ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆಗೆ ಆದ್ಯತೆ ನೀಡಲು ಸದಸ್ಯರ ಸಲಹೆ
ದಾವಣಗೆರೆ, ಫೆ. 17- ಬರುವ ಮಾರ್ಚ್ 13 ರಿಂದ 16ರವರೆಗೆ ನಡೆಯಲಿರುವ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪಾಲಿಕೆಯಿಂದ ನೀರು, ಸ್ವಚ್ಛತೆ, ಬೀದಿ ದೀಪ, ಮೊಬೈಲ್ ಟಾಯ್ಲೆಟ್, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ, ಜಾತ್ರೆ ಸಂಭ್ರಮದಿಂದ ನಡೆಯಲು ನೆರವು ನೀಡಲಾಗು ವುದು ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಪ್ರತಿ ಬಾರಿ ಜಾತ್ರಾ ಮಹೋತ್ಸವದಂದು ಪಾಲಿಸುತ್ತಿದ್ದ ಜವಾಬ್ದಾರಿಯನ್ನು ಈ ಬಾರಿಯೂ ಪಾಲಿಕೆ ವಹಿಸಲಿದೆ ಎಂದರು.
ಪಾಲಿಕೆ ಆಯುಕ್ತರು, ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಸದ ಸ್ಯರು ದೇವಸ್ಥಾನದ ಸುತ್ತಲಿನ ಪ್ರದೇಶ ವೀಕ್ಷಿಸಿ, ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಳ್ಳಲಿ ದ್ದಾರೆ ಎಂದು ಹೇಳಿದರು.
ಸದಸ್ಯ ಚಮನ್ ಸಾಬ್, ಕೊರೊನಾ ನಾಲ್ಕನೇ ಅಲೆ ಬರುವ ಸಂಭವವಿದೆ ಎಂದು ಹೇಳಲಾ ಗುತ್ತಿದೆ. ಅದು ದಾವಣಗೆರೆ ಯಲ್ಲಾದ ಜಾತ್ರೆಯಿಂದಲೇ ಬಂತು ಎಂಬ ಅಪವಾದಕ್ಕೆ ಎಡೆಮಾಡಿ ಕೊಡದೆ, ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.
ಎಲ್.ಡಿ. ಗೋಣೆಪ್ಪ ಮಾತನಾಡಿ, ಜಾತ್ರೆಯ ಎರಡೂ ದಿನ ದೇವಸ್ಥಾನದ ಬಳಿ ಸ್ವಚ್ಛತೆಗಾಗಿ 20 ಪೌರ ಕಾರ್ಮಿಕರನ್ನು ನೇಮಿಸಿ, ಕಸ ಸಾಗಿಸಲು 2 ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿ. 24 ಗಂಟೆ ಕಾರ್ಯ ನಿರ್ವಹಿಸುವ ಎರಡು ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಿರಿ. ಹಳೆಯ ಭಾಗದಲ್ಲಿ ಬೀದಿ ದೀಪ ಅಳವಡಿಸಿ ಎಂದು ಸಲಹೆ ನೀಡಿದರು.
ಜಲಸಿರಿ ಯೋಜನೆಯಡಿ ಗುಂಡಿ ತೆಗೆದು ಸರಿಯಾಗಿ ಮುಚ್ಚಿಲ್ಲ. ಜನರು ನಮಗೆ ಶಾಪ ಹಾಕುತ್ತಿದ್ದಾರೆ. ಜಾತ್ರೆಗೆ ಹೊರ ಭಾಗದಿಂದ ಜನರು ಬರುತ್ತಿದ್ದಾರೆ. ಗುಂಡಿಗಳನ್ನು ಮುಚ್ಚಿಸಿ, ರಸ್ತೆ ಸರಿಪಡಿಸಿ. ಹಳೇ ಭಾಗದಲ್ಲಿ ನಾಲ್ಕೂ ದಿನ ನೀರು ಪೂರೈಕೆ ಇರಬೇಕು. 50 ಟ್ಯಾಂಕರ್ ನೀರು ಪೂರೈಸಬೇಕು ಎಂದರು.
ಎ.ನಾಗರಾಜ್ ಮಾತನಾಡಿ, ಪಾಲಿಕೆಯಿಂದ ಎಲ್ಲಾ ವೃತ್ತ ಹಾಗೂ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿಸಿ, ಜನರೇಟರ್ ವ್ಯವಸ್ಥೆ ಕಲ್ಪಿಸಿ ಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಎಂದರಲ್ಲದೆ, ವಿನೋಬನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಪೂಜೆ ನಡೆಯಲಿದ್ದು, ಅಲ್ಲಿಯೂ ಮೂಲ ಸೌಕರ್ಯ ಕಲ್ಪಿಸುವಂತೆ ಹೇಳಿದರು.
ಸದಸ್ಯ ಆರ್.ಎಲ್. ಶಿವಪ್ರಕಾಶ್, ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆಗೆ ಸಲಹೆ ನೀಡಿದರು. ಕೆ.ಎಂ. ವೀರೇಶ್, ದಸರಾ ವೇಳೆ ಮೈಸೂರಿನಲ್ಲಿ ಅಳವಡಿಸಿದಂತೆ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ಸಲಹೆ ನೀಡಿದರು. ಚಮನ್ ಸಾಬ್ ಕುಸ್ತಿ ಪಂದ್ಯಾವಳಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.