ಪತ್ರಿಕಾ ವಿತರಕರ ಸಮಾವೇಶ ಹಾಗೂ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಸಿದ್ದೇಶ್ವರ ಸಲಹೆ
ದಾವಣಗೆರೆ, ಏ.3- ಪತ್ರಿಕೆಗಳು ದರ ಹೆಚ್ಚಿಸಿ, ಪತ್ರಿಕಾ ವಿತರಕರಿಗೆ ಹೆಚ್ಚು ಕಮಿಷನ್ ನೀಡುವಂತಾಗಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಭಾನುವಾರ ನಗರದ ಐಟಿಐ ಕಾಲೇಜು ಆವರಣದಲ್ಲಿನ ಶ್ರೀ ಚೌಡೇಶ್ವರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕ ಸಮಾವೇಶ ಹಾಗೂ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಒಂದು ಕಾಫಿಗೆ 10 ರೂ. ಇದೆ. ಆದರೆ ಪತ್ರಿಕೆಗಳ ನಡುವೆ ಹೆಚ್ಚಾಗಿರುವ ಸ್ಪರ್ಧೆಗಳಿಂದಾಗಿ ಕಳೆದ ಕೆಲ ವರ್ಷಗಳಿಂದ ಪತ್ರಿಕೆಗಳ ಬೆಲೆ ಹೆಚ್ಚಾಗಿಲ್ಲ. ಹಲವಾರು ಪತ್ರಿಕೆಗಳ ಬೆಲೆ ಕೇವಲ 5 ರೂ. ಮಾತ್ರ ಇದೆ. ಇದರಿಂದ ವಿತರಕರಿಗೆ ಕಮೀಷನ್ ಹೆಚ್ಚಿಸಲು ಸಾಧ್ಯವಾಗಿಲ್ಲ ಎಂದರು.
ಪತ್ರಿಕೆಗಳಿಗೆ ವಿತರಕರೇ ಬೆನ್ನೆಲುಬು. ವಿತರಣೆಯಾಗದಿದ್ದರೆ ಪ್ರಕಟಗೊಂಡ ಪತ್ರಿಕೆಗಳು ಜನರಿಗೆ ತಲುಪದೇ ಕಚೇರಿಯಲ್ಲಿಯೇ ಇರಬೇಕಾಗುತ್ತದೆ. ಹಿಂದೆ ಸೈಕಲ್‌ಗಳಲ್ಲಿ ಪತ್ರಿಕೆ ವಿತರಿಸಲಾಗುತ್ತಿತ್ತು. ಇಂದು ದ್ವಿ ಚಕ್ರ ವಾಹನಗಳಲ್ಲಿ ವಿತರಣಾ ಕಾರ್ಯ ನಡೆಯುತ್ತಿದೆ. ಕಡಿಮೆ ಕಮೀಷನ್‌ನಿಂದ ವಿತರಕರ ಬದುಕು ಕಷ್ಟವಾಗುತ್ತಿದೆ. ಆದ್ದರಿಂದ ಪತ್ರಿಕೆಗಳು ತಮ್ಮ ಬೆಲೆ ಹೆಚ್ಚಿಸಿಕೊಂಡು ವಿತರಕರ ಕಮೀಷನ್ ಹೆಚ್ಚಿಸಬೇಕಿದೆ ಎಂದರು.
ಈಗಾಗಲೇ ವಿತರಕರನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಲಾಗಿದೆಯಾದರೂ, ಅದರಿಂದಾಗಿ ಹೆಚ್ಚು ಪ್ರಯೋಜನವಾಗಿಲ್ಲ ಎಂಬ ಆಪಾದನೆಗಳಿವೆ. ಕಾರ್ಮಿಕ ಸಚಿವರು ಹಾಗೂ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸಾಧ್ಯವಾದಷ್ಟೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ವಿತರಕರೂ ಸಹ ಸಂಘಟಿತರಾಗಿ ಸೌಲಭ್ಯಗಳಿಗೆ ರಾಜ್ಯಮಟ್ಟದಲ್ಲಿ ಒತ್ತಡ ತಂದಾಗ ಮುಖ್ಯಮಂತಿಗಳ ಕಣ್ಣು ತೆರೆಸಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಬೇಡಿಕೆಗಳ ಈಡೇರಿಕೆಗೆ ಸತತ ಪ್ರಯತ್ನ ಅಗತ್ಯ: ವಿಕಾಸ್
ಸಾಮಾನ್ಯವಾಗಿ ಪತ್ರಿಕಾ ವಿತರಕರು ಬೆಳಿಗ್ಗೆ ಪತ್ರಿಕೆಗಳನ್ನು ಹಂಚಿ, ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ರಜೆಗಳೂ ಇಲ್ಲದೆ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಅವಕಾಶಗಳು ಸಿಗದಿರುವ ಸಂದರ್ಭಗಳ ನಡುವೆಯೂ ಸಂಘಟಿತರಾಗಿ ಸಭೆ ನಡೆಸಿ ತಮ್ಮ ಅಹವಾಲುಗಳನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಂಡಿರುವುದು ಸಂತೋಷದ ವಿಚಾರ ಎಂದು `ಜನತಾವಾಣಿ’ ಪತ್ರಿಕೆ ಸಂಪಾದಕ ಎಂ.ಎಸ್. ವಿಕಾಸ್ ಹೇಳಿದರು.
ವಿತರಕರ ಬೇಡಿಕೆಗಳಲ್ಲಿ ಮುಖ್ಯವಾಗಿ ಬೆಳಗಿನ ಜಾವ ಪತ್ರಿಕೆ ವಿತರಣೆಗೆ ಹಾಗೂ ಒಂದೆಡೆ ಸೇರಿ ಚರ್ಚಿಸಲು ಸೂಕ್ತವಾದ ಸ್ಥಳದ ವ್ಯವಸ್ಥೆ ಬೇಕು ಎಂಬುದು. ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಬೇಡಿಕೆಗಳು ಈಡೇರಬೇಕಾದರೆ ಒಮ್ಮೆ ಮಾತ್ರ ಮನವಿ ಸಲ್ಲಿಸಿದರೆ ಸಾಲದು. ಆಗಾಗ್ಗೆ ಪ್ರಯತ್ನಿಸುತ್ತಿರಬೇಕು ಎಂದು ಸಲಹೆ ನೀಡಿದ ಅವರು, ವಿತರಕರ ಒಳಿತಿಗಾಗಿ ಸಹಕಾರ ನೀಡಲು ಯಾವಾಗಲೂ ಸಿದ್ಧ ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆಗಳಿದ್ದವು. ವಿತರಕರೇಕೆ ಸಂಘ ಸ್ಥಾಪಿಸಿಲ್ಲ ಎಂದು ಯೋಚಿಸಿದ್ದೆ. ಇದೀಗ ನೀವೂ ಸಹ ಸಂಘಟಿತರಾಗಿರುವುದು ಸಂತೋಷದ ವಿಚಾರ ಎಂದರು.
ನಿಮಗೆ ಬೇಕಾದವರಿಗೆ ಬೇಗ ಪತ್ರಿಕೆ ಹಂಚುವುದು. ಬೇಡವಾದವರ ಮನೆಗೆ ತಡವಾಗಿ ಪತ್ರಿಕೆ ತಲುಪಿಸುವ ಕೆಲಸ ಮಾಡದೆ. ಉತ್ತಮ ರೀತಿಯಿಂದ ಕೆಲಸ ಮಾಡಿ. ಸೌಲಭ್ಯಗಳಿಗಾಗಿ ಸಂಘಟಿತರಾಗಿ ಹೋರಾಟ ನಡೆಸಿ. ನಿಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನನ್ನಿಂದಾದ ಸಹಾಯ ಮಾಡುತ್ತೇನೆ ಎಂದರು.
ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಪತ್ರಿಕಾ ವಿತರಕರ ವೃತ್ತಿ ಶ್ರೇಷ್ಠ ವೃತ್ತಿ. ಸಮಾಜ ತಿದ್ದುವ ಕೆಲಸದಲ್ಲಿ ತಮ್ಮ ಪಾಲೂ ಇದೆ. ಪತ್ರಿಕೆಗಳು ಹಾಗೂ ಓದುಗರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ನಿಮ್ಮಲ್ಲಿ ವೃತ್ತಿ ಬಗ್ಗೆ ಕೀಳರಿಮೆ ಸಲ್ಲದು ಎಂದರು.
ನಗರದಲ್ಲಿನ ಶೇ.90ರಷ್ಟು ವಿತರಕರು ನನ್ನ ಸ್ನೇಹಿತರಿದ್ದಾರೆ. ಅವರ ಕಷ್ಟಗಳ ಅರಿವಿದೆ. ಪಾಲಿಕೆಯಲ್ಲಿ ಪತ್ರಕರ್ತರು ಹಾಗೂ ವಿತರಕರ ಕ್ಷೇಮಾಭಿವೃದ್ಧಿ ನಿಧಿಯಾಗಿ 10 ಲಕ್ಷ ಮೀಸಲಿಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಕೊರೊನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಪತ್ರಿಕೆ ವಿತರಿಸಿರುವ ನಿಮ್ಮ ಕಾರ್ಯ ಶ್ಲ್ಯಾಘನೀಯ. ತಡವಾಗಿಯಾದರೂ ಸಂಘಟಿತರಾಗಿದ್ದೀರಿ. ಸಮಾವೇಶ ಹಾಗೂ ಹೋರಾಟಗಳಿಂದ ಸರ್ಕಾರದ ಕಣ್ಣು ತೆರೆಸಲು ಸಾಧ್ಯ ಎಂದು ಹೇಳಿದರು.
ಪತ್ರಕರ್ತ ವೀರಪ್ಪ ಎಂ.ಬಾವಿ ಮಾತನಾಡುತ್ತಾ, ವಿತರಕರು ಸಂಘಟಿತರಾಗಿರುವುದು ಸಂತಸದ ವಿಚಾರ. ಆದರೆ ಕೆಲ ವ್ಯಕ್ತಿಗಳು ಒಗ್ಗಟ್ಟು ಕೆಡಿಸಲು ಯತ್ನಿಸುತ್ತಾರೆ. ಅವರ ಮಾತಿಗೆ ಕಿವಿಗೊಡಬಾರದು. ಪ್ರಸ್ತುತ ಇರುವ ಸಂಘದಲ್ಲಿನ ಪದಾಧಿಕಾರಿಗಳು ಸಮರ್ಥರಿದ್ದಾರೆ ಎಂದರು.
ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್. ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು.