ನ್ಯಾ. ಮಲ್ಲಿಕಾರ್ಜುನ ಗೌಡ ವಜಾಕ್ಕೆ ಆಗ್ರಹ

ಬಹುಜನ ಸಮಾಜ ಪಕ್ಷದಿಂದ ಧರಣಿ ಸತ್ಯಾಗ್ರಹ

ದಾವಣಗೆರೆ, ಫೆ.28- ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಅವಮಾನ ಮಾಡಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ, ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಸರ್ಕಾರಗಳು ಸಂವಿಧಾನಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲು ವಿಫಲವಾಗಿವೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಮುಖಂಡ ಡಿ. ಹನುಮಂತಪ್ಪ ಆಕ್ಷೇಪಿಸಿದರು.

ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಕಳೆದ 50 ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿದ್ದು ಅವರಿಗೆ ಸಾಗುವಳಿ ಚೀಟಿ ನೀಡಬೇಕು. ಸರ್ಕಾರಿ ಜಮೀನನಲ್ಲಿ ಮನೆ, ಗುಡಿಸಲು ಕಟ್ಟಿಕೊಂಡಿರುವ ಕುಟುಂಬಗಳಿಗೆ ಸಕ್ರಮ ಮಾಡಿಕೊಡಬೇಕು. ಗೋಮಾಳವನ್ನು ಖಾಸಗಿಯವರಿಗೆ ನೀಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಂ. ಚಂದ್ರಪ್ಪ, ನಾಗರಾಜ್, ಹೆಚ್. ಮಲ್ಲೇಶ್, ಹೆಚ್.ಸಿ. ಮಲ್ಲಪ್ಪ,  ವೆಂಕಟೇಶ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!