ಮಲೇಬೆನ್ನೂರು, ಮಾ. 8 – ಕಳೆದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಗಳಿ-ಮಲೇಬೆನ್ನೂರು ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರಸ್ತೆ ಡಾಂಬರೀಕರಣ ಕೆಲಸ ಪ್ರಾರಂಭವಾಗಿದ್ದು ಜಿಗಳಿ, ಯಲವಟ್ಟಿ, ಹೊಳೆಸಿರಿಗೆರೆ, ಕೆ.ಎನ್. ಹಳ್ಳಿ, ಕಮಲಾಪುರ, ಲಕ್ಕಶೆಟ್ಟಿಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
2022ರ ಸೆಪ್ಟೆಂಬರ್ ತಿಂಗಳಲ್ಲಿ ಅಂದಿನ ಶಾಸಕ ಎಸ್. ರಾಮಪ್ಪ ಅವರು ಈ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ, 6 ತಿಂಗಳ ಒಳಗಾಗಿ ಕಾಮಗಾರಿ ಮುಗಿಸು ವಂತೆ ಗುತ್ತಿಗೆದಾರ ದೇವದುರ್ಗ ತಾಲ್ಲೂಕಿನ ವಿರೂಪಾಕ್ಷಪ್ಪ ಬಳೆ ಅವರಿಗೆ ಸೂಚಿಸಿದ್ದರು.
ಕಾಮಗಾರಿ ಆರಂಭಿಸಿದ ವಿರೂಪಾಕ್ಷಪ್ಪ ಅವರು, ರಸ್ತೆ ಕೆದರಿ, ಗ್ರಾವೆಲ್ ಹಾಕಿ, ನಂತರ ಜಲ್ಲಿಕಲ್ಲು ಹಾಕಿ ಮೆಟ್ಲಿಂಗ್ ಮಾಡಿ, ವೈಯಕ್ತಿಕ ಕಾರಣಗಳಿಂದಾಗಿ ಡಾಂಬರೀಕರಣ ಕಾಮಗಾರಿ ವಿಳಂಬ
ಮಾಡಿದರು. ವಾಹನಗಳ ಸಂಚಾರದಿಂದಾಗಿ ರಸ್ತೆಗೆ ಹಾಕಿದ್ದ ಜಲ್ಲಿ ಕಲ್ಲುಗಳು ಕಿತ್ತು ಮೇಲಕ್ಕೆ ಬಂದವು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಯಿತಲ್ಲದೇ, ರಸ್ತೆ ಧೂಳುಮಯ ವಾಗಿತ್ತು. ಬರು ಬರುತ್ತಾ, ಜನರು ಈ ರಸ್ತೆಯಲ್ಲಿ ಓಡಾಟ ಮಾಡುವುದನ್ನೇ ಬಿಟ್ಟು, ಕುಂಬಳೂರು ಮಾರ್ಗವಾಗಿ ಮಲೇಬೆನ್ನೂರಿಗೆ ಹೋಗುತ್ತಿದ್ದರು. ಇದರಿಂದ 1 ಕಿ.ಮೀಟರ್ ಕೂಡಾ ಹೆಚ್ಚಾಗುತ್ತಿತ್ತು.
ಈ ಬಗ್ಗೆ ಜಿಗಳಿ ಗ್ರಾಮಸ್ಥರು ಅಂದಿನ ಶಾಸಕ ಎಸ್. ರಾಮಪ್ಪ ಮತ್ತು ನಂತರ ಆಯ್ಕೆಯಾದ ಶಾಸಕ ಬಿ.ಪಿ. ಹರೀಶ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರ ಮೇಲೆ ಸಾಕಷ್ಟು ಒತ್ತಡ ಹಾಕಿದ್ದರು. ಕೆಲ ತಿಂಗಳುಗಳ ಹಿಂದೆ ಪಿಡಬ್ಲ್ಯೂಡಿ ಎಇ ಶಿವರುದ್ರಪ್ಪ ಮತ್ತು ಜಿಗಳಿಯ ಜಿ.ಪಿ. ಹನುಮಗೌಡ ಅವರು ದೇವದುರ್ಗಕ್ಕೆ ತೆರಳಿ, ಗುತ್ತಿಗೆದಾರ ವಿರೂಪಾಕ್ಷಪ್ಪ ಬಳೆ ಅವರನ್ನು ಭೇಟಿ ಮಾಡಿ, ರಸ್ತೆ ಡಾಂಬರೀಕರಣ ವಿಳಂಬವಾಗಿರು ವುದರಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿ, ಆದಷ್ಟು ಬೇಗ ಬಂದು ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿ ಬಂದಿದ್ದರು.
ಅದಾದ ಬಳಿಕ, ಜಿಗಳಿ ಗ್ರಾಮಸ್ಥರು ಮತ್ತೆ ಶಾಸಕರು, ಸಂಸದರು, ಮಾಜಿ ಶಾಸಕರ ಮೂಲಕ
ಇಂಜಿನಿಯ ರ್ಗಳಿಗೆ ಮತ್ತು ಗುತ್ತಿಗೆದಾರನಿಗೆ ಫೋನ್ ಮಾಡಿಸಿ, ಕಾಮಗಾರಿ ಆರಂಭಿಸುವಂತೆ ಒತ್ತಡ ಹಾಕಿಸಿದ್ದರು.
ಈ ಎಲ್ಲಾ ಒತ್ತಡ, ಒತ್ತಾಯಗಳಿಗೆ ಮಣಿದ ಗುತ್ತಿಗೆದಾರ ವಿರೂಪಾಕ್ಷಪ್ಪ ಬಳೆ ಅವರು, ಕಳೆದ 10 ದಿನಗಳ ಹಿಂದೆ ಬಂದು, ರಸ್ತೆಗೆ ನೀರು ಹಾಕಿ, ರೋಣ್ ಮಾಡಿಸಿ, ಡಾಂಬರೀಕರಣ ಕಾಮಗಾರಿ ಯನ್ನು ಜಿಗಳಿ ಕಡೆಯಿಂದ ಆರಂಭಿಸಿದ್ದಾರೆ.
4.75 ಕೋಟಿ ರೂ. ವೆಚ್ಚದಲ್ಲಿ 3 ಕಿ.ಮೀ. ರಸ್ತೆ ಅಭಿವೃದ್ಧಿ ಡಾಂಬರೀಕರಣ ಮತ್ತು ಮಲೇಬೆನ್ನೂರು ಪಟ್ಟಣ ವ್ಯಾಪ್ತಿಯಲ್ಲಿ 400 ಮೀಟರ್ ಸಿಸಿ ಚರಂಡಿ ಹಾಗೂ ಚರಂಡಿ ಮೇಲೆ ಸ್ಲ್ಯಾಬ್ ಜೊತೆಗೆ ಫುಟ್ಪಾತ್ಗೆ ಪೇವರ್ ಹಾಕುವ ಕಾಮಗಾರಿ ಇದಾಗಿದೆ. ರಸ್ತೆಗೆ ಈಗ 2 ಇಂಚು 20 ಎಂಎಂ ಜಲ್ಲಿ ಟಾರ್ ಹಾಕಿ, ಬಳಿಕ 1 ಇಂಚು 10 ಎಂಎಂ ಜಲ್ಲಿ ಟಾರ್ ಹಾಕಲಾಗುವುದೆಂದು ಈ ಹಿಂದೆ ರಸ್ತೆ ಕಾಮಗಾರಿ ಯೋಜನೆ ಸಿದ್ಧಪಡಿಸಿದ್ದ ನಿವೃತ್ತ ಎಇ ಬಿ.ಜಿ. ಶಿವರುದ್ರಪ್ಪ `ಜನತಾವಾಣಿ’ಗೆ ಮಾಹಿತಿ ನೀಡಿದರು.
ಡಾಂಬರೀಕರಣ ಕಾಮಗಾರಿ ಈಗಾಗಲೇ ಅರ್ಧ ಆಗಿದ್ದು, 5-6 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಏಪ್ರಿಲ್ ಅಂತ್ಯದ ವೇಳೆಗೆ ರಸ್ತೆಯ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಕಾಮಗಾರಿಯ ಸೈಟ್ ಇಂಜಿನಿಯರ್ ಮಂಜುನಾಥ್ ತಿಳಿಸಿದರು. ಹರಿಹರ ಪಿಡಬ್ಲ್ಯೂಡಿ ಇಲಾಖೆಯ ಎಇಇ ಸುಂದರ್ ಮತ್ತು ಎಇ ಹೇಮಲತಾ ಅವರು ಕಾಮಗಾರಿಯ ಮೇಲುಸ್ತುವಾರಿ ವಹಿಸಿದ್ದಾರೆ.
ವೀಕ್ಷಣೆ : ರಸ್ತೆಗೆ ಡಾಂಬರೀಕರಣ ಹಾಕುವ ಕಾಮಗಾರಿಯನ್ನು ಜಿಗಳಿ ಗ್ರಾಮಸ್ಥರು ವೀಕ್ಷಣೆ ಮಾಡಿ ಖುಷಿಪಟ್ಟರು.