23 ಸಾವಿರ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಕೆ ವಿದ್ಯುತ್ ಉಳಿಸಿ, ಶುಲ್ಕದ ಹೊರೆ ತಗ್ಗಿಸಿಕೊಳ್ಳಲು ನಿರ್ಧಾರ
ದಾವಣಗೆರೆ, ಜ.20- ಮಹಾನಗರ ಪಾಲಿಕೆ ಯಿಂದ ನಗರದಾದ್ಯಂತ ಇರುವ ಹಳೆಯ ವಿವಿಧ ರೀತಿಯ ಬೀದಿ ದೀಪಗಳನ್ನು ಬದಲಿಸಿ ಸುಮಾರು 23 ಸಾವಿರ ಎಲ್‌ಇಡಿ ಲೈಟ್ ಅಳವಡಿಸುವ ಮೂಲಕ ಶೇ.50ರಷ್ಟು ವಿದ್ಯುತ್ ಶುಲ್ಕ ಉಳಿಸುವ ಹಾಗೂ ನಗರವನ್ನು ಸುಂದರ ಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
ಸದ್ಯ ನಗರದಲ್ಲಿ ಟ್ಯೂಬ್ ಲೈಟ್‌ಗಳು, ಫೋಕಸ್ ಲೈಟ್‌ಗಳು, ಮರ್ಕ್ಯುರಿ ಲೈಟ್‌ಗಳು ಸೇರಿದಂತೆ ವಿವಿಧ ಬಗೆಯ 21,205 ಬೀದಿ ದೀಪಗಳನ್ನು ಬದಲಾಯಿಸಲಾಗುತ್ತಿದೆ. ಇದರೊಟ್ಟಿಗೆ ಬಲ್ಪ್‌ಗಳಿ ಲ್ಲದ 11 ಸಾವಿರ ಖಾಲಿ ವಿದ್ಯುತ್ ಕಂಬಗಳಲ್ಲೂ ಎಲ್‌ಇಡಿ ಲೈಟುಗಳು ಕಾಣಿಸಿಕೊಳ್ಳಲಿವೆ.
ಅಂದ ಹಾಗೆ ನ್ಯಾಷನಲ್ ಲೈಟಿಂಗ್ ಕೋಡ್ ಪ್ರಕಾರ ನಗರಕ್ಕೆ ಉತ್ತಮ ಬೆಳಕು ನೀಡಲು ನಗರದ ರಸ್ತೆಗಳನ್ನು `ಎ’,`ಬಿ’ ಹಾಗೂ `ಸಿ’ ಎಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮುಖ್ಯ ರಸ್ತೆಗಳಾದ ಹದಡಿ ರಸ್ತೆ, ಕೆ.ಆರ್. ರಸ್ತೆ ಮುಂತಾದ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳನ್ನು `ಎ’ ಕೆಟಗರಿ ಎಂತಲೂ, ವಿದ್ಯಾನಗರದ ಮುಖ್ಯ ರಸ್ತೆ, ಡೆಂಟಲ್ ಕಾಲೇಜು ರಸ್ತೆಯಂತಹ ಹಾಗೂ ವಾರ್ಡುಗಳನ್ನು ಸಂಪರ್ಕಿಸುವ ರಸ್ತೆಗಳನ್ನು `ಬಿ’ ಕೆಟಗರಿ ಎಂತಲೂ. ವಾರ್ಡುಗಳಲ್ಲಿರುವ ರಸ್ತೆಗಳನ್ನು `ಸಿ’ ಕೆಟಗರಿ ಎಂತಲೂ ವಿಂಗಡಿಸಲಾಗಿದೆ. ವಿಭಾಗಗಳಿಗೆ ಅನುಗುಣವಾಗಿ ಕಡಿಮೆ ಅಥವಾ ಹೆಚ್ಚು ಬೆಳಕು ನೀಡಬಲ್ಲ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ.
ಎಲ್‌ಇಡಿ ಲೈಟುಗಳು, ಅಳವಡಿಕೆಯ ನಿರ್ದಿಷ್ಟ ಸ್ಥಳದಲ್ಲಿ ಬೆಳಕು ಚೆಲ್ಲುತ್ತವೆ. 200-300 ಮೀಟರ್ ದೂರದಲ್ಲಿ ಅದರ ಬೆಳಕು ಕಾಣದು. ನಮಗೆ ನಿರ್ದಿಷ್ಟ ಪ್ರದೇಶದಲ್ಲಿ ಬೆಳಕು ಬೇಕೇ ಹೊರತು, ದೂರದಲ್ಲಿ ಕಾಣುವಂತಹ ಬೆಳಕಲ್ಲ. ಒಂದೇ ಸ್ಥಳದಲ್ಲಿ ಮರ್ಕ್ಯುರಿ ಲೈಟ್ಗಳ ಬೆಳಕು ಕಂಡ ಜನರಿಗೆ ಈ ಬೆಳಕು ತುಸು ಕಡಿಮೆ ಎನಿಸಬಹುದು. ಆದರೆ ಬೆಳಕು ವೈಜ್ಞಾನಿಕವಾಗಿರಲಿದೆ. ಹೊಸ ಬೆಳಕಿಗೆ ಹೊಂದಿಕೊಳ್ಳಲು ಆರೇಳು ತಿಂಗಳು ಬೇಕಾಗುತ್ತದೆ. ಈಗಾಗಲೇ ಅಳವಡಿಕೆಯಾಗಿರುವ ವಾರ್ಡುಗಳಲ್ಲಿ ಹೊಸ ಲೈಟುಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಇದೆ.
– ಎಂ.ಹೆಚ್. ಉದಯ ಕುಮಾರ್, ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆ.
ಕಡಿಮೆ ಬೆಳಕಿದ್ದರೆ ಪರಿಶೀಲನೆ: ಮೇಯರ್ ಎಸ್.ಟಿ. ವೀರೇಶ್
23 ಸಾವಿರ ಎಲ್‌ಇಡಿ ಲೈಟ್ ಅಳವಡಿಸಿ ವಿದ್ಯುತ್ ಉಳಿಸಿ, ಶುಲ್ಕದ ಹೊರೆಯನ್ನೂ ತಗ್ಗಿಸಿಕೊಳ್ಳುವ ಚಿಂತನೆಯುಳ್ಳ ಯೋಜನೆ ಇದಾಗಿದೆ ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದ್ದಾರೆ.
ಉಳಿಕೆಯಾಗುವ ವಿದ್ಯುತ್ ಶುಲ್ಕದಲ್ಲಿಯೇ 30 ಲಕ್ಷ ರೂ.ಗಳ ಕಂತು ಹೊರತುಪಡಿಸಿದರೆ ಬೇರಾವ ಶುಲ್ಕವನ್ನೂ ಗುತ್ತಿಗೆದಾರರಿಗೆ ನೀಡುವುದಿಲ್ಲ. ಅವರೇ ಬಂಡವಾಳ ಹಾಕಿ, 7 ವರ್ಷಗಳ ನಿರ್ವಹಣೆಯನ್ನೂ ಮಾಡಲಿದ್ದಾರೆ.
ಕಡಿಮೆ ಬೆಳಕು ನೀಡುತ್ತಿವೆ ಎಂಬ ಆರೋಪ ನಿರಾಧಾರ. ಯಾವ ರಸ್ತೆಗೆ ಎಷ್ಟು ಬೆಳಕು ಬೇಕೆಂಬ ಮಾನದಂಡದ ಮೇಲೆ ಲೈಟ್ಗಳ ಅಳವಡಿಕೆ ನಡೆಯಲಿದೆ. ಕೆಲ ರಸ್ತೆಗಳಲ್ಲಿ ಮರಗಳ ನೆರಳಿನಿಂದ ಬೆಳಕಿಗೆ ಅಡ್ಡಿಯಾಗಬಹುದು. ಅಂತಹ ಕಡೆ ಖುದ್ದು ಪರಿಶೀಲನೆ ನಡೆಸಿ ಮಾರ್ಪಾಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಡಿಮೆ ಬೆಳಕಿನ ಆರೋಪ
ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ರಸ್ತೆ, ಹದಡಿ ರಸ್ತೆ, ರಿಂಗ್ ರಸ್ತೆ, ಎವಿಕೆ ಕಾಲೇಜು ರಸ್ತೆ ಮುಂತಾದ ಕಡೆ ಹೊಸದಾಗಿ ಲೈಟ್ ಅಳವಡಿಸಲಾಗುತ್ತಿದ್ದು, ಕಂಬಗಳು ಹೆಚ್ಚು ಉದ್ದವಾಗಿವೆ. ಎಲ್‌ಇಡಿ ಬಲ್ಪುಗಳು ಕಡಿಮೆ ಬೆಳಕು ಸೂಸಿಸುತ್ತಿವೆ. ರಸ್ತೆಗೆ ಬೆಳಕು ಸರಿಯಾಗಿ ಬೀಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮೊದಲ ಹಂತದಲ್ಲಿ ಸಿ ವಿಭಾಗದ ರಸ್ತೆಗಳಲ್ಲಿ 20 ವ್ಯಾಟ್‌ಗಳ ದೀಪ ಹಾಗೂ ಅದೇ ಪ್ರದೇಶದಲ್ಲಿನ ವೃತ್ತಗಳಲ್ಲಿ ಅಗತ್ಯಕ್ಕನುಸಾರವಾಗಿ 35-60 ವ್ಯಾಟ್ಸ್‌ಗಳ ದೀಪ ಅಳವಡಿಕೆ ನಡೆಯಲಿದೆ. ಹೈ ಮಾಸ್ಟ್‌ಗಳ ಸ್ಥಳದಲ್ಲಿ 200 ವ್ಯಾಟ್ಸ್‌ಗಳ ಎಲ್‌ಇಡಿ ಬೆಳಕು ಚೆಲ್ಲಲಿವೆ.
ಪ್ರಸ್ತುತ ಬೀದಿ ದೀಪಗಳಿಗಾಗಿ ಪಾಲಿಕೆಯಿಂದ ಪ್ರತಿ ತಿಂಗಳು ಸುಮಾರು 82 ಲಕ್ಷ ರೂ.ಗಳಷ್ಟು ಬಿಲ್ ಪಾವತಿಸಲಾಗುತ್ತಿದೆ. ಆದರೆ ಇದೀಗ ಎಲ್‌ಇಡಿ ದೀಪಗಳ ಅಳವಡಿಕೆಯಿಂದ ಶೇ.57ರಷ್ಟು ವಿದ್ಯುತ್ ಉಳಿತಾಯ ಮಾಡುವ ಉದ್ದೇಶವಿದೆ.
ತುಮಕೂರಿನಲ್ಲಿ ಇದೇ ರೀತಿ ಎಲ್‌ಇಡಿ ಲೈಟ್ ಅಳವಡಿಕೆಯ ಕಾರ್ಯ ಶೇ.90ರಷ್ಟು ಮುಗಿದಿದ್ದು, ಅಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ದಾವಣಗೆರೆಯಲ್ಲೂ ಬೆಂಗಳೂರಿನ ಅನ್ನಪೂರ್ಣ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಮೂರು ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ದೀಪ ಅಳವಡಿಸುವ ಕಾರ್ಯ ನಡೆಸುತ್ತಿದೆ. ನೂತನ ಎಲ್‌ಇಡಿ ಅಳವಡಿಕೆ ನಂತರ ಶೇ.50ರಷ್ಟು ವಿದ್ಯುತ್ ಶುಲ್ಕ ಉಳಿದಿದೆ ಎಂದು ಸಾಬೀತಾದ ನಂತರವೇ ಅವರಿಗೆ ಏಳು ವರ್ಷಗಳ ಕಾಲ ಪ್ರತಿ ತಿಂಗಳು 30 ಲಕ್ಷ ಮಾತ್ರ ಇಎಂಐ ಕಟ್ಟಲಾಗುತ್ತದೆ.
ಅಲ್ಲದೆ ಅದೇ ಕಂಪನಿ ಏಳು ವರ್ಷಗಳ ನಿರ್ವಹಣಾ ಹೊಣೆ ಹೊತ್ತುಕೊಂಡಿದೆ. ಇದರಿಂದಾಗಿ ಸದ್ಯ ಪಾಲಿಕೆ ನಿರ್ವಹಣಾ ವೆಚ್ಚವೂ ಸೇರಿದಂತೆ ಶೇ.50ರಷ್ಟು ವಿದ್ಯುತ್ ಶುಲ್ಕ ಉಳಿತಾಯವಾಗಲಿದೆ.
ಪಾಲಿಕೆಯ ಮೇಯರ್, ಉಪ ಮೇಯರ್‌ಗಳು ಪ್ರತಿನಿಧಿಸುತ್ತಿರುವ ವಾರ್ಡ್‌ಗಳೂ ಸೇರಿದಂತೆ ಸುಮಾರು ಎಂಟು ವಾರ್ಡುಗಳಲ್ಲಿ ಲೈಟ್ ಅಳವಡಿಕೆ ಕಾರ್ಯಗಳು ಈಗಾಗಲೇ ಮುಗಿದಿವೆ.
ಮೊದಲಿದ್ದ ಲೈಟ್‌ಗಳು ನಾನಾ ವಿಧದವುಗಳಾಗಿದ್ದು ವೈಜ್ಞಾನಿಕವಾಗಿರಲಿಲ್ಲ ಹಾಗೂ ಅಳವಡಿಕೆಯಲ್ಲಿ ಏಕರೂಪತೆ ಇರಲಿಲ್ಲ. ಕಡಿಮೆ ಪ್ರಮಾಣದ ಬೆಳಕಿನ ಅಗತ್ಯತೆ ಇರುವ ಜಾಗದಲ್ಲೂ ಹೆಚ್ಚು ವ್ಯಾಟ್‌ನ ಬಲ್ಪ್‌ಗಳನ್ನು ಉರಿಸಲಾಗುತ್ತಿತ್ತು. ಇದೀಗ ಈ ನೂತನ ಯೋಜನೆಯಿಂದಾಗಿ ಅಗತ್ಯವಿದ್ದಕಡೆ ಅಗತ್ಯವಿರುವಷ್ಟು ಬೆಳಕು ಬೀಳಲಿದೆ ಎನ್ನುತ್ತಾರೆ ಎಂಜಿನಿಯರ್ ಎಂ.ಹೆಚ್. ಉದಯಕುಮಾರ್.
2010-11ರಲ್ಲಿ ಇಂತಹದ್ದೊಂದು ಪ್ರಾಜೆಕ್ಟ್ ತಯಾರಿಸಿ ಅನುಮತಿಗೆ ಕಳುಹಿಸಲಾಗಿತ್ತು. ಆದರೆ ಕನಿಷ್ಟ ಹತ್ತು ಪಾಲಿಕೆಯಲ್ಲಾದರೂ ಇಂತಹ ಯೋಜನೆ ರೂಪಿಸಬೇಕೆಂದು ಅನುಮತಿ ನಿರಾಕರಿಸಲಾಗಿತ್ತು. ಇದೀಗ ಮತ್ತೆ ಅನುಮತಿ ಸಿಕ್ಕಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಬೀದಿ ದೀಪಗಳಲ್ಲಿ ಸಮಸ್ಯೆ ಕಂಡರೆ ತಕ್ಷಣ ತಿಳಿಸಿದರೆ ರಿಪೇರಿಗೆ ಅನುಕೂಲವಾಗುತ್ತದೆ. ಅಲ್ಲದೇ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕಚೇರಿಗೆ ಬಂದು ಚರ್ಚಿಸಬಹುದಾಗಿದೆ ಎನ್ನುತ್ತಾರೆ ಉದಯಕುಮಾರ್.
ಈ ನೂತನ ಯೋಜನೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾರ್ಯಯೋಜನೆ ಮಹಾನಗರ ಪಾಲಿಕೆಯದ್ದಾಗಿದೆ. ಬರುವ ಏಪ್ರಿಲ್ ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]