ಮಾನವನನ್ನು ಮಹಾದೇವನಾಗಿಸಿದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು

ಮಾನವನನ್ನು ಮಹಾದೇವನಾಗಿಸಿದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು

ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ

ಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕೆಯ ಃ 

ಚಕ್ಷುರುನಿರ್ಮಿಲಿತಂ ಏನ್ ತಶ್ರೀ ಗುರುವೇ ನಮಃ

ಕತ್ತಲೆಯಿಂದ ಬೆಳಕಿನಡೆಗೆ ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಅನೇಕ ಮಹಾನ್ ಪುಣ್ಯ ಪುರುಷರಲ್ಲಿ ಅತ್ಯಂತ ಪುರಾತನ ಇತಿಹಾಸ ಹೊಂದಿದ ವೀರಶೈವ ಪರಂಪರೆಯನ್ನು, ಅದರ ಮಹತ್ವವನ್ನು ಮತ್ತು ಅದರ ಆಚಾರ-ವಿಚಾರಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟ ಮಾನವನನ್ನು ಮಹಾದೇವನನ್ನಾಗಿಸಿದ ಕೀರ್ತಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.

ಮಾನವ ಧರ್ಮಕ್ಕೆ ಜಯವಾಗಲ

 ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಎಂಬ ದಿವ್ಯ ಸಂದೇಶವನ್ನು ಸಾರಿದ ಮತ್ತು ಮಾನವನ ದಾನವ ಗುಣಗಳನ್ನು ದಹಿಸಿ, ಅವನನ್ನು ಮಹಾದೇವನನ್ನಾಗಿಸಿದ ಅಪೂರ್ವ ಸಿದ್ಧಾಂತವನ್ನು ಜಗತ್ತಿಗೆ ನೀಡಿದ,

ಜೀವಿ-ಶಿವನಾಗುವ, ಅಂಗ-ಲಿಂಗ ವಾಗುವ,

ನೀರು-ತೀರ್ಥವಾಗುವ,ಅನ್ನ-ಪ್ರಸಾದವಾಗುವ

ಅತ್ಯದ್ಭುತ ಸಿದ್ಧಾಂತವನ್ನು ಜಗತ್ತಿಗೆ ಬೋಧಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಗತ್ತಿನ ಕಲ್ಯಾಣಕ್ಕಾಗಿ ಪರಶಿವನ ಆದೇಶಾನುಸಾರ ಕೊಲ್ಲಿಪಾಕಿ ಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಅವಿರ್ಭವಿಸಿದ ಪುಣ್ಯ ದಿನವೇ ಪಾಲ್ಗುಣ ಶುದ್ಧ ತ್ರಯೋದಶಿ.

ದಿನಾಂಕ 12.3.2025 ರ ಬುಧವಾರ ಎಲ್ಲೆಡೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯು ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಅಲ್ಲದೆ ಕೆಲವು ಲೇಖನಗಳಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಆಂಧ್ರಪ್ರದೇಶದ ಕದ್ರಿಕಿ ಎಂಬ ಸ್ಥಳದಲ್ಲಿ ಹುಟ್ಟಿದರೆಂದು ನಂಬಲಾಗಿದೆ ಮತ್ತು ಕೆಲವೂಂದು ಕಾದಂಬರಿಗಳು ಇವರನ್ನು ಪರ ಶಿವನ ಅವತಾರವೆಂದು ಗುರುತಿಸುತ್ತದೆ. ಶ್ರೀ ಜಗದ್ಗುರುಗಳು ಬಾಲ್ಯದಲ್ಲಿ ಭಕ್ತಿ ಪರವಶತೆಯನ್ನು ಹೊಂದಿ ಋಷಿಗಳ ಜೊತೆಯಲ್ಲಿ ನಿರಂತರ ಜ್ಞಾನ ಸಾಧನೆ ನಡೆಸಿ ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ನಡೆಸಿದರು.

ಅಂತೆಯೇ ಮಾನವ ಕುಲದ ಏಳಿಗೆಗೆ ತನ್ನ ಇಡೀ ಬದುಕನ್ನು ಮುಡಿಪಾಗಿಟ್ಟ ಪುಣ್ಯಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ತ್ಯಾಗ, ಅಧ್ಯಾತ್ಮಿಕ ಶ್ರದ್ಧೆ, ಜನಪರ ಕಾಳಜಿ, ಭವ ಬಂಧಗಳಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಿ ಅವರ ಬದುಕನ್ನು ಹಸನು ಮಾಡಲು ಅವರು ಮಾಡಿರುವ ಪ್ರಾಮಾಣಿಕ ಪ್ರಯತ್ನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವು ಸಾಕ್ಷಿಯಾಗಿ ನಿಲ್ಲುತ್ತದೆ.

ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಉಲ್ಲೇಖ ವಾದ ಮೊದಲ ಪರಿಚ್ಛೇದದ ಮೊದಲ ಚರಣದಲ್ಲಿ ಶ್ರೀ ಜಗ ದ್ಗುರು ರೇಣುಕಾಚಾರ್ಯರು ಶ್ರೀ ಅಗಸ್ತ್ಯ ಮಹಾಮುನಿಗೆ ಶಿವಾದೈತ ಸಿದ್ದಾಂತವನ್ನು ಬೋಧಿಸುವ ಪ್ರಥಮ ಚರಣದ ಉಲ್ಲೇಖವು ಹೀಗಿದೆ.

ತ್ರೈಲೋಕ್ಯ ಸಂಪದಾಲೇ ಖ್ಯಾ

ಸಮುಲ್ಲೇಖನಬಿತ್ತಯೇ

ಸಚ್ಚಿದಾನಂದರೂಪಾಯ 

ಶಿವಾಯ ಬ್ರಹ್ಮಣೇ ನಮಃ !!

ಮೂರು ಲೋಕವೆಂಬ ಸಂಪ ದ್ರೂಪವಾದ ಚಿತ್ರದ ಬರವಣಿಗೆಗೆ ಆಧಾರವಾದ ಗೋಡೆಯಂತಿರುವ ಸತ್,ಚಿತ್. ಆನಂದ ರೂಪ ಶಿವ ನಾದ ಬ್ರಹ್ಮನಿಗೆ ನಮಸ್ಕಾರ. ಎಂದು ಸಕಲ ಚರಾಚರ ವಸ್ತು ಗಳಲ್ಲಿ ಶಿವ ಸ್ವರೂಪಿಯನ್ನು ಕಂಡು ಸಾಕ್ಷಾತ್ಕಾರಗೊಂಡು, ಪರಮ ಪೂಜ್ಯರು ನುಡಿದ ನುಡಿಗಳನ್ನು ಇಲ್ಲಿ ವಕಾಣಬಹುದಾಗಿದೆ.

ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗದೆ, ತಾವು ಜನಿಸಿದ ಕೊಲ್ಲಿಪಾಕಿಯಲ್ಲಿ ಎಲ್ಲಾ ಜಾತಿ, ಜನಾಂಗಗಳಿಗೂ 18 ಮಠಗಳನ್ನು ಸ್ಥಾಪಿಸಿ ಅದಕ್ಕೆ ಶಿಷ್ಯರನ್ನು ನೇಮಿಸಿ ಸಂಸ್ಕಾರ ನೀಡಿದ್ದು, ಶ್ರೀ ಜಗದ್ಗುರು ರೇಣುಕಾಚಾರ್ಯರ ಮೊದಲ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಅದನ್ನು ಇಂದಿಗೂ 18 ಮಠಗಳ ಕುರುಹು ಕೊಲ್ಲಿಪಾಕಿಯಲ್ಲಿ ಸಾಕ್ಷಿಯಾಗಿರುವುದನ್ನು ನಾವು ಕಾಣಬಹುದಾಗಿದೆ.

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ!

ಹೊರಕೋಣೆಯಲ್ಲಿ ಲೋಗರಾಟಗಳನಾಡು! 

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ! 

ವರಯೋಗ ಸೂತ್ರವಿದು – ಮಂಕುತಿಮ್ಮ !!

ಎಂಬ ಡಿವಿಜಿಯವರ ನುಡಿಗಳನ್ನು ಗಮನಿಸಿದಾಗ, ಮನವೆಂಬ ಆಲಯದಲ್ಲಿ ಸದಾ ಉಕ್ಕುವ ಭವದ ವಿಚಾರಗಳು ಏನೇ ಇದ್ದರೂ ನಿನ್ನ ಮೌನದ ಮನೆಯಲ್ಲಿ ಒಬ್ಬನೇ ವಿರಮಿಸಿದಾಗ ಮಾತ್ರ ಮನುಷ್ಯನಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ ಮತ್ತು ಅದು ಅಧ್ಯಾತ್ಮದಲ್ಲಿ ಮಾತ್ರ ಸಾಧ್ಯ ಎಂಬುದನ್ನು ತಮ್ಮ ಅಧ್ಯಾತ್ಮಿಕ ಸಾಧನೆಯಲ್ಲಿ ಕಂಡುಕೊಂಡ ಪರಮಪೂಜ್ಯರು ಅಧ್ಯಾತ್ಮದ ಅರಿವಿಗೆ ಸಂಸ್ಕಾರದ ಅಗತ್ಯತೆಯನ್ನು ಮನಗಂಡರು.

ನಂತರ ಶ್ರೀ ಜಗದ್ಗುರುಗಳು ಧರ್ಮ ಸಂಸ್ಕಾರ ನೀಡುವ ಪರಂಪರೆಯನ್ನು ಹುಟ್ಟು ಹಾಕಿ ಮಲಯಾ ಮಾಚಲದಲ್ಲಿ ಬರುವ ತರ ಶ್ರೇಣಿಯಲ್ಲಿ ಪೃಥ್ವಿ ತತ್ವದ ಸಂಕೇತವಾದ ಹಸಿರು ಧ್ವಜವನ್ನು ಹಿಡಿದು ಭದ್ರಾ ನದಿ ತಟದಲ್ಲಿ ಜಗದ್ಗುರು ವೀರ ಸಿಂಹಾಸನ ರಂಭಾಪುರಿ ಪೀಠವನ್ನು ಸ್ಥಾಪಿಸಿ ದರು. ವೀರಶೈವ ಸಂಪ್ರದಾಯದಂತೆ ಅಷ್ಟಾ ವರ್ಣಗಳಾದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಪಾದೋದಕ, ಪ್ರಸಾದ ಗಳೆಂಬ ಆಚಾರಗಳಿಂದ ಮಾನವನು ಮಹಾ ದೇವನಾಗಬಹುದು ಎಂದು ಪ್ರಾಯೋಗಿಕ ವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜನಸಾಮಾನ್ಯರಿಗೆ ತಿಳಿಸಿಕೊಟ್ಟರು.

ಇದೇ ಮಾದರಿಯಲ್ಲಿ ಪಂಚಪೀಠಾ ಧೀಶ್ವರರು ಪೃಥ್ವಿ, ಜಲ, ಆಗ್ನಿ, ವಾಯು, ಆಕಾಶಗಳೆಂಬ ಪಂಚ ತತ್ವಗಳಿಂದ ಉದ್ಭವಗೊಂಡು ರಂಭಾಪುರಿ, ಉಜೈನಿ ,ಕೇದಾರ, ಶ್ರೀಶೈಲ, ಕಾಶಿ ಎಂಬ ಪಂಚ ಪೀಠಗಳಿಂದ ಧರ್ಮ ಸಂಸ್ಕಾರಗಳನ್ನು ನೀಡುತ್ತಾ ಬಂದಿವೆ. ಅಂತೆಯೇ ವೀರ, ನಂದಿ, ಭೃಗಿ, ವೃಷಭ, ಸ್ಕಂದ ಎಂಬ ಪಂಚ ಗೋತ್ರಗಳಿಂದ ಹಾಗೂ ಪಡುವಡಿ. ವೃಷ್ಟಿ, ಲಂಬನ. ಮುಕ್ತಾಗುಳ್ಳ ಪಂಚವರ್ಣ, ಎಂಬ ಸೂತ್ರ ಅಥವಾ ಬಗೆಗಳಿಂದ ಕರೆಯಲ್ಪಡುತ್ತವೆ.

ಮತ್ತು ರೇಣುಕ, ದಾರುಕ, ಘಂಟಾಕರ್ಣ, ದೇನುಕರ್ಣ, ವಿಶ್ವಕರ್ಣ, ಎಂಬ ಶಾಖೆಗಳನ್ನು ಒಳಗೊಂಡು ಜಾತಿ/ಲಿಂಗ ಭೇದಗಳಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವ ವೀರಶೈವ ಧರ್ಮದ ಸಂಪ್ರದಾಯದಂತೆ ಇಷ್ಟಲಿಂಗವನ್ನು ಧರಿಸಿ ಭಕ್ತ, ಮಹೇಶ, ಪ್ರಸಾದ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಷಟ ಸ್ಥಲಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಎಲ್ಲರಲ್ಲೂ ಧರ್ಮ ಸಂಸ್ಕಾರಗಳನ್ನು ಬಿತ್ತಿ ಜನ ಸಾಮಾನ್ಯರ ಬಾಳಿಗೆ ಬೆಳಕಾಗಿವೆ.

ಶ್ರೀ ಮದ್ ರಂಭಾಪುರಿ ಪೀಠದಲ್ಲಿ ಈಗಿರುವ ಪರಮ ಪೂಜ್ಯರು 121ನೇ ಪೀಠಾಧಿಪತಿಗಳಾಗಿದ್ದು, ಜಗದ್ಗುರು ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ!! ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ,

ಶಾಂತಿ ಸಮೃದ್ಧಿ ಸರ್ವರಿಗಾಗಲಿ

ಎಂಬ ಉದಾತ್ತ ಸಂದೇಶಗಳನ್ನು ಮಾನವ ಕುಲಕ್ಕೆ ಸಾರುತ್ತಾ ಧರ್ಮ ಜಾಗೃತಿಗಾಗಿ ಪಂಚಪೀಠಗಳನ್ನು ಮೊದಲು ಮಾಡಿಕೊಂಡು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂ ದಲೇ ವಿಶ್ವಕ್ಕೆ ಶಾಂತಿ ಎಂಬ ಧ್ಯೇಯ ವಾಕ್ಯದಡಿ ನಿರಂತರವಾಗಿ ಜನರ ಕಲ್ಯಾಣಕ್ಕೆ ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ.

ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಕಿಕೊಟ್ಟ ವೀರಶೈವ ಪರಂಪರೆಯನ್ನು ಅದರ ಆಚಾರ. ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ಅರಿತುಕೊಳ್ಳಬೇಕು ಎಂಬ ತತ್ವವನ್ನು ಪ್ರಚಾರ ಮಾಡುವಲ್ಲಿ ಅಧ್ಯಾತ್ಮ ಮತ್ತು ತತ್ವಶಾಸ್ತ್ರ ಅಹಂ ಬ್ರಹ್ಮಾಸಿ ಮತ್ತು ಶಿವೋಹಂ ಎಂಬ ತತ್ವಗಳಿಗೆ ವೀರಶೈವ ಚಿಂತನೆಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಗಳನ್ನು ನೀಡಿ

ಅವಮಾನಿತ ವರ್ಗಗಳನ್ನು ಪ್ರೀತಿಸಿ

ಧಾರ್ಮಿಕ ಶಿಕ್ಷಣವನ್ನು ನೀಡಿ

ಸರ್ವರೂ ಸಮಾನರು ಎಂಬ ಸದ್ಭಾವನೆ ಯೊಂದಿಗೆ

ಲಿಂಗಾಯತ ಧರ್ಮದ ಮೂಲ ಸಿದ್ಧಾಂತಗಳನ್ನು ಪ್ರತಿ ಪಾದಿಸಿ ವೀರಶೈವ ಸಿದ್ದಾಂತದ ಪರಂಪರೆಯನ್ನು ಬಲಪಡಿಸಲು ತಮ್ಮ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಎಲ್ಲ ಪರಮಪೂಜ್ಯ  ಜಗದ್ಗುರು ಪಂಚಾಚಾರ್ಯರಿಗೆ ಭಕ್ತ ಸಮೂಹವು ಅಪಾರ ಅಭಿಮಾನ, ಪ್ರೀತಿ, ಗೌರವಗಳನ್ನು ಇಟ್ಟುಕೊಂಡು ಸರ್ವರೂ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಯಂತಿಯನ್ನು ಆಚರಿ ಸುತ್ತಿರುವುದು ಶ್ರೀ ಜಗದ್ಗುರುಗಳು ಹಾಕಿಕೊಟ್ಟ ಭಕ್ತಿ ಮಾರ್ಗಕ್ಕೆ ಮತ್ತು ಭಗವಂತನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಇಷ್ಟ ಲಿಂಗಪೂಜೆ ದೇವರ ಒಳಹರಿವು ಸಮಾಜವನ್ನು ಒಂದು ಗಟ್ಟುವ ಪರಿ ಶಿವಾದ್ವೈತ ಸಿದ್ಧಾಂತಗಳು ಕರ್ಮ ಮುಕ್ತ ಜೀವನ ಪ್ರಜ್ಞಾಪೂರ್ಣ ಜೀವನ ತತ್ವಜ್ಞಾನವನ್ನು ಅಧ್ಯಾತ್ಮಿಕ ಅನುಭವದೊಂದಿಗೆ ಬೆಸೆದು ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಯಸಿದ ಶ್ರೀಜಗದ್ಗುರುಗಳು ವೀರಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಸಮಾಜದ ಸಮಾನತೆ ಧಾರ್ಮಿಕ ಸಾಮರಸ್ಯ ಮತ್ತು ಅಧ್ಯಾತ್ಮಿಕ ಪ್ರಗತಿಗೆ ಅದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿ ಅವರ ಬದುಕನ್ನು ಹಸನು ಮಾಡಿದ ಕೀರ್ತಿ ವಿಶ್ವ ವ್ಯಾಪಿಯಾಗಿದೆ. ಅದಕ್ಕೆ ಇಂಬುಕೊಡುವಂತೆ ಒಂದು ಪ್ರಸಂಗವು ಶರಣ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ವೀರಶೈವ ಸಿದ್ಧಾಂತದ ಆಚಾರಗಳ ಅಡಿಯಲ್ಲಿ ಅಧ್ಯಾತ್ಮ ಸಾಧನೆ ಮಾಡಿದ ಅಕ್ಕನನ್ನು ಕುರಿತು ಚೆನ್ನಬಸವಣ್ಣನು

ತನುವಿನೊಳಗಿದ್ದು ತನುವಗೆದ್ದವಳು

ಮನದೊಳಗಿದ್ದು ಮನವಗೆದ್ದವಳು

ವಿಷಯದೊಳಗಿದ್ದು ವಿಷಯಗೆದ್ದವಳು

ಭವಿಯ ಸಂಗದೊಳಿದ್ದು ಭವವ ಗೆದ್ದವಳು !!

ಎಂದು ಗೌರವದ ಮಾತುಗಳನ್ನಾಡುತ್ತಾರೆ.

ಅಂತೆಯೇ  ದಿನಾಂಕ 12.3.2025 ರ
ಶ್ರೀ ಗುರು ರೇಣುಕಾಚಾರ್ಯರ ಜಯಂತಿ ಎಲ್ಲೆಡೆಯ ಸಡಗರ, ಸಂಭ್ರಮಗಳಿಂದ ಸಮಸ್ತ ವೀರಶೈವ
ಲಿಂಗಾಯತ ಭಕ್ತರ ಸಮೂಹವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಅಂತೆಯೇ ದಾವಣಗೆರೆಯ ಶ್ರೀ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ಯುಗಮಾನೋತ್ಸವ ಸಮಾರಂಭವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು (ಪುರವರ್ಗ ಮಠ ಶ್ರೀ ಕ್ಷೇತ್ರ ಆವರಗೊಳ್ಳ) ಇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಗೌರವಾಧ್ಯಕ್ಷರಾದ ಶ್ರೀ ಉಳುವಯ್ಯ ಮತ್ತು ಎಲ್ಲ ಸದಸ್ಯರು ಹಾಗೂ ಭಕ್ತರ ಸಹಯೋಗದಲ್ಲಿ ಮತ್ತು ಜಗಳೂರು ತಾಲ್ಲೂಕಿನಲ್ಲಿ
ಪರಮ ಪೂಜ್ಯ ಶ್ರೀ ಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಶ್ರೀ  1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಅನೇಕ ಗಣ್ಯರ ನೇತೃತ್ವದಲ್ಲಿ ರುದ್ರಾಭಿಷೇಕ, ಕಳಸ, ಸಾರೋಟು, ವಾದ್ಯ ವೈಭವಗಳಿಂದ ಮೆರವಣಿಗೆ ಮೂಲಕ
ಶ್ರೀ ಗುರು ರೇಣುಕಾಚಾರ್ಯರ ಜಯಂತಿಯ ಯುಗಮಾನೋತ್ಸವ ಸಮಾರಂಭವನ್ನು ಆಚರಿಸಲಾಗುತ್ತದೆ

ಶ್ರೀ ಮದ್ ರಂಭಾಪುರಿ ಪೀಠದಲ್ಲಿಯೂ ಸಹ  ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವೀರಶೈವ ಲಿಂಗಾಯತ ಸಿದ್ದಾಂತಗಳ ಆಚಾರ-ವಿಚಾರಗಳ ಮೂಲಕ ಪಂಚಪೀಠಗಳನ್ನು ಮೊದಲು ಮಾಡಿಕೊಂಡು ಮಾನವನ ಕಲ್ಯಾಣಕ್ಕೆ ವೀರಶೈವ ಪರಂಪರೆಯ ಹೆಗ್ಗಳಿಕೆ ಮತ್ತು ಅದರ ಶ್ರೀಮಂತಿಕೆಯನ್ನು ಪರಿಚಯಿಸುವಲ್ಲಿ ರಂಭಾಪುರಿ ಪೀಠದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿರುತ್ತದೆ. 

2025, ಮಾರ್ಚ್ 10ರಿಂದ ದಿನಾಂಕ 14ರವರೆಗೆ ಕೃಷಿ ಸಮ್ಮೇಳನ, ಶಿವಾದ್ವೈತ ಸಮಾವೇಶ, ಜಾನಪದ ಮೇಳ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞರಾದ ಡಾ. ವಿತಾ ಮಿಶ್ರಾ ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಅದಮ್ಯಸಾಮಾಜಿಕ ಕಳಕಳಿಯ ಧ್ಯೋತಕವಾಗಿದೆ.

ಮಾನವನನ್ನು ಮಹಾದೇವನಾಗಿಸಿದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು - Janathavani– ಬಿ.ಎಂ.ದಾರುಕೇಶ, ಕೆ.ಇ.ಎಸ್., ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ದಾವಣಗೆರೆ.

error: Content is protected !!