ದಾವಣಗೆರೆ, ಮಾ.17- ಭದ್ರಾ ಅಣೆಕಟ್ಟೆಯ ಆನವೇರಿ ವಿಭಾಗದ ನಾಲಾ ತೊಟ್ಟಿಲು ಮೊನ್ನೆ ರಾತ್ರಿ ಒಡೆದಿದ್ದು, ಸರ್ಕಾರ ಈ ಕೂಡಲೇ ತುರ್ತಾಗಿ ದುರಸ್ತಿಗೊಳಿಸಲು ಮುಂದಾಗಬೇಕೆಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಎ.ಎಂ. ಮಂಜುನಾಥ್ ಆಗ್ರಹಿಸಿದ್ದಾರೆ.
ಈ ನಾಲೆಯಲ್ಲಿ 300 ಕ್ಯೂಸೆಕ್ ನೀರು ಹರಿಯುತ್ತಿದ್ದು, ಸರ್ಕಾರ ದುರಸ್ತಿಗೆ ಮೀನಾಮೇಷ ಎಣಿಸಿದರೆ, ಪ್ರತಿ ಎಕರೆಗೆ 40 ಸಾವಿರ ಖರ್ಚು ಮಾಡಿದ ರೈತರ 25 ಸಾವಿರ ಎಕರೆ ಅಚ್ಚುಕಟ್ಟಿನ ಪ್ರದೇಶದ ಬೆಳೆ ನಷ್ಟಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. 105 ಕಿ.ಮೀ ಭದ್ರಾ ಬಲ ನಾಲೆಗೆ ವಯಸ್ಸಾಗಿದೆ. ನಿರ್ವಹಣೆ ಮಾಡಲು ಗೇಟುಗಳು ಸರಿಯಾಗಿಲ್ಲ. ನಾಲೆಗಳು ಹೂಳು ತುಂಬಿವೆ. ಹಳ್ಳಗಳು ಬರುವ ಹತ್ತಿರದ ನಾಲಾ ತೊಟ್ಟಿಲುಗಳು ದುರಸ್ತಿ ಇಲ್ಲದೆ ಹಾಳಾಗುತ್ತಿವೆ. ಆದ್ದರಿಂದ ಎಲ್ಲಾ ನಾಲಾ ತೊಟ್ಟಿಲುಗಳನ್ನು ರಿಪೇರಿ ಮಾಡಲಿಕ್ಕೆ ಸರ್ಕಾರ ಆದ್ಯತೆ ನೀಡಬೇಕು ಮತ್ತು ಮುಂದೆ ಈ ರೀತಿಯ ಅನಾಹುತ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದೆ.
ಭದ್ರಾ ಅಣೆಕಟ್ಟೆ ನಿರ್ಮಾಣವಾಗಿ 70 ದಶಕ ಕಳೆದಿವೆ. ಡ್ಯಾಮ್‌ನ ತುರ್ತು ಗೇಟ್, ಸರ್ವಿಸ್ ಗೇಟ್, ಕ್ರಸ್ಟ್‌ಗೇಟ್‌ಗಳು ಮತ್ತು ಬಲನಾಲೆ, ಎಡನಾಲೆ ಗೇಟುಗಳು ಮೇಲೆ, ಕೆಳಗೆ ಹೋಗದೆ ಸ್ಥಗಿತಗೊಂಡಿವೆ. ಇವನ್ನು ದುರಸ್ತಿ ಮಾಡಲು ಕ್ರಮ ವಹಿಸಬೇಕೆಂದು ಒಕ್ಕೂಟದ ಉಪಾಧ್ಯಕ್ಷರುಗಳಾದ ನಾಗರಾಜರಾವ್ ಕೊಂಡಜ್ಜಿ, ಹನುಮಂತಪ್ಪ ಕುಂದುವಾಡ, ಮಹೇಶ್ ಕುಂದುವಾಡ ಒತ್ತಾಯಿಸಿದ್ದಾರೆ.