ಹೋಳಿ : ಬಲವಂತವಾಗಿ ಬಣ್ಣ ಹಾಕುವಂತಿಲ್ಲ

ಹೋಳಿ : ಬಲವಂತವಾಗಿ ಬಣ್ಣ ಹಾಕುವಂತಿಲ್ಲ

ಮಲೇಬೆನ್ನೂರು : ಹೋಳಿ ಶಾಂತಿ ಸಭೆಯಲ್ಲಿ ಪಿಎಸ್ಐ ಪ್ರಭು ಎಚ್ಚರಿಕೆ

ಮಲೇಬೆನ್ನೂರು, ಮಾ.10- ಹೋಳಿ ಹಬ್ಬ ಆಚರಣೆ ವೇಳೆ ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬೇಡಿ. ಅಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳ ಮೇಲೂ ಬಣ್ಣ ಹಾಕಬೇಡಿ ಎಂದು ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನಮನಿ ಕಟ್ಟುನಿಟ್ಟಾಗಿ ಹೇಳಿದರು.

ಹೋಳಿ ಹಬ್ಬ ಆಚರಣೆ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಕರೆದಿದ್ದ ಶಾಂತಿ – ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬ ಆಚರಣೆಯನ್ನು ನೀವು ನಮಗೆ ಮಾಹಿತಿ ನೀಡಿರುವ ಸ್ಥಳದಲ್ಲೇ ಆಚರಿಸಬೇಕು. ಧ್ವನಿ ವರ್ದಕ ಬಳಕೆರೆ ಅನುಮತಿ ಕಡ್ಡಾಯವಾಗಿದ್ದು, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಆಗದಂತೆ ಶಾಂತಿ – ಸಾಮರಸ್ಯದಿಂದ ಹೋಳಿ ಹಬ್ಬ ಆಚರಿಸಿ ಎಂದು ಪ್ರಭು ಅವರು ಯುವಕರಲ್ಲಿ ಮನವಿ ಮಾಡಿದರು.

ಹೋಳಿ ಹಬ್ಬ ಆಚರಣೆ ಶುಕ್ರವಾರ ಇರುವುದರಿಂದ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡಲು ಮಸೀದಿಗಳಿಗೆ ತೆರಳುವ ಕಾರಣ ಮತ್ತು ಮುಂಜಾಗ್ರತೆ ದೃಷ್ಠಿಯಿಂದ ಅಂದು ಮಧ್ಯಾಹ್ನ 12 ರ ವೇಳೆಗೆ ಹೋಳಿ ಆಚರಣೆ ಮುಗಿಸಬೇಕೆಂದು ಮನವಿ ಮಾಡಿದ ಪ್ರಭು, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕಿದರೆ ನಿರ್ದ್ಯಾಕ್ಷಣ್ಯ ಕ್ರಮ ಗ್ಯಾರಂಟಿ ಎಂದು ಯುವಕರಿಗೆ ಎಚ್ಚರಿಕೆಯನ್ನೂ ನೀಡಿದರು.

ಪುರಸಭೆ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಪಟ್ಟಣದಲ್ಲಿ ಎಲ್ಲಾ ಹಬ್ಬ ಆಚರಣೆಗಳನ್ನು ಪರಸ್ಪರ ಹೊಂದಾಣಿಕೆ ಮತ್ತು ಶಾಂತಿ, ಸಾಮರಸ್ಯದಿಂದ ಆಚರಿಸುವ ಮೂಲಕ ಕಾನೂನನ್ನು ಗೌರವಿಸೋಣ ಎಂದರು.

ಕೆ.ಪಿ.ಗಂಗಾಧರ್ ಮಾತನಾಡಿ, ಹೋಳಿ ಹಬ್ಬ ಆಚರಣೆಯಲ್ಲಿ ಕೆಮಿಕಲ್ ಮಿಕ್ಸ್ ಬಣ್ಣ ಹಾಗೂ ಮೊಟ್ಟೆಗಳನ್ನು ಯಾರೂ ಬಳಸಬೇಡಿ ಎಂದು ಮನವಿ ಮಾಡಿದರು.

ಪುರಸಭೆ ಸದಸ್ಯರಾದ ನಯಾಜ್, ಸಾಬೀರ್ ಅಲಿ, ಬಿ.ವೀರಯ್ಯ ಮತ್ತು ಸಾರ್ವಜನಿಕರಾದ ಜಿಗಳೇರ ಮಧು, ಕೊಕ್ಕನೂರು ತಮ್ಮಯ್ಯ ಮಾತನಾಡಿದರು.

ಪುರಸಭೆ ಸದಸ್ಯರಾದ ಖಲೀಲ್, ಶಬ್ಬೀರ್ ಖಾನ್, ಷಾ ಅಬ್ರಾರ್, ದಾದಾಫೀರ್, ಜಿಗಳೇರ ಹಾಲೇಶಪ್ಪ, ಓ.ಜಿ.ಕುಮಾರ್, ಎಂ.ಬಿ.ರುಸ್ತುಂ, ಕಣ್ಣಾಳ್ ಧರ್ಮಣ್ಣ, ಎ.ಕೆ.ಲೋಕೇಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಹೆಡ್‌ಕಾನ್ಸ್‌ಟೇಬಲ್ ಶಿವಕುಮಾರ್ ಸ್ವಾಗತಿಸಿದರು. ಪೇದೆ ಪ್ರದೀಪ್ ವಂದಿಸಿದರು.

error: Content is protected !!