ಕಲಾವಿದರು, ಸಾಹಿತಿಗಳು ಕನ್ನಡ ಭಾಷೆಯ ನಿಜವಾದ ವಾರಸುದಾರರು: ಡಿಂಗ್ರಿ ನರೇಶ್

ಕಲಾವಿದರು, ಸಾಹಿತಿಗಳು ಕನ್ನಡ ಭಾಷೆಯ ನಿಜವಾದ ವಾರಸುದಾರರು: ಡಿಂಗ್ರಿ ನರೇಶ್

ದಾವಣಗೆರೆ, ಮಾ. 16- ಈ ದೇಶದ, ಈ ನೆಲದ, ಕನ್ನಡ ಭಾಷೆಯ ನಿಜವಾದ ವಾರಸುದಾರರು ಕಲಾವಿದರು ಮತ್ತು ಸಾಹಿತಿಗಳು ಎಂದು ರಂಗಕರ್ಮಿ, ನಟ, ನಿರ್ದೇಶಕ ಡಿಂಗ್ರಿ ನರೇಶ್ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಥೀಮ್ ಪಾರ್ಕ್‌ನ ಬಯಲು ರಂಗ ಮಂದಿರಲ್ಲಿ ಇಂದು ನಡೆದ ರಾಷ್ಟ್ರೀಯ ವೃತ್ತಿ ರಂಗಕೋತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿಗೆ ಬಹುದೊಡ್ದ ಶಕ್ತಿ ಇದೆ. ಒಂದು ಸರ್ಕಾರವನ್ನು ಕೆಳಗಿಳಿಸುವ ತಾಕತ್ತು ರಂಗಭೂಮಿ, ರಂಗ ಕಲಾವಿದರಿಗೆ ಇದೆ.  ಕನ್ನಡ ಭಾಷೆಯ ಬೀಜವನ್ನು ಬಿತ್ತಿದವರು ಕಲಾವಿದರು. ದಾವಣಗೆರೆ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯವಾದುದು. ಅನ್ಯ, ಆಶ್ರಯ ನೀಡಿದ ನೆಲ ದಾವಣಗೆರೆ ಎಂದು ಅಭಿಮಾನಪೂರ್ವಕವಾಗಿ ನುಡಿದರು.

ದೇಶವನ್ನು ಎಕ್ಸ್‌ರೇ ತೆಗೆಯಬೇಕಾಗಿದೆ. ಸಾಕಷ್ಟು ಕಾಯಿಲೆಗಳು ಕಾಣಿಸುತ್ತವೆ. ದ್ವೇಷ, ಅಸಮಾನತೆ, ಅಸಹಿಷ್ಣುತೆ. ರಂಗಭೂಮಿ ಬಹುದೊಡ್ಡ ಟ್ಯಾಬ್ಲೆಟ್ ಆಗಿ ಕಾಣಿಸುತ್ತದೆ. ಕಾಯಿಲೆಯನ್ನು ವಾಸಿ ಮಾಡುವ ಪ್ರೀತಿಯ, ಸೌಹಾರ್ದತೆಯ, ಸಂವಿಧಾನದ ಆಶಯಗಳನ್ನು ಈಡೇರಿಸುವ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕಾಗಿದೆ ಎಂದರು.

ಸಾಂಸ್ಕೃತಿಕ ಸೈನ್ಯವನ್ನು ಕಟ್ಟುವ ಅನಿವಾರ್ಯತೆ ಇದೆ. ಪ್ರತಿಯೊಬ್ಬರೂ ಸಹ ಸಾಂಸ್ಕೃತಿಕ ಸೇನಾನಿಗಳಾಗಿ ಕೆಲಸ ಮಾಡಬೇಕಾಗಿದೆ. ಎಲ್ಲಿ ಸಾಂಸ್ಕೃತಿಕ ನೀರು ಹರಿಯುತ್ತದೆಯೋ ಅಲ್ಲಿ ಸೌಹಾರ್ದತೆ ಏರ್ಪಡುತ್ತದೆ ಎಂದು ಹೇಳಿದರು.

ರಂಗಭೂಮಿ ಕಲಾವಿದರು ಸಂಕಷ್ಟಕ್ಕೆ ಈಡಾದರೆ ಕೇಳಬೇಕಾದುದು ಸರ್ಕಾರವನ್ನಲ್ಲ. ಪ್ರಜಾಪ್ರಭುತ್ವವನ್ನು. ಪ್ರಜಾಪ್ರಭುತ್ವ ಯಾವತ್ತು ಜೀವಂತ. ಪ್ರಜಾಪ್ರಭುತ್ವವೇ ಮುಖ್ಯ ಎಂದು ಹೇಳಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ಅಲ್ಪಾವಧಿಯಲ್ಲಿ ಎಂಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದು, ಜನರ ಬಳಿ ರಂಗ ಚಟುವಟಿಕೆಗಳನ್ನು ಕೊಂಡೊಯ್ಯುವ ಮಹಾದಾಷೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ವೃತ್ತಿ ರಂಗೋತ್ಸವ ಕಾರ್ಯಕ್ರಮ ಆಯೋಜನೆಗೆೊಂಡಿದೆ ಎಂದರು.

ಇದೇ ವೇಳೆ ರಂಗ ಕಲಾವಿದೆ ಜಯಲಕ್ಷ್ಮಿ ಹೆಗಡೆ ಹಾಗೂ ರಂಗಕರ್ಮಿ ಡಿಂಗ್ರಿ ನರೇಶ್ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು.

ಗಣೇಶ್ ಅಮ್ಮಿನಗಡ ಅವರು ಕಲಾವಿದೆ ವಿಜಯಲಕ್ಷ್ಮಿ ಅವರೊಂದಿಗೆ ರಂಗ ಸಂವಾದ ನಡೆಸಿಕೊಟ್ಟರು. ಹಿರಿಯ ರಂಗ ಕಲಾವಿದ ಬಾ.ಮ. ಬಸವರಾಜಯ್ಯ, ಜಾನಪದ ಕಲಾವಿದರಾದ ಮಾಗಾನಹಳ್ಳಿ ಮಂಜುನಾಥ್, ಪುರಂದರ ಲೋಕಿಕೆರೆ, ಶೌಕತ್ ಅಲಿ ತುರ್ಚಘಟ್ಟ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಡಾ. ಶೃತಿ ರಾಜ್ ನಿರೂಪಿಸಿದರು. ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಎಸ್.ಎಸ್.ಸಿದ್ಧರಾಜು,ಎನ್.ಟಿ. ಮಂಜುನಾಥ್, ಶಂಕರ್ ಮತ್ತಿತರರು ಉಪಸ್ಥಿತರಿದ್ದರು. ನಂತರ `ನಳಪಾವಡೆ’ ತಮಿಳು ನಾಟಕವನ್ನು ಪಾಂಡಿಚೇರಿ ಕಲಾ ತಂಡದವರು ಪ್ರದರ್ಶಿಸಿದರು.

error: Content is protected !!