮಠಕ್ಕೆ ಬರುವ ಭಕ್ತರು ಮುಂದಿನ ದಿನಗಳಲ್ಲಿ ನಮಗೆ ಉದ್ಯೋಗದ ಜೊತೆಗೆ ಯಾವುದೇ ಕೆಲಸವನ್ನು ತೆಗೆದುಕೊಂಡು ಬರುವುದಕ್ಕಿಂತ ಮುಂಚೆಯೇ ರಾಜ್ಯ ಅಧ್ಯಕ್ಷರ ಬಳಿ ಮನವಿ ಪತ್ರವನ್ನು ಕೊಟ್ಟು ನಮ್ಮಲ್ಲಿ ಬರಬೇಕು. ಬರುವ ಸಮಯದಲ್ಲಿ ನಮಗೆ ಮುಂಚಿತವಾಗಿ ತಿಳಿಸಿ ಭೇಟಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾವು ಇನ್ನು ಮುಂದೆ ಯಾವುದೇ ರೀತಿಯ ಕೆಲಸಗಳಿಗೆ ಲೆಟರ್ ಕೊಡುವುದಿಲ್ಲ. ಇದನ್ನು ಸಮಾಜದ ರಾಜ್ಯಾಧ್ಯಕ್ಷ  ಜಿ.ಪಿ. ಪಾಟೀಲ್ ಮಾಡುತ್ತಾರೆ ಎಂದು ಹೇಳಿದರು.

ಬರುವ ಏಪ್ರಿಲ್ 23-24 ರಂದು ಹರಜಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಹರ ಜಾತ್ರೆಯ ಸಮಯದಲ್ಲಿ ದೇಶದ 100 ಕಾರ್ಖಾನೆಗಳು ಮುಂದೆ ಬಂದಿದ್ದು, ಅದರಲ್ಲಿ ಸಮಾಜದ 5000 ಯುವಕರಿಗೆ ಉದ್ಯೋಗ ಕೊಡಿಸಲಾಗುತ್ತದೆ ಎಂದರು. ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು ಮಾತನಾಡಿ, ಅಧಿಕಾರ ಪಡೆದವರು ಮನೆಯಲ್ಲಿ ಕುಳಿತುಕೊಳ್ಳದೆ ಪ್ರತಿ ತಿಂಗಳು ವ್ಯಕ್ತಿ ವಿಕಸನ ಶಿಬಿರ ಮಾಡಬೇಕು ಮತ್ತು ಮಠದ ಆವರಣದಲ್ಲೂ ಸಹ ತಾಲ್ಲೂಕು ಮಟ್ಟದ ವಿಕಸನ ಶಿಬಿರ ಆಯೋಜಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಧರ್ಮದರ್ಶಿ ಬಿ. ಸಿ. ಉಮಾಪತಿ ಮಾತನಾಡಿ, ಪಂಚಮಸಾಲಿ ಸಮಾಜ ಕಟ್ಟಿದ ನಂತರದಲ್ಲಿ, ಸಮಾಜದಲ್ಲಿ ಜನತೆಗೆ ಉತ್ತಮ ಗೌರವ ಸಿಗುತ್ತಾ, ಸಾಗಿದೆ. ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಸಮಾಜದ ಸಂಘಟನೆ ಮಾಡಿ ಸಮಾಜದ ಋಣವನ್ನು ತೀರಿಸುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ರಾಜ್ಯ ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮಾಜದ ವಚನಾನಂದ ಶ್ರೀಗಳು ಹೈ ಫೈ ಸ್ವಾಮಿಗಳು ಹೌದು ಮತ್ತು ಹೈ ಇನ್‌ಫ್ಲುಯೆನ್ಸ್ ಹೊಂದಿರುವ ಸ್ವಾಮಿಗಳೂ ಹೌದು. ಶ್ರೀಗಳಲ್ಲಿ ಇರುವ  ಶಕ್ತಿಯನ್ನು ಬಳಸಿಕೊಂಡು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢ ಸಮಾಜವನ್ನು ಕಟ್ಟಲು ಶ್ರಮಿಸುವುದಾಗಿ ಹೇಳಿದರು. 

ನೂತನ ರಾಜ್ಯ ಅಧ್ಯಕ್ಷ ಜಿ.ಪಿ. ಪಾಟೀಲ್ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಅವುಗಳ ಜವಾಬ್ದಾರಿಯನ್ನು ಆಯಾ ತಾಲ್ಲೂಕಿನ ಅಧ್ಯಕ್ಷರು ಮತ್ತು ಸದಸ್ಯರಿಗೆ ವಹಿಸಲಾಗುತ್ತದೆ ಮತ್ತು ಸಮಾಜದ ಸಂಘಟನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದು ಹೇಳಿದರು.

ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಸಂತ್ ಹುಲ್ಲತ್ತಿ ಮಾತನಾಡಿ, ಸಮಾಜ ಒಳ ಜಗಳ, ಸ್ವಯಂ ಸ್ವಾರ್ಥ ಕಿತ್ತಾಟ ಮತ್ತು ಪ್ರತಿಷ್ಠೆ ಇದರಿಂದ ಹೊರ ಬಂದರೆ ಮಾತ್ರ ಸಮಾಜದ ಒಳಿತಿಗಾಗಿ ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಿಜಾಪುರ ಜಿಲ್ಲಾ ಅಧ್ಯಕ್ಷ ಗುರುಶರಣ ನಿರಾಣಿ ಹಾಗೂ ನಾಗೇಂದ್ರ ಕಡಕೋಳ, ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ , ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವನಗೌಡ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಪಿ.ಡಿ. ಶಿರೂರು, ನಿಡೋಣಿ, ಜೋತಿ ಪ್ರಕಾಶ್, ಎನ್. ಜಿ. ನಾಗನಗೌಡ್ರು, ರಶ್ಮಿ ಕುಂಕದ, ಕರಿಬಸಪ್ಪ ಕಂಚಿಕೇರಿ ಹರಿಹರ, ಪಟ್ಟಣಶೆಟ್ಟಿ ಹೊನ್ನಾಳಿ, ಗುತ್ತೂರು ಕರಿಬಸಪ್ಪ, ಪ್ರಸನ್ನ ಹೊನ್ನಾಳಿ ಹಾಗೂ  ವಿವಿಧ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರು ಮತ್ತು ತಾಲ್ಲೂಕು ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು. 

ನಾನು ಇತರೆ ಸ್ವಾಮಿಗಳ ತರಹದಲ್ಲಿ ಬೀದಿಯಲ್ಲಿ ಓಡಾಟ ಮಾಡಿ ಮೀಸಲಾತಿ ನೀಡಿ ಎಂದು ಹೋರಾಟ ಮಾಡುವ ಸ್ವಾಮಿಯಲ್ಲ. ಮೀಸಲಾತಿಯನ್ನು ಪಡೆಯುವುದಕ್ಕೆ ಕಾನೂನಾತ್ಮಕ ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಶ್ರೀ ವಚನಾನಂದ ಸ್ವಾಮಿಗಳು,

error: Content is protected !!