ಮಲೇಬೆನ್ನೂರು, ಮಾ, 10 – ಸುಕ್ಷೇತ್ರ ನಂದಿಗುಡಿ ಗ್ರಾಮದಲ್ಲಿ ಬಸವೇಶ್ವರ ದೇವರ ರಥೋತ್ಸವ ಮತ್ತು ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿದವು.
ಬೆಳಗ್ಗೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಬಳಿಕ ದೇವಸ್ಥಾನದ ಆವರಣದಲ್ಲಿ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಭಕ್ತರು ಹರಹರ ಮಹಾದೇವ, ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಜಯ ಘೋಷಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿ ದರು. ವೀರಗಾಸೆ, ಡೊಳ್ಳುಕುಣಿತ, ನಂದಿ ಕೋಲು ಕುಣಿತ, ಜಾಂಜಮೇಳ, ಕೋಲಾಟ, ನೃತ್ಯ, ಭಜನೆಗಳು ರಥೋತ್ಸವಕ್ಕೆ ಮೆರುಗು ತಂದವು. ರಥೋತ್ಸವದ ನಂತರ ದೇವಸ್ಥಾನದ ಬಳಿ ಭಕ್ತರಿಂದ ಹರಕೆ, ಜವಳ, ದಿಂಡುರುಳು, ಮುಂತಾದ ಭಕ್ತಿ ಸೇವೆಗಳು ನಡೆದವು. ದೊಡ್ಡಬಂಡಿ ಪ್ರದರ್ಶನ ಆಕರ್ಷಕವಾಗಿತ್ತು.