ಕೊರೊನಾ : ಸಾರ್ವಜನಿಕ ಆಸ್ಪತ್ರೆಗೆ ಭೇಟಿ, ಪರಿಶೀಲಿಸಿದ ಡಿಸಿ ಅನಿರುದ್ಧ್

ಹರಪನಹಳ್ಳಿ, ಜ.6- ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡುಗಳ ಹಾಗೂ ಆಕ್ಸಿಜನ್ ಬೆಡ್‍ಗಳನ್ನು ವೀಕ್ಷಿಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ವಿಜಯನಗರ ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಿಗೆ ಸಮರ್ಪಕ ಔಷಧಿಗಳನ್ನು ಒದಗಿಸುವ ಹಾಗೂ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. 

ಮೂರನೇ ಅಲೆಯ ಸಿದ್ಧತೆಯ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಸಭೆ ಮಾಡುತ್ತಿದ್ದೇವೆ. ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಆಸ್ಪತ್ರೆಯಲ್ಲಿ  ಆಕ್ಸಿಜನ್, ಬೆಡ್ ವ್ಯವಸ್ಥೆಯಿದ್ದು, ಕೊರೊನಾ ಮೂರನೇ ಅಲೆಯ ಮುಂಜಾಗ್ರತೆಯ ಅನುಗುಣವಾಗಿ ಆಕ್ಸಿಜನ್‍ಗೆ ತಕ್ಕಂತೆ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದರು. 

ತಾಲ್ಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಕೊರತೆ ನಮ್ಮ ಗಮನಕ್ಕೆ ಬಂದಿದ್ದು, ಸರ್ಕಾರದ ನಿಯಮಾನುಸಾರ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಜಾಗೃತರಾಗಿ ಕೊರೊನಾ ಎದುರಿಸಲು ಎಲ್ಲರೂ ಸಹಕರಿಸಿ ಎಂದ ಅವರು, ಇದುವರೆಗೂ ಓಮಿಕ್ರಾನ್ ಪ್ರಕರಣ ಪತ್ತೆಯಾಗಿಲ್ಲ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಹೆಚ್.ಜಿ.ಚಂದ್ರಶೇಖರಯ್ಯ, ತಹಶೀಲ್ದಾರ್ ಎಲ್.ಎಂ.ನಂದೀಶ್, ತಾ.ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ, ತಾ.ಪಂ.ಇಒ  ಪ್ರಕಾಶ್‍ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಬಿ.ಇ.ಒ ಯು.ಬಸವರಾಜ, ತೋಟಗಾರಿಕೆ ಇಲಾಖೆಯ ಜಯಸಿಂಹ ಡಾ. ಶಂಕರನಾಯ್ಕ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!