ಬ್ಯಾಂಕ್ ದರೋಡೆಗೆ ಬಂದಿದ್ದವರಿಗೆ ಗುಂಡೇಟು

ಬ್ಯಾಂಕ್ ದರೋಡೆಗೆ ಬಂದಿದ್ದವರಿಗೆ ಗುಂಡೇಟು

ಬ್ಯಾಂಕ್ ದರೋಡೆಗೆ ಬಂದಿದ್ದವರಿಗೆ ಗುಂಡೇಟು - Janathavani

ನಾಲ್ವರ ಸೆರೆ, ಕೋಟ್ಯಾಂತರ ರೂ. ಮೌಲ್ಯದ ಪ್ರಕರಣಗಳು ಬಯಲಿಗೆ

ಪೊಲೀಸ್ ಪೇದೆ ಮೇಲೆ ಮಚ್ಚಿನಿಂದ ಹಲ್ಲೆ

ಆತ್ಮರಕ್ಷಣೆಗೆ ಗುಂಡು ಹಾರಿಸಿದ ಪೊಲೀಸರು ಓರ್ವ ಆರೋಪಿಗೆ ಗಾಯ, ಆಸ್ಪತ್ರೆಗೆ ದಾಖಲು

ದಾವಣಗೆರೆ, ಮಾ. 16- ಸಿನಿಮೀಯ ರೀತಿಯಲ್ಲಿ ಬ್ಯಾಂಕ್‌ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ಮೇಲೆ ಪೊಲೀಸರು ಗುಂಡು ಹಾರಿಸಿ, ನಾಲ್ವರನ್ನು ಸೆರೆ ಹಿಡಿದಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ನಡೆದಿದ್ದ ಕೋಟ್ಯಾಂತರ ರೂ. ಮೌಲ್ಯದ ದರೋಡೆ ಪ್ರಕರಣಗಳು ಬಯಲಿಗೆ ಬಂದಿವೆ.

ಒಬ್ಬ ದರೋಡೆಕೋರ ಗುಂಡೇಟಿನಿಂದ ಗಾಯಗೊಂಡಿದ್ದು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊನ್ನಾಳಿ ತಾಲ್ಲೂಕಿನ ಅರಬಘಟ್ಟದಲ್ಲಿ ಶನಿವಾರ ಮಧ್ಯರಾತ್ರಿ 1.30ರ ಸಮಯದಲ್ಲಿ  ಈ ಘಟನೆ ನಡೆದಿದೆ. 

ಹೊನ್ನಾಳಿ ಬಳಿ ಪೊಲೀಸರ ತಂಡ ನಾಕಾಬಂಧಿ ಮಾಡಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರೆಟಿಗಾ ಹಾಗೂ ಮಹೀಂದ್ರ ಎಸ್‌‍ಯುವಿ 500 ಉತ್ತರ ಪ್ರದೇಶ ನೋಂದಣಿಯ ಕಾರು ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಹೋಗುತ್ತಿತ್ತು.

ಹೊನ್ನಾಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಕಾರು ತಡೆಯಲು ಪೊಲೀಸರು ಯತ್ನಿಸಿದ್ದಾರೆ.   ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ನಂತರ ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಅರಬಘಟ್ಟ ಬಳಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಪೇದೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತ್ಮರಕ್ಷಣೆಗಾಗಿ  ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಡ್ಡು ಅಲಿಯಾನ್‌ ಗುಡು ಖಾಲಿಯಾ (45) ಕಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಕಕ್ರಾಳ ಗ್ರಾಮದವರಾದ ಹಣ್ಣಿನ ವ್ಯಾಪಾರಿ ಹಜರತ್ ಅಲಿ (50), ಅಸ್ಲಾಂ ಅಲಿಯಾಸ್ ಟನ್ ( 55), ಬರಲಿ ಮಂಡೆಲ್ ತಾಲ್ಲೂಕಿನ ಖಮರುದ್ದೀನ್ ಅಲಿಯಾಸ್ ಬಾಬು (40) ಬಂಧಿತರು.  ರಾಜಾರಾಮ್, ಬಾಬುಷಾ, ಮತ್ತು ಆಫೀಜ್ ತಪ್ಪಿಸಿಕೊಂಡಿದ್ದಾರೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿತರ ವಿಚಾರಣೆ ನಡೆಸಿದಾಗ ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳನ್ನು ದರೋಡೆ ಮಾಡಿದ್ದು, ಮತ್ತೆ ಬ್ಯಾಂಕ್‌ಗಳನ್ನು ದರೋಡೆ ಮಾಡಲು ಈಗ್ಗೆ 1 ವಾರದ ಹಿಂದೆ ಕರ್ನಾಟಕ ರಾಜ್ಯಕ್ಕೆ ಬಂದು ದಾವಣಗೆರೆ ಬಳಿ ಉಳಿದುಕೊಂಡು ದರೋಡೆ ಮಾಡಲು ಬ್ಯಾಂಕ್ ಗಳನ್ನು ಹುಡುಕುತ್ತಿದ್ದರು. ಈ ದಿನ ರಾತ್ರಿ ಸವಳಂಗ ಗ್ರಾಮದ ಎಸ್ ಬಿ ಐ ಬ್ಯಾಂಕ್  ದರೋಡೆ ಮಾಡಲು ಪೂರ್ವ ತಯಾರು ಮಾಡಿಕೊಂಡು ಹರಿಹರ-ಶಿವಮೊಗ್ಗ ರಸ್ತೆಯಲ್ಲಿ ಎರಡು ಕಾರಿನಲ್ಲಿ ಬಂದಿರುವುದಾಗಿ ತಿಳಿಸಿರುತ್ತಾರೆ.

ಆರೋಪಿಗಳಿಂದ  ಕೃತ್ಯವೆಸಗಲು ಬಳಸಿದ್ದ ಎರಡು ಕಾರುಗಳು. 4 ಜೀವಂತ ಗುಂಡುಗಳು,  1 ಆಕ್ಸಿಜನ್ ಸಿಲಿಂಡರ್ ರೆಗ್ಯೂಲೇಟರ್, 3 ಕಬ್ಬಿಣದ ರಾಡ್, 5 ಪಾಕೆಟ್ ಕಾರದ ಪುಡಿ,  5 ಮಂಕಿ ಕ್ಯಾಪ್, 5 ಜೊತೆ ಹ್ಯಾಂಡ್ ಗ್ಲೌಜ್, ಒಂದು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3.33 ರೂ. ಕೋಟಿ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿರುವುದು, ಕೊಪ್ಪಳ ಜಿಲ್ಲೆಯಲ್ಲಿ 1.46 ಕೋಟಿ ರೂ. ಸ್ವತ್ತು ಕಳ್ಳತನ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿದೆ. 

ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1.25 ಲಕ್ಷ ರೂ. ಮೌಲ್ಯದ ಕ್ಯಾಮೆರಾ, ಡಿವಿಆರ್, ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಹಾವೇರಿ ಜಿಲ್ಲೆ ತಡಸ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೂವೆಲ್ಲರಿ ಶಾಪ್ ನಲ್ಲಿ  1.55 ಲಕ್ಷ ರೂ.  ಮೌಲ್ಯದ ಬೆಳ್ಳಿಯ ಮತ್ತು ರೋಲ್ಡ್ ಗೋಲ್ಡ್ ಸಾಮಾನುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಎಸ್ಪಿ ಉಮಾ ಪ್ರಶಾಂತ್  ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಸಂಭವಿಸಬಹುದಾಗಿದ್ದ ಬ್ಯಾಂಕ್ ದರೋಡೆ  ತಡೆಗಟ್ಟುವಲ್ಲಿ ಯಶಸ್ವಿಯಾದ ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರ ಕಾರ್ಯವೈಖರಿಯನ್ನು ಅವರು ಇದೇ ವೇಳೆ ಶ್ಲ್ಯಾಘಿಸಿದರು.

ಅಪರಿಚಿತ ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಊರು, ಗಲ್ಲಿಗಳಲ್ಲಿ ತಿರುಗಾಡುವುದು ಕಂಡು ಬಂದಲ್ಲಿ ತಪ್ಪದೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.

ಚನ್ನಗಿರಿ ವಿಭಾಗದ ಡಿವೈಎಸ್ಪಿ, ಸ್ಯಾಂ ವರ್ಗೀಸ್, ಜಿಲ್ಲಾ ಹೆಚ್ಚುವರಿ ಎಸ್ಪಿ, ವಿಜಯಕುಮಾರ್‌ ಸಂತೋಷ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ, ಬಸವರಾಜ್, ನ್ಯಾಮತಿ ಪಿ.ಐ,. ಎನ್.ಎಸ್.ರವಿ, ಹೊನ್ನಾಳಿ ಪಿ.ಐ, ಸುನಿಲ್ ಕುಮಾರ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!