ಹರಪನಹಳ್ಳಿ ಪಟ್ಟಣ ಅಭಿವೃದ್ದಿಗೆ 8.50 ಕೋಟಿ ಮಂಜೂರು

ಹರಪನಹಳ್ಳಿ, ಫೆ. 17- ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಹರಪನಹಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ 8.50 ಕೋಟಿ ರೂ. ಮಂಜೂರಾಗಿದೆ ಎಂದು ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಹೇಳಿದರು.

ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಪುರಸಭೆಯ ಹೊಸ ಕಛೇರಿ ನಿರ್ಮಾಣಕ್ಕೆ 3 ಕೋಟಿ ರೂ., ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ 62 ಲಕ್ಷ ರೂ., ಪ್ರವಾಸಿ ಮಂದಿರ ವೃತ್ತದ ಅಭಿವೃದ್ಧಿಗೆ 1 ಕೋಟಿ ರೂ., ಉಳಿದಂತೆ ಪಟ್ಟಣದ ವಿವಿಧ ಅಭಿವೃದ್ಧಿಗೆ ಆ ಹಣ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಮೂರು ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧತೆ ಮಾಡಿ ಕೊಳ್ಳುತ್ತಾ ಇದ್ದೇವೆ. ಹಿರೇಕೆರೆ, ಅಯ್ಯನಕೆರೆ, ನಾಯಕನಕೆರೆ  ಈ ಮೂರೂ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ ಪುರಸಭೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರು ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಸ್ವಾಗತ ಫಲಕದಲ್ಲಿ ವಿದ್ಯಾಸಿರಿ ನಾಡಿಗೆ ಸ್ವಾಗತ ಎಂದು ಬರೆಸಲು ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ್ ಹಾಗೂ ಅಧ್ಯಕ್ಷ ಮಂಜುನಾಥ ಇಜಂತಕರ್ ಅವರು ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿ ದರು. ಮುಖ್ಯಾಧಿಕಾರಿ ಶಿವಕುಮಾರ್ ಅವರು ಹರಪನಹಳ್ಳಿ ಪಟ್ಟಣದಲ್ಲಿ ಸಾಕಷ್ಟು ವಿವಿಧ ಶಿಕ್ಷಣ ಸಂಸ್ಥೆಗಳು ಇವೆ. ಆದ್ದರಿಂದ ವಿದ್ಯಾಸಿರಿ ನಾಡು ಎಂದು ಸ್ವಾಗತ ಫಲಕದಲ್ಲಿ ಬರೆಸೋಣ ಎಂದು ಹೇಳಿದರು.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖಾ ವತಿಯಿಂದ ಕರಡು ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ ಕುರಿತು ಎನ್‌ಓಸಿ ತಗೆದುಕೊಳ್ಳಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಯವರಿಗೆ ಲಿಖಿತ ದೂರು ನೀಡಿರುವ ಸದಸ್ಯ ಜಾಕೀರ್ ಹಾಗು ಇತರೆ ನಾಲ್ವರ ವಿರುದ್ಧ ಅಧ್ಯಕ್ಷ ಮಂಜುನಾಥ ಇಜಂತಕರ್, ವಿನಯಕುಮಾರ, ಕಿರಣ್ ಶಾನಭೋಗ್, ಟಿ. ವೆಂಕಟೇಶ್, ಅಬ್ದುಲ್ ರಹಿಮಾನ್, ಎಂ. ವಿ. ಅಂಜಿನಪ್ಪ, ಉದ್ಧಾರ ಗಣೇಶ್, ಜಾವೇದ್ ಇತರರು ಕಾನೂನು ರೀತಿ ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಜಾಕೀರ್ ಎನ್‌ಓಸಿ ತೆಗೆದುಕೊಂಡು ಡೋರ್ ನಂಬರ್ ಕೊಡಿ ಎಂದು ಹೇಳಿದ್ದೇನೆಯೇ ಹೊರತು, ದುರ್ನಡತೆ ಪ್ರದರ್ಶಿಸಿಲ್ಲ ಎಂದು ಪ್ರತಿಪಾದಿಸಿದರು. ಈ ವಿಚಾರ ಕುರಿತು ಸ್ವಲ್ಪ ಹೊತ್ತು ವಾಗ್ವಾದ ನಡೆದು ನಂತರ ಸುಮ್ಮನೆ ದೂರು ನೀಡಿರುವ ಸದಸ್ಯರ ವಿರುದ್ಧ ಕ್ರಮ ಜರುಗಿಸುವುದಾಗಿ ಅಧ್ಯಕ್ಷ ಮಂಜುನಾಥ ಇಜಂತಕರ್ ಹೇಳಿದಾಗ, ಆ ಚರ್ಚೆ ಅಂತ್ಯಗೊಂಡಿತು.

ಪಟ್ಟಣದ ಪ್ರತಿ ವಾರ್ಡ್‌ಗಳಿಗೆ ನಾಮಫಲಕಗಳನ್ನು ಹಾಕಲು ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಶೋಕ ಅಸಮಾಧನ ವ್ಯಕ್ತಪಡಿಸಿದರು.

ಸಿಎ ಸೈಟ್ ಮಂಜೂರಿಗೆ ಅನುಮೋದನೆ : ತಾಲ್ಲೂಕು ಉಪ್ಪಾರ ಸಂಘ, ಗಂಗಾಮತ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳಿಗೆ ಸಮುದಾಯ ಭವನ, ಕಛೇರಿ ಕಟ್ಟಡ, ವಸತಿ ನಿಲಯಗಳನ್ನು ನಿರ್ಮಿಸಿಕೊಳ್ಳಲು ನಾಗರಿಕ ಸೌಲಭ್ಯಕ್ಕಾಗಿ (ಸಿಎ) ಕಾಯ್ದಿರಿಸಿದ ನಿವೇಶನಗಳನ್ನು ಮಂಜೂರು ಮಾಡಲು ತೀರ್ಮಾನಿಸಲಾಯಿತು. ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಕಿರಿಯ ಆರೋಗ್ಯ ನಿರೀಕ್ಷಕಿ ಶೋಭ ಉಪಸ್ಥಿತರಿದ್ದರು.

error: Content is protected !!