ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ಅಗತ್ಯ: ಕೆ.ಎಸ್. ಈಶ್ವರಪ್ಪ ಪ್ರತಿಪಾದನೆ
ದಾವಣಗೆರೆ, ಮಾ.11- ಮೌಢ್ಯವನ್ನೇ ಮೌಲ್ಯಗಳನ್ನಾಗಿ ಬಿತ್ತುತ್ತಿರುವ ಇಂದಿನ ವ್ಯವಸ್ಥೆ ಬದಲಾಗಬೇಕಾದರೆ ನಿರಂತರ ಹೋರಾಟ, ಸಮಾವೇಶ, ಮುಕ್ತ ಚರ್ಚೆಗಳ ಅಗತ್ಯವಿದೆ ಎಂದು ಡಿ.ಆರ್.ಎಂ. ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ವತಿಯಿಂದ ನಗರದ ಎಆರ್‌ಜಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಯುವಜನ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕ್ರಾಂತಿ, ಸ್ವಾತಂತ್ರ್ಯ ಹೋರಾಟ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹೋರಾಟ ಹೊಸ ಸರ್ಕಾರದ ಉದಯಕ್ಕೆ ಕಾರಣವಾಗಿದ್ದೂ ಸೇರಿದಂತೆ, ಅನೇಕ ಹೋರಾಟಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.
ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟಕ್ಕೂ ಮುನ್ನ ನಮ್ಮ ಅಂತರಗ ಶುದ್ಧಿ ಮಾಡಿಕೊಳ್ಳಬೇಕಿದೆ. ನಾನು ಏನು? ನಮ್ಮ ನಡೆ, ನಮ್ಮ ಆದರ್ಶಗಳೇನು? ಎಂಬುದನ್ನು ತಿಳಿದುಕೊಳ್ಳಬೇಕು. ಸಂದರ್ಭಕ್ಕೆ ತಕ್ಕಂತೆ ಧರಿಸುವ ಮುಖವಾಡವನ್ನು ದೂರ ಎಸೆದು ಶರಣರ ಆಶಯದಂತೆ ನಡೆ-ನುಡಿ ಒಂದಾಗಬೇಕಿದೆ. ಇದು ನಮ್ಮವಿರುದ್ಧ ನಾವು ಮಾಡಿಕೊಳ್ಳುವ ಹೋರಾಟವಾಗಿದೆ ಎಂದು ವಿಶ್ಲೇಷಿಸಿದರು.
ವೈಚಾರಿಕತೆ, ವೈಜ್ಞಾನಿಕತೆ, ಆಚರಣೆ ಇವಾವುಗಳ ಬಗ್ಗೆಯೂ ಯುವಜನತೆಗೆ ಸ್ಪಷ್ಟತೆ ಇಲ್ಲ. ಈ ಅಪಕ್ವತೆಯನ್ನೇ ರಾಜಕೀಯ ಅನೂಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಕಾರಣ, ಮೊದಲು ತಾವು ವಿಚಾರವಂತರಾಗಬೇಕು. ನಿಮ್ಮ ಪಕ್ವತೆ ಸಮಾಜಕ್ಕೆ ತಲುಪಬೇಕು. ಆಗ ನಡೆಸುವ ಎಲ್ಲಾ ಹೋರಾಟಗಳು ಸಫಲವಾಗುತ್ತವೆ ಎಂದರು.
ಪ್ರೀತಿ, ಸಮಾನತೆ, ವಾಕ್ ಸ್ವಾತಂತ್ರ್ಯ, ಅಂತಃಕರಣ, ದಯೆ, ಮಾನವೀಯತೆ ಮೊದಲಾದ ಮೌಲ್ಯಗಳನ್ನು ಉಳಿಸಿಕೊಂಡು ಮುಂದಿನ ತಲೆ ಮಾರಿಗೆ ಕೊಂಡೊಯ್ಯಬೇಕಿದೆ. ಅದಕ್ಕಾಗಿ ನಾವು ಶುದ್ಧರಾಗಬೇಕಿದೆ. ಈ ಶುದ್ಧತೆಯೇ ಇಂದಿನ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರ ಎಂದು ಹೇಳಿದರು.
`ಲೈಂಗಿಕ ಅಪರಾಧಗಳು – ಕಾರಣ ಮತ್ತು ಪರಿಹಾರ’ ಕುರಿತು ಮನೋಚಿಕಿತ್ಸಕ ವಸಂತ್ ನಡವಳ್ಳಿ ಮಾತನಾಡುತ್ತಾ, ನಮ್ಮ ಬದುಕಿನ ದಾರಿಯೇ ಹಿಂಸೆಯಾಗಿದೆ. ಹಿಂಸೆ ಜೀವನದ ಅವಿಭಾಜ್ಯ ಅಂಗವಾಗಿದೆ. ಇದೇ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಕಾರಣವೂ ಆಗಿದೆ ಎಂದು ಹೇಳಿದರು.
ವಾಸ್ತವ ಭಿನ್ನವಾಗಿದೆ
ಹನ್ನೆರಡನೇ ಶತಮಾನದಲ್ಲಿ ಶರಣ ಪರಂಪರೆಯಲ್ಲಿ ನಡೆದ ಸಮಾನತೆಯ ಕ್ರಾಂತಿ, ಸ್ವಾತಂತ್ರ್ಯಾ ನಂತರದಲ್ಲಿ ನಾವು ರಚಿಸಿಕೊಂಡು ಅಂಗೀಕರಿಸಿದ ಸಂವಿಧಾನ ಇವೆಲ್ಲವೂ ನಮ್ಮನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯಬೇಕಿತ್ತು. ನಾನು ಸಾರ್ಭಭೌಮ ಎಂದು ಗರ್ಭದಿಂದ ಮೆರೆಯಬೇಕಿತ್ತು. ಆದರೆ ವಾಸ್ತವ ಭಿನ್ನವಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.
ಸಂವಿಧಾನ ಬದಲಿಸುವ ಕೂಗು, ವೇದ-ಉಪನಿಷತ್ ಓದಿದರೆ ಮಾತ್ರ ರಾಜಕೀಯದಲ್ಲಿ ಸ್ಪರ್ಧೆಗೆ ಅವಕಾಶ ಕೊಡುವ ಮಾತುಗಳು ಕೇಳಿ ಬರುತ್ತಿವೆ ಎಂದಾದರೆ, ಎಂತಹ ಅಪಾಯದ ಸ್ಥಿತಿಯಲ್ಲಿ ನಾವಿದ್ದೇವೆ? ಆತ್ಮ ಸಾಕ್ಷಿ ಕದಡುವ ಸನ್ನಿವೇಶಗಳು ನಡೆಯುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಇಂದು-ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ವರದಿಯಾಗುತ್ತಿರಲಿಲ್ಲ. ಇಂದು ಸಾಮಾಜಿಕ ಜಾಲ ತಾಣ, ಮಾಧ್ಯಮ ಹಾಗೂ ಕಾನೂನುಗಳ ಕಾರಣದಿಂದಾಗಿ ಜನರಿಗೆ ತಿಳಿಯುತ್ತಿದೆ ಎಂದರು.
ದೇಶದಲ್ಲಿ ನಡೆಯುವ ಶೇ.90ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗುವುದಿಲ್ಲ ಎನ್ನುವುದು ಆಘಾತಕಾರಿ ವಿಷಯ. ಶೇ.80ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಪರಿಚಿತರು, ಸುತ್ತ ಮುತ್ತಲಿನ ವ್ಯಕ್ತಿಗಳೇ ಭಾಗಿಯಾಗಿರುತ್ತಾರೆ. ಮಕ್ಕಳ ಮೇಲೆ ನಡೆಯುವ ಶೇ.95ರಷ್ಟು ಅತ್ಯಾಚಾರ ಪ್ರಕರಣಗಳಲ್ಲಿ ಕುಟುಂಬದವರೇ ಇರುತ್ತಾರೆ ಎಂದರು.
ಅತ್ಯಾಚಾರಕ್ಕೆ ಕಠಿಣ ಶಿಕ್ಷೆ ಇರುವ ಅರಬ್ ದೇಶದಲ್ಲೂ, ಕಠಿಣ ಕಾನೂನು ಇರುವ ಅಮೆರಿಕಾ, ಯೂರೋಪ್ ದೇಶಗಳಲ್ಲಿ ಅತ್ಯಾಚಾರಗಳು ನಡೆಯುತ್ತಿವೆ. ಹೀಗಾಗಿ ಶಿಕ್ಷೆ ವಿಧಿಸುವುದರಿಂದ ಅಪರಾಧ ತಡೆಯಬಹುದೆಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಶಿಕ್ಷೆಯಿಂದ ಬದಲಾವಣೆ ತರುವ ಭ್ರಮೆ ಬಿಟ್ಟು, ಬೇರೆಯದ್ದೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಎಐಡಿವೈಓ ರಾಜ್ಯ ಉಪಾಧ್ಯಕ್ಷ ವಿಜಯ್ ಕುಮಾರ್ ಆಶಯ ನುಡಿಗಳನ್ನಾಡಿದರು.
ಇಂದಿನ ಯುವ ಮನಸ್ಸಿನ ತಲ್ಲಣಗಳು ಕುರಿತು ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿದರು. ಜಿಲ್ಲಾ ಸಂಚಾಲಕ ಪರಶುರಾಮ್ ಪಿ. ಅಧ್ಯಕ್ಷತೆ ವಹಿಸಿದ್ದರು. ಎಆರ್‌ಜಿ ಕಾಲೇಜು ಪ್ರಾಂಶುಪಾಲ ಸಿ.ಬಿ. ಬೋರಯ್ಯ, ಸುನಿಲ್ ಉಪಸ್ಥಿತರಿದ್ದರು. ಕೆ. ಅನಿಲ್ ಕುಮಾರ್ ನಿರೂಪಿಸಿದರು. ಸಂಘಟಕ ಗುರು ಪಲ್ಲಾಗಟ್ಟೆ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು.