ಸಂಸದ ಸಿದ್ದೇಶ್ವರರ ಸಾಧನೆ ಶೂನ್ಯ : ಡಿ.ಬಿ. ಆರೋಪ

ಸಂಸದರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ವಿಶೇಷ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿ. ಜೊತೆಗೆ ಸಾಫ್ಟ್‌ವೇರ್ ಪಾರ್ಕ್ ನಿರ್ಮಿಸುವ ಮೂಲಕ ಯುವ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿ. 

– ಎ. ನಾಗರಾಜ್, ವಿಪಕ್ಷ ನಾಯಕರು, ನಗರ ಪಾಲಿಕೆ. 

ದಾವಣಗೆರೆ, ಜ.23- ಕಳೆದ 25 ವರ್ಷಗಳಿಂದ ಸಂಸದರಾಗಿ ಆಡಳಿತ ನಡೆಸುತ್ತಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಣ್ಣಿಗೆ ಕಾಣುವಂತಹ ಒಂದೇ ಒಂದು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಅವರ ಸಾಧನೆ ಶೂನ್ಯ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ ಸಂದರ್ಭದಲ್ಲಿ ನಗರದಲ್ಲಿ ಸಾವಿರಾರು ಆಶ್ರಯ ಮನೆಗಳ ನಿರ್ಮಾಣ, ಕುಂದುವಾಡ ಕೆರೆ ನಿರ್ಮಾಣ, ಗಾಜಿನ ಮನೆ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ, ಜಲಸಿರಿ 24•7 ಕುಡಿಯುವ ನೀರಿನ ಯೋಜನೆಗೆ ಚಾಲನೆ, ವಿದ್ಯುತ್ ಇಲಾಖೆಯಿಂದ ಯುಜಿ ಕೇಬಲ್ ಅಳವಡಿಕೆ, ನಗರದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣ, ದೂಡಾದ ಮುಂಭಾಗ ಮೇಲ್ಸೆತುವೆ ಹಾಗೂ ಎಪಿಎಂಸಿ ಬಳಿ ಮೇಲ್ಸೆತುವೆ ನಿರ್ಮಾಣ ಸೇರಿದಂತೆ ಅನೇಕ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ ಕೀರ್ತಿ ಎಸ್ಸೆಸ್ ಹಾಗೂ ಎಸ್ಸೆಸ್ಸೆಂ ಅವರಿಗೆ ಸಲ್ಲುತ್ತದೆ ಎಂದರು.

ಸಂಸದ ಸಿದ್ದೇಶ್ವರ ಅವರು ತಮ್ಮ ಅವಧಿಯಲ್ಲಿ ಡಿಸಿಎಂ ಟೌನ್‌ಶಿಪ್ ಹಾಗೂ ಶಿರಮಗೊಂಡನಹಳ್ಳಿ ಬಳಿ ಅಂಡರ್‌ಪಾಸ್ ಹಾಗೂ ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಹೊರತುಪಡಿಸಿ, ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಲ್ಲ ಎಂದು ದೂರಿದರು.

ನೆನೆಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ಸಮಸ್ಯೆಯನ್ನೇ ಬಗೆಹರಿಸದ ಸಂಸದರು ವಿಮಾನ ನಿಲ್ದಾಣ ಮಂಜೂರಾತಿಗೆ ಕೈಹಾಕಿರುವುದು ಹಾಸ್ಯಾಸ್ಪದ. ಸಂಸದರ ಅಭಿವೃದ್ಧಿ `ಖಾಲಿ ಡಬ್ಬ ಸೌಂಡ್ ಜಾಸ್ತಿ’ ಎನ್ನುವಂತಾಗಿದೆ ಎಂದು ಬಸವರಾಜ್ ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರುಗಳಾದ ಕೆ.ಚಮನ್‌ಸಾಬ್, ಗಡಿಗುಡಾಳ್ ಮಂಜುನಾಥ್, ಮುಖಡರಾದ ಗಣೇಶ್ ಹುಲ್ಮನಿ, ಲಿಯಾಖತ್ ಅಲಿ, ಸಲ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!