ಇಡೀ ಜಗತ್ತಿನಲ್ಲಿ ಅಡಗಿರುವ ಬ್ರಹ್ಮಾಂಡದ ಶಕ್ತಿಯೇ ಆದಿ ಶಕ್ತಿ

ಇಡೀ ಜಗತ್ತಿನಲ್ಲಿ ಅಡಗಿರುವ ಬ್ರಹ್ಮಾಂಡದ ಶಕ್ತಿಯೇ ಆದಿ ಶಕ್ತಿ

ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರು ತಮ್ಮ ಕಾವ್ಯದ ಸಾಲುಗಳಲ್ಲಿ ಒಂದು ಹೆಣ್ಣಿನ ಜೀವನದ ವಿಸ್ತಾರವನ್ನು ಹೀಗೆ ಬಣ್ಣಿಸಿದ್ದಾರೆ `ಆಕಾಶ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ಸ್ತ್ರೀ ಅಂದರೆ ಅಷ್ಟೇ ಸಾಕೇ’. ಅಂದರೆ ಆಕೆಯ ಶಕ್ತಿ ಇಡೀ ಬ್ರಹ್ಮಾಂಡ ವನ್ನೇ ತೊಟ್ಟಿಲಾಗಿಸಿ ತೂಗುವ ಶಕ್ತಿ ಇರುವವಳು ಎಂದು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ ಬರೆದಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದ ಮೆರಗು ವಿಶ್ವದೆಲ್ಲೆಡೆ ಪಸರಿಸಿದೆ.ಇತ್ತೀಚಿನ ದಿನಗಳಲ್ಲಿ ಈ ಆಚರಣೆ ಒಂದು ದಿನಕ್ಕೆ ಸೀಮಿತವಾಗದೇ ಇಡೀ ಮಾರ್ಚ್ ಮಾಸವೆಲ್ಲ ಆಚರಿಸುವುದನ್ನು ನೋಡುತ್ತಿದ್ದೇವೆ. ಆದರೆ ಇದು ಕೇವಲ ವೇದಿಕೆಗೆ ಸೀಮಿತ ವಾಗದೇ ಪ್ರತೀ ಮಹಿಳೆಯ ಜೀವನದಲ್ಲಿ ಪ್ರಾಯೋಗಿಕ ಸಂಭ್ರಮ ಹಾಸುಹೊಕ್ಕಾ ಗ ಬೇಕಾಗಿದೆ.

ಹೆಣ್ಣು ಒಂದು ಶಕ್ತಿಯ ಕೇಂದ್ರ ಬಿಂದು. ಆಕೆ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ನಮ್ಮ ಪುರಾಣ ಪುಟಗಳ ಲಕ್ಷ್ಮಿ ಸರಸ್ವತಿ ಪಾರ್ವತಿಯರ ಗುಣ ಧರ್ಮಗಳನ್ನು ಅರಿತರೆ, ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಮಾತೃತ್ವಕ್ಕೆ ಮೆರುಗು ನೀಡಿ  ಇನ್ನು ಶೂರತ್ವ ಕ್ಕೆ ಇನ್ನೊಂದು ಹೆಸರೇ ಎನ್ನುವಂತೆ  ಅಧ್ಯಾತ್ಮಕ್ಕೆ ಹೋದರೆ ಅಲ್ಲಿ ಜ್ಞಾನಕ್ಕೆ ಯಾವ ಪುರುಷ ನಿಗೂ ನಾವು ಕಮ್ಮಿ ಇಲ್ಲ ಎನ್ನುವಂತೆ ತಮ್ಮ ಜ್ಞಾನದ ಸುಧೆಯನ್ನು ವಾದದ ಮೂಲಕ ಜಗತ್ತಿಗೇ ತೋರಿಸಿದ  ಸ್ತ್ರೀಯರು ತಮ್ಮ ಸಂಚಲನವನ್ನೇ ಸೃಷ್ಟಿಸಿದ್ದಾರೆ.

ಇನ್ನು ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ  ಹೆಣ್ಣು ತನ್ನ ಜೀವಂತದ ಅವಧಿಯ ಪ್ರತಿಯೊಂದು ಘಟ್ಟದಲ್ಲಿ ಯೂ ತನ್ನದೇ ಛಾಪು ಮೂಡಿಸಿ ಕುಟುಂಬದ ಕಣ್ಣಾಗುತ್ತಾಳೆ.  ಮಗಳಾಗಿ, ಸೋದರಿಯಾಗಿ, ಗೆಳತಿಯಾಗಿ, ಪತ್ನಿಯಾಗಿ, ಸೊಸೆಯಾಗಿ, ತಾಯಿಯಾಗಿ, ಅತ್ತಿಗೆ-ನಾದಿನಿ, ಅತ್ತೆ ಹೀಗೆ ಪ್ರತೀ ಸ್ತರದಲ್ಲೂ, ಪ್ರೇಮ ವಾತ್ಸಲ್ಯ ಕರುಣೆಯ ಲೇಪವನ್ನು ಸವರಿ ತನ್ನ ಭಾವನಾತ್ಮಕ ಸಂಬಂಧಗಳ ಬೆಸುಗೆಯಲ್ಲಿ ಪ್ರೀತಿಯ ಸುಧೆಯನ್ನು ಹರಿಸುತ್ತಾಳೆ.  ಮನೆಗೆ ಗ್ರಹಿಣಿಯಾಗಿ ಅಷ್ಟ ಲಕ್ಷ್ಮೀ ಯಾಗುತ್ತಾಳೆ.

ಇನ್ನು ಸಾಮಾಜಿಕ ಜವಾಬ್ದಾರಿಗಳ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿ ಸೈ ಎನಿಕೊಂಡಿದ್ದಾಳೆ.ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಒಂದು ವಿಶಿಷ್ಟ ವಾದ ಸ್ಥಾನ ಮಾನವಿದೆ. ಇಡೀ ಜಗತ್ತಿನಲ್ಲಿ ಅಡಗಿರುವ ಬ್ರಹ್ಮಾಂಡದ ಶಕ್ತಿಯೇ ಆ ಆದಿಶಕ್ತಿ ಎನ್ನುವುದು ಎಲ್ಲ ಆಸ್ತಿಕರಿಗೂ ತಿಳಿದಿರುವ ವಾಸ್ತವ. `ಹೆಣ್ಣು ಕುಟುಂಬದ ಕಣ್ಣು, ತೊಟ್ಟಿಲು ತೂಗುವ ಕೈಗಳು ಜಗತ್ತನ್ನೇ ಆಳ ಬಲ್ಲಳು.’ ಇದು ನಿಜ ವಾಗಿಯೂ ನಮ್ಮ ಹಿರಿಯರು ಕಾಯ ವಾಚ ಮನಸ ಒಪ್ಪಿಕೊಂಡು ಹೇಳಿದ ಅನುಭವ ಮಾತು. ಆದರೆ ವಾಸ್ತವದಲ್ಲಿ ಇದನ್ನು ಪುರುಷ ಪ್ರಧಾನ ಸಮಾಜ ಒಪ್ಪುವುದೇ. ಹೆಣ್ಣು ಮುಂದುವರೆದು ತನ್ನ ಮುಂದಾಳತ್ವದಲ್ಲಿ ಮಾಡುವ ಕೆಲಸಗಳಿಗೆ ತಾವು ಜತೆಯಾಗಿ ತಮ್ಮ ಸಹಕಾರ ನೀಡಬೇಕೆಂದು ವಿಶಾಲ ಮನೋಭಾವ ವಿರುವ,ಸುಸಂಸ್ಕೃತ ಸಂಸ್ಕಾರಯುತ  ಜನ ಸಮುದಾಯ ನಮ್ಮಲ್ಲಿದೆ ಎಂದು ಆಶಿಸೋಣವೇ? ಹೆಣ್ಣು ತಾಳ್ಮೆಯ ಪ್ರತೀಕ ,ಆದರೆ ಅನ್ಯಾಯ ಮಾಡಬಾರದು ಸಹಿಸಲೂ ಬಾರದು. ಅಂತೆಯೇ  ಸಮಾಜದಲ್ಲಿ ಇನ್ನೊಂದು ಹೆಣ್ಣಿನ ಶೋಷಣೆಯನ್ನು ಎಂದಿಗೂ ಸಹಿಸಬಾರದು. ಸ್ವಾತಂತ್ರ್ಯ ವನ್ನು ಸ್ವೇಚೆಯಾಗಿ ದುರುಪಯೋಗ ಮಾಡಬಾರದು. ದುರ್ನಡತೆ, ದುಷ್ಕ್ರತ್ಯ ಗಳನ್ನು ಮಟ್ಟ ಹಾಕುವ ಸುಸಂಸ್ಕ್ರತ  ಸಜ್ಜನ ಶಕ್ತಿಯಾಗಿ ಹೆಣ್ಣು ಮಕ್ಕಳು ಬೆಳೆಯಬೇಕಿದೆ. ಸಾಮ ದಾನ ಬೇಧ ದಂಡ ಎಂಬ ಚತುರೋಪಾಯ ಗಳನ್ನು ಎಂದು? ಹೇಗೆ? ಬಳಸಬೇಕು ಎಂದು ಪ್ರತೀ ಹೆಣ್ಣುತಿಳಿಯಬೇಕು. ಒಲಿದರೆ ನಾರಿ ಮುನಿದರೆ ಮಾರಿ ಎಂಬ ನಾಣ್ಣುಡಿ ಯಂತೆ ಆಕೆಯನ್ನು ಗೌರವ ಯುತವಾಗಿ ಕಂಡಲ್ಲಿ ಆಕೆ ನಾರಿಯಾಗಿ ಮಮತೆ ವಾತ್ಸಲ್ಯ ಗಳ ಮಹಾ ಪೂರವನ್ನೇ ಹರಿಸಿ ಪ್ರೇಮಮಯಿಯಾಗುವಳು ಅನ್ಯಾಯ ಅವಮಾನ ಮಾಡಿದ್ದಲ್ಲಿ ಮುನಿದು ಮಹಾ ಮಾರಿಯಾಗಿ ಚಂಡಿಯಾಗಿ ವಿನಾಶಕ್ಕೆ ಕಾರಣಲಾಗುವಳು.

ಹೆಣ್ಣು ಎಂದರೆ ಒಂದು ದೊಡ್ಡ ಶಕ್ತಿಯುತ ವ್ರತ್ತ. ಈ ವೃತ್ತದ ಕೇಂದ್ರದಲ್ಲಿ ಅಪಾರವಾದ ಶಕ್ತಿಯಿದೆ. ಆಕೆಯ ಜ್ಞಾನ ಪ್ರತಿಭೆಗಳ ಶಕ್ತಿ, ಸದಾ ಹೊಸತನಕ್ಕೆ ತುಡಿಯುವ ಆ ಚೈತನ್ಯ ಶಕ್ತಿಯ ಧನಾತ್ಮಕತೆಯು ಎಂತಹ ಋಣಾತ್ಮಕತೆಯನ್ನು ಮೆಟ್ಟಿ ನಿಲ್ಲಬಲ್ಲುದು. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂಬಂತೆ ಇನ್ನಾದರೂ ನಮ್ಮ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಂತು, ಹೆಣ್ಣು ಮಕ್ಕಳನ್ನು ವಿದ್ಯಾರ್ಜನೆ ಮಾಡಿಸಿ, ವರದಕ್ಷಿಣೆ ಯ ಪಿಡುಗು, ವೈಧವ್ಯ ಶೋಷಣೆ, ಹೆಣ್ಣಿನ ಶೋಷಣೆ  ನಿಲ್ಲಿಸಿ ಸ್ತ್ರೀಯರನ್ನು ಗೌರವಯುತವಾಗಿ  ಕಂಡು ಈ ಸಮಾಜವನ್ನು ಧನಾತ್ಮಕತೆಯಿಂದ ಕೂಡಿದ ದೇವತೆಗಳ ಪುಣ್ಯ ಸ್ಥಾನ ನಿರ್ಮಿಸೋಣ. ಸ್ತ್ರೀ ಪುರುಷ ಸಮಾನ ಮನಸ್ಕರಾಗಿ, ಮಹಿಳಾ ದಿನಾಚರಣೆಯಂದು ಆರೋಗ್ಯಪೂರ್ಣ ಸಮಾಜಕ್ಕೆ ನಾಂದಿ ಹಾಡೋಣ. 

– ಡಾ. ಆರತಿ ಸುಂದರೇಶ್, 

ಹೋಮಿಯೋಪತಿ ವೈದ್ಯರು, ದಾವಣಗೆರೆ.

error: Content is protected !!