ಹರಪನಹಳ್ಳಿ, ಫೆ.6- ತಾಲ್ಲೂಕಿನ ಅರಸಿಕೇರಿ ಬಸ್ ನಿಲ್ದಾಣದ ಎದುರುಗಡೆ ಇರುವ ಗೂಡಂಗಡಿಗಳ ತೆರವಿಗೆ ಕಾಲಾವಕಾಶ ನೀಡುವಂತೆ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಯಾವುದೇ ನೋಟಿಸ್ ನೀಡದೇ ಕೇವಲ ಮೂರು ದಿನಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯತಿಯವರು ಡಂಗುರ ಸಾರಿಸಿರುವುದರಿಂದ ವ್ಯಾಪಾರಸ್ಥರು ಬೀದಿಗೆ ಬರುವಂತಾಗಿದೆ ಎಂದು ವಿಜಯನಗರ ಜಿಲ್ಲಾ ಅಧ್ಯಕ್ಷ ಕಬ್ಬಳ್ಳಿ ಬಸವರಾಜ್ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ತಾಲ್ಲೂಕಿನ ಅರಸಿಕೇರಿ ಹೋಬಳಿ ಕೇಂದ್ರದ ಬಸ್ ನಿಲ್ದಾಣದ ಎದುರುಗಡೆ ಚಿಕ್ಕ ಕೆರೆ ಅಂಚಿನ ಭಾಗದಲ್ಲಿ ಸುಮಾರು 30 ವರ್ಷಗಳಿಂದ ಗೂಡಂಗಡಿಗಳನ್ನು ನಿರ್ಮಿಸಿಕೊಂಡು ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಲಿಂಗಾಯಿತರು ಸೇರಿದಂತೆ ಎಲ್ಲಾ ಜನಾಂಗದವರು ಕಿರಾಣಿ. ಹಣ್ಣಿನ ವ್ಯಾಪಾರ. ಚಪ್ಪಲಿ ಅಂಗಡಿ. ಹೋಟೆಲ್ ಗಳನ್ನು ನಿರ್ಮಿಸಿಕೊಂಡು ದಿನ ನಿತ್ಯದ ಜೀವನ ಸಾಗಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಯವರು ರಸ್ತೆ ಅಗಲೀಕರಣ ಕೈಗೊಂಡಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯಿಂದ ನೋಟಿಸ್ ಜಾರಿ ಮಾಡದೇ ಕೇವಲ ಮೂರೇ ದಿನಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ಕ್ರಮ ಖಂಡನೀಯ ಎಂದಿದ್ದಾರೆ.
ದಿಢೀರ್ ತೆರವಿಗೆ ಕ್ರಮ ಕೈಗೊಂಡಿರುವುದು ಸರಿಯಲ್ಲ. ಸ್ವಲ್ಪ ದಿನಗಳ ವರೆಗೆ ಕಾಲಾವಕಾಶ ನೀಡುವಂತೆ ವ್ಯಾಪಾರಸ್ಥರ ಪರ ಮನವಿ ಮಾಡಿದ್ದಾರೆ.
ಈ ವೇಳೆ ಮುಖಂಡರಾದ ಹಾದಿಮನಿ ನಾಗರಾಜ, ಕೆ. ರಾಜಪ್ಪ, ಮಂಜುನಾಥ, ಮುಜಾಮಿಲ್, ಮಕರಬ್ಬಿ ಹುಲುಗಪ್ಪ, ಕೆ. ಅಭಿಷೇಕ್, ಎ.ಬಿ.ಪ್ರದೀಪ್ ಗೌಡ, , ಎ.ಬಿ. ಶಂಭು ಲಿಂಗನಗೌಡ, ಎಂ.ಎಸ್. ಶ್ರೀನಿವಾಸ ಶೆಟ್ಟಿ ಸೇರಿದಂತೆ ಇತರರು ಇದ್ದರು,