ಮಾನ್ಯರೇ,
ಟ್ಯಾಕ್ಸ್ ಅಥವಾ ತೆರಿಗೆ ಎಂದರೆ ದೇಶದ ಪ್ರತಿ ನಾಗರಿಕ ಕಡ್ಡಾಯವಾಗಿ ಸರ್ಕಾರಕ್ಕೆ ನೀಡಬೇಕಾದ ವಂತಿಗೆ. ಅದೇ ರೀತಿ ಆದಾಯ ತೆರಿಗೆ ಎಂದರೆ ಯಾವುದೇ ವ್ಯಕ್ತಿ ಮೂಲತಃ ತನ್ನ ಸ್ವಂತದ್ದಲ್ಲದ, ಎಲ್ಲಾ ಪ್ರಜೆಗಳಿಗೆ ಸೇರಿದ ಈ ದೇಶದ ಸಂಪತ್ತನ್ನು ಬಳಸಿಕೊಂಡು ಗಳಿಸಿದ ಆದಾಯಕ್ಕೆ ನೀಡಲೇಬೇಕಾದ ಆದಾಯದ ಭಾಗ. ಎಲ್ಲರಿಗೂ ಸೇರಿದ ಸಂಪತ್ತು, ಸರ್ಕಾರ ನೀಡಿರುವ ಮೂಲಭೂತ ಸೌಕರ್ಯ ಬಳಸಿಕೊಂಡು ನೀಡುವ ಆದಾಯ ತೆರಿಗೆಗೆ ನಾನು ಕೊಟ್ಟದ್ದು ಎನ್ನುವುದು ಅರ್ಥವಿಲ್ಲದ್ದು ಎನಿಸುತ್ತದೆ.
ದೇಶದಲ್ಲಿ ಮಾನಸಿಕ ಮತ್ತು ದೈಹಿಕ ಶ್ರಮಿಕರಿಗೆ ಸರಿಯಾದ ಪ್ರತಿಫಲ ಸಿಗುತ್ತಿದೆಯೋ ಇಲ್ಲವೋ ಎನ್ನುವುದನ್ನು ಸರ್ಕಾರಗಳು ಸರ್ವೇ ಮಾಡಿ ಆರ್ಥಿಕ ನೀತಿ ಮಾಡಿದರೆ ಒಳ್ಳೆಯದು ಎನಿಸುತ್ತದೆ. ಇಲ್ಲವಾದಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆ ಮೂರನೇ ಸ್ಥಾನ ಎನ್ನುವುದು ಬಾಲಿಷವಾಗುತ್ತದೆ.
ಏಕೆಂದರೆ ಬೆಳವಣಿಗೆಯ ಲಾಭ ಕೇವಲ 10-15% ಜನರಲ್ಲಿ ಮಾತ್ರ ಶೇಖರಣೆ ಆಗಿರುತ್ತೆ. ಜೀವನಾಧಾರ ಮಟ್ಟ (subsistence level) ಕ್ಕೂ ಮೀರಿದ ಆದಾಯಗಳಿಗೆ ಹೆಚ್ಚು, ಹೆಚ್ಚು ಆದಾಯ ತೆರಿಗೆ ಹಾಕಿ ಅಷ್ಟೂ ಆದಾಯ ಇಲ್ಲದವರಿಗೆ ಹಂಚುವುದು ಎಲ್ಲರಿಗೂ ಸೇರಿದ ದೇಶದ ಸಂಪತ್ತಿನ ಹಂಚಿಕೆ ಎನಿಸುತ್ತದೆ. ದೇಶದ ಜನರ ಶ್ರಮ ಮತ್ತು ಸಂಪತ್ತನ್ನು ಉಪಯೋಗ ಮಾಡಿಕೊಂಡು ಬಹಳ ಲಾಭ ಮಾಡಿಕೊಳ್ಳುತ್ತಿರುವ ಕಂಪನಿಗಳ ಆದಾಯದ ಮೇಲೆ 80-90% ತೆರಿಗೆ ಹಾಕಿದರೆ ತಪ್ಪೆನಿಸುತ್ತಾ ?
ಕೊಟ್ರೇಶ್ ಪಿ.ಐರಣಿ, ದಾವಣಗೆರೆ.