ಹುಬ್ಬಳ್ಳಿ, ಫೆ. 16 – ‘ಚೆಂಬೆಳಕಿನ ಕವಿ’ ಎಂದು ಹೆಸರಾದ ಹಿರಿಯ ಕವಿ ಡಾ. ಚನ್ನವೀರ ಕಣವಿ ಅವರು ಬುಧವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಇತ್ತೀಚೆಗೆ ಅವರು ಧಾರವಾಡದ ಎಸ್.ಡಿ.ಎಂ. ಆಸ್ಪ ತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಬುಧವಾರ ಬೆಳಿಗ್ಗೆ 9.12ಕ್ಕೆ ನಿಧನರಾಗಿದ್ದಾರೆ.
ಕಣವಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚೆಂಬೆಳಕಿನ ಕವಿ, ನಾಡೋಜ ಚೆನ್ನವೀರ ಕಣವಿ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ ಎಂದಿದ್ದಾರೆ.
ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿ ಆಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸಕ್ಕರಪ್ಪ ಹಾಗೂ ಗೃಹಿಣಿಯಾಗಿದ್ದ ಪಾರ್ವತವ್ವ ದಂಪತಿಗೆ ಜನಿಸಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದ ಅವರು, ಅದೇ ವಿ.ವಿ.ಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿ ಹಾಗೂ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
15ಕ್ಕೂ ಹೆಚ್ಚು ಕವನ ಸಂಕಲನ, ವಿಮರ್ಶೆ ಹಾಗೂ ಪ್ರಬಂಧ ಸಂಕಲನಗಳನ್ನು ಅವರು ರಚಿಸಿದ್ದಾರೆ. ಅವರ §ಜೀವಧ್ವನಿ¬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾಗಿದ್ದರು.
ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಣವಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣ ನಗರದಲ್ಲಿರುವ ಅವರ ಮನೆ ಬಳಿಯೂ ಅಂತಿಮ ದರ್ಶನ ಪಡೆಯಲಾಯಿತು.
ಸರ್ಕಾರಿ ಗೌರವಗಳೊಂದಿಗೆ ಕೆಲಗೇರಿಯಲ್ಲಿರುವ ತೋಟದ ಮನೆಯಲ್ಲಿ ಸಂಜೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.