ನಗರ ಸ್ವಚ್ಛತೆ, ವಾಹನ ದಟ್ಟಣೆ ನಿಯಂತ್ರಣ, ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಸೂಚನೆ
ಹರಿಹರ, ಮಾ.16- ನಗರ ದೇವತೆ ಜಾತ್ರೆಗೆ ದಿನ ಗಣನೆ ಶುರುವಾಗಿದ್ದು, ನಾಡಿದ್ದು ದಿನಾಂಕ 18ರಿಂದ ಆರಂಭವಾಗಲಿರುವ ಊರಮ್ಮ ದೇವಿಯ ಜಾತ್ರೆಯ ಪೂರ್ವ ಸಿದ್ಧತೆಗಳನ್ನು ಸ್ಥಳೀಯ ಶಾಸಕ ಬಿ.ಪಿ. ಹರೀಶ್ ಅವರು ಅಧಿಕಾರಿಗಳೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಸ್ಥಾನ ರಸ್ತೆಯ ಚೌಕಿ ಮನೆಗೆ ಆಗಮಿಸಿದ ಶಾಸಕರು, ಹಬ್ಬದ ಪೂರ್ವ ಸಿದ್ಧತೆಗಳಾದ ದೇವಿ ಪ್ರತಿಷ್ಠಾಪನೆಯ ಚೌಕಿ ಮಂಟಪ ನಿರ್ಮಾಣ ಹಾಗೂ ದೇವಸ್ಥಾನ ರಸ್ತೆಯ ವಿದ್ಯುತ್ ದೀಪಗಳ ಅಲಂಕಾರ ಮತ್ತು ನೀರಿನ ವ್ಯವಸ್ಥೆ ಸೇರಿದಂತೆ ಇತರ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದೇವಸ್ಥಾನ ರಸ್ತೆ ಹಾಗೂ ನಗರದಲ್ಲಿ ದೀಪದ ಅಲಂಕಾರ ಹೆಚ್ಚಿರುವ ಕಾರಣ ಹೆಚ್ಚುವರಿ ಟಿಸಿಗಳನ್ನು ಅಳವಡಿಸಲು ಸ್ಥಳದಲ್ಲಿದ್ದ ಬೆಸ್ಕಾಂ ಇಂಜಿನಿಯರ್ ನಾಗರಾಜ್ ನಾಯಕ್ ಅವರಿಗೆ ಸೂಚಿಸಿದ ಅವರು, ಎರಡು ದಿನ ಮುಂಚಿತವಾಗಿ ಎಲ್ಲಾ ಲೈಟುಗಳನ್ನು ಆನ್ ಮಾಡುವ ಮೂಲಕ ವಿದ್ಯುತ್ ಲೋಡಿಂಗ್ ಕೆಪ್ಯಾಸಿಟಿ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ವಿದ್ಯುತ್ ದ್ವೀಪಗಳನ್ನು ಅಳವಡಿಸಿರುವುದರಿಂದ ಈಗಿರುವ ಟಿಸಿಗಳಿಗೆ ವಿದ್ಯುತ್ ಲೋಡ್ ಜಾಸ್ತಿಯಾಗಿ ಮನೆಗಳಿಗೆ ಸರಬರಾಜು ಆಗುವ ವಿದ್ಯುತ್ ಕಡಿತವಾಗ ಬಾರದು.
ಆದಕಾರಣ ಮುಂಜಾಗ್ರತವಾಗಿಯೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಹರಿಹರಕ್ಕೆ ನೀರು ಸರಬರಾಜು ಮಾಡುವ ರಾಣೇಬೆನ್ನೂರು ತಾಲ್ಲೂಕಿನ ಕವೆಲತ್ತು ಗ್ರಾಮದ ನೀರು ಸರಬರಾಜು ಘಟಕಕ್ಕೆ ನಿರಂತರ ವಿದ್ಯುತ್ ಚಾಲನೆಯಲ್ಲಿರಬೇಕು. ಹೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಡಿತ ಮಾಡದಂತೆ ಪತ್ರದ ಮುಖೆನ ತಿಳಿಸಬೇಕು. ನಾನು ಕೂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಹರೀಶ್ ಹೇಳಿದರು.
ಹಬ್ಬದ ಅಂಗವಾಗಿ ನಡೆಸುತ್ತಿರುವ ತುರ್ತು ಕಾಮಗಾರಿಗಳ ಬಗ್ಗೆ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಅವರಿಂದ ಮಾಹಿತಿ ಪಡೆದರು. ಈ ವೇಳೆ ಆಯುಕ್ತರು ದೇವಸ್ಥಾನ ರಸ್ತೆಯ ಚೌಕಿ ಮನೆ ಮುಂಭಾಗ ಚರಂಡಿ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ನಂತರ ಮೆಟ್ಟಿಲು ಹೊಳೆ ರಸ್ತೆಯಲ್ಲಿ ಚರಂಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಹಬ್ಬದ ದಿನದಂದು ನಗರದಲ್ಲಿ ಹಾದು ಹೋಗುವ ವಾಹನಗಳ ವಾಹನದಟ್ಟಣೆ ತಡೆಯಲು ನಗರದ ಹೊರವಲಯದ ಗುತ್ತೂರು ಬೈಪಾಸ್ ರಸ್ತೆಗಳ ಮೂಲಕ ಸಂಚರಿಸುವಂತೆ ನೋಡಿಕೊಳ್ಳುವುದು ಸೂಕ್ತ ಎಂದರು.
ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸರು ಗಮನ ಹರಿಸ ಬೇಕೆಂದು. ಜಾತ್ರೆಗೆ ಬರುವ ವಾಹನ ನಿಲುಗಡೆಗೆ ಮುಂಜಾಗ್ರತವಾಗಿ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹರಕೆ ಒಪ್ಪಿಸುವ ಸಮಯದಲ್ಲಿ ಭಕ್ತರಿಗೆ ಬಟ್ಟೆಗಳನ್ನು ಬದಲಿಸಲು ಪ್ರತ್ಯೇಕವಾದ ಸ್ಥಳ ನಿಗದಿ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಾರ್ಡ್‌ಗಳ ಸ್ವಚ್ಛತೆ ಸೇರಿದಂತೆ ಇತರೆ ಮೂಲ ಸೌಲಭ್ಯವನ್ನು ನೋಡಿಕೊಳ್ಳುವಂತೆ ಪೌರಾಯುಕ್ತರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಇತರರು ಇದ್ದರು.