ಬೆಳಗಾವಿ, ಮಾ. 16 – ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ ನಾಲ್ಕರ ಮೀಸಲಾತಿ ಕಲ್ಪಿಸು ವುದನ್ನು ವಿರೋಧಿಸಿ ವಿಧಾನ ಸಭೆಯ ಒಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮುಸ್ಲಿಮರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ಕಲ್ಪಿಸುವುದು ಸಂವಿಧಾನ ಬಾಹಿರ ಹಾಗೂ ಸರ್ಕಾರಿ ಜಿಹಾದ್ ಎಂದವರು ಆರೋಪಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಲ್ಲದೆ ಸರ್ಕಾರ ಕಾಗದದ ಹುಲಿಯಾಗಿದೆ. ಸರ್ಕಾರ ಈಗ ಅಲ್ಪಸಂಖ್ಯಾತರ ಓಲೈಕೆಯ ಕಡೆ ಮಾತ್ರ ಗಮನಹರಿಸಿದೆ ಎಂದವರು ಟೀಕಿಸಿದ್ದಾರೆ.
ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ. ಈ ದಿಸೆಯಲ್ಲಿ ಶುಕ್ರವಾರ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಸಂವಿಧಾನ ಬಾಹಿರ ಎಂದು ವಿಜಯೇಂದ್ರ ಹೇಳಿದ್ದಾರೆ.
ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಧರ್ಮಗಳ ನಡುವೆ ಒಡಕು ಹಾಗು ಅಂತರ ತರಲು ಸರ್ಕಾರ ಇಂತಹ ಸಂಚು ನಡೆಸಿದೆ. ಇದರಲ್ಲಿ ಮುಖ್ಯಮಂತ್ರಿ ಭಾಗಿಯಾಗಿರುವುದು ದುರಾದೃಷ್ಟಕರ. ಬಿಜೆಪಿ ಈ ಓಲೈಕೆ ರಾಜಕೀಯವನ್ನು ಖಂಡಿಸುತ್ತದೆ ಎಂದವರು ಹೇಳಿದ್ದಾರೆ.
ಪ್ರಸಕ್ತ ಸರ್ಕಾರಿ ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇಕಡ 24, ಪ್ರವರ್ಗ 1ರ ಒಬಿಸಿ ಗುತ್ತಿಗೆದಾರರಿಗೆ ಶೇಕಡ 4 ಹಾಗೂ ಪ್ರವರ್ಗ 2ಎ ವರ್ಗದ ಗುತ್ತಿಗೆದಾರರಿಗೆ ಶೇಕಡ 15ರಷ್ಟು ಮೀಸಲಾತಿ ಇದೆ. ಪ್ರವರ್ಗ 2ಬಿ ದಲ್ಲಿ ಇರುವ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.