ಸಿರಿಗೆರೆ, ಫೆ. 15 – ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನದಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪಿಟೀಲು ನುಡಿಸುವ ಮೂಲಕ ಸಂಗೀತ ಸುಧೆ ಹರಿಸಿದರು. ತರಳಬಾಳು ಜಗದ್ಗುರುಗಳ ಪರಿಶ್ರಮದಿಂದ ಜಾರಿಯಾ ಗುತ್ತಿರುವ ಜಗಳೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲ ನೀಡುತ್ತಿರುವ ಸುದ್ದಿಯೂ ಭಕ್ತರಿಗೆ ದೊರೆಯಿತು.
ಎರಡನೇ ದಿನ ಸಿರಿಗೆರೆ ಶ್ರೀಗಳು ಪಿಟೀಲು ವಾದನ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ, ಸಾಮಾಜಿಕ ಕಾರ್ಯಗಳ ಒತ್ತಡದಿಂದಾಗಿ ಸಂಗೀತಜ್ಞರ ರೀತಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ ಎಂದು ಶ್ರೀಗಳು ತಿಳಿಸಿದರು.
ಕಷ್ಟದ ಹಿಂದೋಳ ರಾಗದಲ್ಲಿ ಪಿಟೀಲು ವಾದನಕ್ಕೆ ಶ್ರೀಗಳು ಮುಂದಾದರು. ಆದರೆ, ಅಭ್ಯಾಸ ತಪ್ಪಿರುವ ಕಾರಣ ಅಪಸ್ವರ ಮಾಡಿ ಸಂಗೀತ ತಜ್ಞರಿಗೆ ನೋವು ನೀಡಲಾರೆ ಎಂದ ಶ್ರೀಗಳು, ಮೀರಾ ದರ್ಶನ್ನ ದೀಜೋ ಆಜ್ ಪ್ಯಾರೆ ಹಾಡಿನತ್ತ ಹೊರಳಿದರು.
ನಂತರ ಹಿರಿಯ ಜಗದ್ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ನೆನೆಯುತ್ತಾ §ಎದೆ ತುಂಬಿ ಹಾಡಿದೆನು¬ ನುಡಿಸಿದರು. ನಡುವೆ ಹಾಡಿಗೂ ದನಿಗೂಡಿಸಿದರು.
ನಂತರ ಮಾತನಾಡಿದ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರು ಜಗಳೂರಿನ ಹಿರೇಮೇಗಳ ಕೆರೆಗೆ ನೀರು ಬಂದಿರುವ ವಿಷಯ ಸಭೆಗೆ ತಿಳಿಸಿ ಸಂಭ್ರಮಿಸಿದರು.
ತಮ್ಮ ಆಶೀರ್ವಚನದಲ್ಲಿ ಈ ಬಗ್ಗೆ ಮಾತನಾಡಿದ ಸಿರಿಗೆರೆ ಶ್ರೀಗಳು, ನೀರಾವರಿ ವಿಷಯದಲ್ಲಿ ತಾವು §ಕೆಟಲಿಸ್ಟ್¬ (ವೇಗವರ್ಧಕ) ಆಗಿ ಕೆಲಸ ಮಾಡಿದ್ದೇವಷ್ಟೇ. ಈ ಯೋಜನೆಗಳ ಹಿಂದೆ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲರೂ ಕೆಲಸ ಮಾಡಿದ್ದಾರೆ ಎಂದರು.
ಹಿರೇಮೇಗಳಗೆರೆ ಕೆರೆಗೆ ಬಂದ ನೀರು ಭಾವುಕರಾದ ಶಾಸಕ ರಾಮಚಂದ್ರ
ಸಿರಿಗೆರೆ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಆಶಯದಂತೆ ಜಗಳೂರಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬರುತ್ತಿದೆ. ಯೋಜನೆಯ ಪೈಪ್ ಮೂಲಕ ಹಿರೇಮೇಗಳಗೆರೆ ಕೆರೆಗೆ ಇವತ್ತು ನೀರು ತಲುಪಿದೆ ಎಂದು ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರು ಸಭೆಗೆ ತಿಳಿಸಿದರು.
ತರಳಬಾಳು ಶ್ರೀಗಳನ್ನು ನೀರು ತುಂಬಿರುವ ಕೆರೆಗಳಿಗೆ ಕರೆದುಕೊಂಡು ಹೋಗಿ ಪಾದ ಪೂಜೆ ಮಾಡಬೇಕಿದೆ ಎಂದು ಹೇಳುವಾಗ ರಾಮಚಂದ್ರ ಭಾವುಕರಾದರು. ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಬರದ ನಾಡಾದ ಜಗಳೂರಿನಲ್ಲಿ ಕುಡಿಯಲು ನೀರಿಲ್ಲ ಎಂದು ಜನ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತಿದ್ದರು. ಈಗ ಕೆರೆಗಳಿಗೆ ನೀರು ಬಂದಿರುವುದರಿಂದ ಅಂತರ್ಜಲ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳು ಸಾಧ್ಯವಾಗಿ ನಮ್ಮ ರೈತರೂ ಆರ್ಥಿಕವಾಗಿ ಮುಂದೆ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ 2018ರಲ್ಲಿ ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಾಗ ಎಸ್.ವಿ. ರಾಮಚಂದ್ರ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಅವರು ಗೌರವಾಧ್ಯಕ್ಷರಾಗಿದ್ದರು. ಇವರಿಬ್ಬರ ಹೆಸರಿನ ಮೊದಲ ಅಕ್ಷರ §ರಾ¬ ಎಂಬುದೇ ಆಗಿದೆ. ಹೀಗಾಗಿ ಇವರಿಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಜೊತೆಯಾಗಿ ಕರೆದರೆ §ರಾರಾ¬ ಆಗುತ್ತದೆ. ತೆಲುಗಿನಲ್ಲಿ ರಾರಾ ಎಂದರೆ ಕರೆಯುವುದು ಎಂಬರ್ಥ ಬರುತ್ತದೆ. ಹೀಗಾಗಿ ಇವರಿಬ್ಬರು §ರಾ.. ರಾ..¬ ಎಂದು ಕರೆದಾಗ ತುಂಗಭದ್ರೆಯೇ ಹರಿದು ಬಂದಿದ್ದಾಳೆ ಎಂದರು.
ಇದಕ್ಕೂ ಮುಂಚೆ ಮಾತನಾಡಿದ್ದ ಪರಿಷತ್ ಸದಸ್ಯ ಎನ್. ರವಿಕುಮಾರ್ , ಸಿರಿಗೆರೆ ಶ್ರೀಗಳು ಕೃಷಿ, ಶಿಕ್ಷಣ ಸೇರಿದಂತೆ ಹಲವು ವಿಷಯಗಳಲ್ಲಿ ಮಾರ್ಗದರ್ಶನ ಮಾಡಬಲ್ಲರು. ಅವರು ಬಹುಭಾಷಾ ಪರಿಣಿತರು. ನಾಡನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಹಿರಿಯ ಸ್ವಾಮೀಜಿಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಹಳ್ಳಿಗಾಡಿನ ಪ್ರದೇಶಗಳಿಗೆ ಅಕ್ಷರ ಹಾಗೂ ಅನ್ನದಾಸೋಹ ಕೊಟ್ಟಿದ್ದರು. ಈಗ ಸಿರಿಗೆರೆ ಶ್ರೀಗಳು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿ ರೈತರಿಗೆ ಆಶಾಕಿರಣವಾಗಿದ್ದಾರೆ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಈ ಹಿಂದೆ ಮಲ್ಲಿಕಾರ್ಜುನ ಸ್ವಾಮಿಗಳು ಎತ್ತಿನ ಬಂಡಿಯಲ್ಲಿ ಬಂದು ಮನೆಗೆ 2 ರೂ. ಕೇಳುತ್ತಿದ್ದರು. ಈಗ ಮಠ 650 ಕೋಟಿ ರೂ. ಆಸ್ತಿ ಹೊಂದಿದೆ. ಅನೇಕ ಕಡೆಗಳಲ್ಲಿ ಆಸ್ತಿ ಇದೆ ಎಂದು ಹೇಳಿದರು.
ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆಗೆ ಇಷ್ಟೊಂದು ಹಣ ಬೇಕೆ ಎಂದು ರಾಜ್ಯ ಸರ್ಕಾರ ಪ್ರಶ್ನಿಸಿತ್ತು.ಆದರೆ, ಯೋಜನೆ ಯಶಸ್ವಿಯಾಗಿದ್ದಲ್ಲದೇ, ರಾಜ್ಯಾದ್ಯಂತ ಏತ ನೀರಾವರಿ ಯೋಜನೆ ಜಾರಿಗೆ ಬರಲು ಸ್ಫೂರ್ತಿಯಾಯಿತು. ಸಿರಿಗೆರೆ ಶ್ರೀಗಳ ಆಲೋಚನೆ ಪರಿಣಾಮ ರಾಜ್ಯ ಸುಭೀಕ್ಷವಾಯಿತು ಎಂದರು.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಗುರುಗಳ ಸಾನ್ನಿಧ್ಯದಲ್ಲಿ ನಡೆದ ಚರ್ಚೆಯ ಪರಿಣಾಮವಾಗಿ ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರು ತರಿಕೆರೆ – ಚಿಕ್ಕಮಗಳೂರು ಭಾಗಕ್ಕೆ 1,281 ಕೋಟಿ ರೂ.ಗಳ ನೀರಾವರಿ ಯೋಜನೆ ಮಂಜೂರು ಮಾಡಿದರು ಎಂದು ಹೇಳಿದರು.