ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅತಿಥ್ ಅಂಬರ್ಕರ್ ವ್ಯಾಕುಲತೆ
ದಾವಣಗೆರೆ, ಫೆ. 28- ಸದಾ ರಾಷ್ಟ್ರೀಯವಾದದ ಬಗ್ಗೆ ಮಾತನಾಡುವ ಬಿಜೆಪಿ ಕೇವಲ ಏಕೈಕ ಸಮುದಾಯದ ಸಮಾ ವೇಶ, ಪ್ರಮುಖರ ಸಭೆಗಳನ್ನು ಮಾಡುತ್ತಿದ್ದು, ಪಕ್ಷದಲ್ಲಿ ಕೇವಲ ಏಕೈಕ ಸಮುದಾಯಕ್ಕೆ ಮನ್ನಣೆ ನೀಡಲಾಗುತ್ತಿದೆ. ಪಕ್ಷಕ್ಕಾಗಿ ದುಡಿದ ಇತರೆ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡ ಲಾಗುತ್ತಿದೆ. ಇದರಿಂದಾಗಿ ಆಯಾ ಸಮು ದಾಯಗಳ ಮುಖಂಡರು, ಕಾರ್ಯಕರ್ತರು ಪಕ್ಷದಿಂದ ದೂರ ಉಳಿಯುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅತಿಥ್ ಅಂಬರ್ಕರ್ ವ್ಯಾಕುಲತೆ ವ್ಯಕ್ತ ಪಡಿಸಿದ್ದಾರೆ.
ದುರಾದೃಷ್ಟ ಎಂದರೆ ಅಧಿಕಾರ ಅನುಭವಿಸಿದ ಸಮುದಾಯಗಳೇ ಮತ್ತೆ ಅಧಿಕಾರಕ್ಕಾಗಿ ಸಭೆ, ಸಮಾರಂಭಗಳನ್ನು ನಡೆಸುತ್ತಿವೆ. ರಾಜ್ಯ ನಾಯಕರು ಸ್ಥಳೀಯ ಜಿಲ್ಲಾ ನಾಯಕರು ಕೂಡ ಕೆಲವೊಬ್ಬರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಇದು ಜಿಲ್ಲೆಯ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ ಎಂದು ತಮ್ಮ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿಯಲ್ಲಿ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಹಿಂದುಳಿದ ವರ್ಗಕ್ಕೆ ಮುಂಬರುವ ಚುನಾವಣೆಗಳಲ್ಲಿ ಇದೆಲ್ಲಕ್ಕೂ ಉತ್ತರ ನೀಡುವ ಪರಿಸ್ಥಿತಿಯನ್ನು ಬಿಜೆಪಿ ನಾಯಕರು ಎದುರಿಸಬೇಕಾಗುತ್ತದೆ. ಇದು ಬಿಜೆಪಿಯ ಕಟ್ಟಕಡೆಯ ಕಾರ್ಯಕರ್ತನ ಅಭಿಪ್ರಾಯ. ಬಿಜೆಪಿಗೆ ಒಂದೇ ಸಮಾಜದ ಮುಖಂಡರು, ಕಾರ್ಯಕರ್ತರು ಮಾತ್ರ ಕೆಲಸ ಮಾಡುತ್ತಿದ್ದಾರೆಯೇ, ಹಿಂದುಳಿದ ವರ್ಗ, ದಲಿತ ಮತ್ತು ಅಲ್ಪ ಸಂಖ್ಯಾತ ವರ್ಗಗಳ ಜನರು, ಮುಖಂಡರು ಬಿಜೆಪಿ ನಾಯಕರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಸಾರ್ವಜನಿಕರೂ ಕೂಡ ಗೊಣಗುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಕಳೆದ ವಿಧಾನಸಭೆಯಲ್ಲೂ ಕೂಡ ಯಾವುದೇ ಓಬಿಸಿ ನಾಯಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಪಕ್ಷದ ಅಭಿವೃದ್ದಿಗಾಗಿ ಎಲ್ಲಾ ಸಮುದಾಯಗಳ ಮುಖಂಡರು ಅಗತ್ಯ. ಕಾರಣ ಇನ್ನಾದರೂ ರಾಜ್ಯ ಮುಖಂಡರು ಎಲ್ಲಾ ಸಮುದಾಯಗಳ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಪಕ್ಷವು ಉನ್ನತ ಮಟ್ಟಕ್ಕೆ ಬೆಳೆಯಲಿದೆ. ಅಲ್ಲದೇ ಜನರೂ ಕೂಡ ಪಕ್ಷಕ್ಕೆ ಮಾನ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ.