ಹರಪನಹಳ್ಳಿ : ರಾಷ್ಟ್ರೀಯ ಸೇವಾ ಯೋಜನೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಮೂರ್ತಿ
ಹರಪನಹಳ್ಳಿ,ಮಾ.11- ಸೇವೆ ಇಲ್ಲದ ಜೀವನ ಅದು ಜೀವನವೇ ಅಲ್ಲ ಎಂದು ಪ್ರಾಚಾರ್ಯ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ದೈನಂದಿನ ಚಟುವಟಿಕೆ ಕಾರ್ಯಕ್ರಮದಡಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ. ಸಂತೆ ಮೈದಾನ ಕಾಲೇಜು ಆವರಣ ರಸ್ತೆಗಳ ಭಾಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತು, ಅದನ್ನು ಬದುಕಿನೊಡನೆ ನೇರ ಸಂಪರ್ಕವಿಟ್ಟು ಕೊಳ್ಳಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜ ಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ.
ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ
ಪ್ರತಿಫಲಾಪೇಕ್ಷೆ ಇಲ್ಲದೆ ಅರ್ಪಣಾ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ
ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು ಎಂದರು.
ಕಾರ್ಯಕ್ರಮ ಅಧಿಕಾರಿ ಡಾ.ಎಂ. ರಾಜ ಶೇಖರ್ ಮಾತನಾಡಿ, ರಾಷ್ಟ್ರದ ಅನೇಕ ಕಾಲೇಜಿನ ಸಾವಿರಾರು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಈಗಾಗಲೇ ಸ್ವಯಂ ಸೇವಕರಾಗಿ ದೈನಂದಿನ ಮತ್ತು ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ಧಾರೆ ಎರೆಯುತ್ತಿದ್ದಾರೆ.
ಸೇವೆಯ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ಒಲಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶವೂ ಇದೇ ಆಗಬೇಕು.
ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರವೂ ಸೇವೆ, ಅನುಕಂಪದ ಸಾರ್ಥಕ ಜೀವಿಯಾಗಬೇಕು. ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎರಡು ವರ್ಗದ ಅಂದರೆ, ಬಡ ಮತ್ತು ಶ್ರೀಮಂತ ವಿದ್ಯಾರ್ಥಿಗಳಿರುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಶ್ರಮದ ಬದುಕಿನ ಅನುಭವವಿರುತ್ತದೆ, ಆದರೆ ಶ್ರೀಮಂತ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದಾಗ ಇವರಿಬ್ಬರ ಮಿಶ್ರಣದಿಂದ ಸಮಾನತಾ ಭಾವನೆ ಮೂಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಕೆಎಸ್ಆರ್ಟಿಸಿ ಬಸ್ ಡಿಪೋ ದ ಘಟಕ ವ್ಯವಸ್ಥಾಪಕರಾದ ಮಂಜುಳಾ, ಮಹಾ ವಿದ್ಯಾಲಯದ ನ್ಯಾಕ್ ಸಂಯೋಜಕ, ದೈಹಿಕ ಶಿಕ್ಷಣ ನಿರ್ದೇಶಕ ಎನ್. ನವಾಜ್ ಬಾಷಾ, ರವಿ ಸೊನ್ನದ, ಡಾ. ಅಣ್ಣೇಶ್, ಎಂ.ಜಿ ಕೊಟ್ರಗೌಡ, ಎನ್. ಕಲ್ಪನಾ, ಚೆನ್ನಪ್ಪ, ಕೆಎಸ್ಆರ್ಟಿಸಿ ಡಿಪೋದ ಸಂಚಾರಿ ನಿರೀಕ್ಷಕ ಕೊಟ್ರೇಶ್, ಎಂ ಮಂಜುನಾಥ್, ಸಹಾಯಕ ಸಂಚಾರಿ ನಿರೀಕ್ಷಕ ಶಂಕರ್, ಕಾಲೇಜು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.