ದಾವಣಗೆರೆ, ಫೆ. 25- ನಗರದ ನಮನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ನಾಳೆ ದಿನಾಂಕ 26 ರಂದು `ಶಿವಸ್ಮರಣೆ ನೃತ್ಯ ಜಾಗರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮನ ಅಕಾಡೆಮಿಯ ಉಪಾಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಆರ್.ಹೆಚ್.ನಾಗಭೂಷಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಬುಧವಾರ ರಾತ್ರಿ 9 ರಿಂದ ಬೆಳಗಿನ ಜಾವ 3 ರವರೆಗೆ ನಾಲ್ಕು ದೇವಸ್ಥಾನಗಳಲ್ಲಿ ಒಂದರ ನಂತರ ಒಂದರಂತೆ ನೃತ್ಯ ಸೇವೆಯನ್ನು ಮಾಡುವ ಮೂಲಕ ಶಿವಸ್ಮರಣೆ ಸಮರ್ಪಿಸಲಾಗುವುದು ಎಂದರು.
ರಾತ್ರಿ 9.30ಕ್ಕೆ ರಿಂಗ್ ರಸ್ತೆಯಲ್ಲಿರುವ ಶ್ರೀ ಶಾರದಾ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಶಂಕರ್ ಸೇವಾ ಸಂಘದ ಅಧ್ಯಕ್ಷ ಡಾ.ಬಿ.ಟಿ ಅಚ್ಯುತ್ ಮತ್ತಿತರರು ಭಾಗವಹಿಸಲಿದ್ದಾರೆ.
ನಮನ ಅಕಾಡೆಮಿ ಗೌರವಾಧ್ಯಕ್ಷ ಡಾ.ಎ.ಎಂ. ಶಿವಕುಮಾರ್, ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಆರ್.ಹೆಚ್. ನಾಗಭೂಷಣ್ ಸೇರಿದಂತೆ ಅಕಾಡೆಮಿಯ ನಿರ್ದೇಶಕರು ಭಾಗವಹಿಸಲಿದ್ದಾರೆ.
ರಾತ್ರಿ 11 ಕ್ಕೆ ಲಿಂಗೇಶ್ವರ ದೇವಸ್ಥಾನದಲ್ಲಿ, ರಾತ್ರಿ 12.30 ಕ್ಕೆ ಜಯದೇವ ವೃತ್ತದಲ್ಲಿರುವ ಶ್ರೀ ಕೂಡಲಿ ಶಂಕರ ಮಠದಲ್ಲಿ, ರಾತ್ರಿ 2 ಗಂಟೆಗೆ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ನೃತ್ಯ ಸೇವೆಯನ್ನು ಮಾಡುವುದರ ಮೂಲಕ ಶಿವನಿಗೆ ನೃತ್ಯ ಜಾಗರಣೆ ಸಮರ್ಪಿಸಲಾಗುವುದು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಗುರುಗಳಾದ ಡಿ.ಕೆ.ಮಾಧವಿ ಮತ್ತು ಅವರ ಶಿಷ್ಯಂದಿರಾದ ಎಸ್. ಸಿಂಚನ, ಭೂಮಿಕಾ ಶ್ಯಾಮ ಕಠಾರೆ, ಎಸ್.ರೋಹಿಣಿ, ಡಿ.ಎಸ್.ಭವಾನಿ, ಋತು ಹಿರೇಮಠ್ ಸಿ.ಜಿ. ಅಧಿತಿ, ಎಸ್.ನಿಹಾರಿಕಾ, ನಿಧಿ ಪಿ. ಧೂಳೆಹೊಳೆ, ಸಂಸ್ಕೃತಿ ಜೆ. ಆಚಾರ್, ಜಿ.ಎಂ.ಮಾನ್ವಿ ಇವರು ನೃತ್ಯ ಸಮರ್ಪಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಮನ ಅಕಾಡೆಮಿಯ ಕಾರ್ಯದರ್ಶಿ ಡಿ.ಕೆ.ಮಾಧವಿ, ಅಧ್ಯಕ್ಷ ಗೋಪಾಲಕೃಷ್ಣ, ಪಿ.ಸಿ. ರಾಮನಾಥ, ಅನಿಲ್ ಬಾರೆಂಗಳ್, ಡಿ.ಎಸ್.ಭವಾನಿ, ಸಂಸ್ಕೃತಿ ಜೆ. ಆಚಾರ್ ಉಪಸ್ಥಿತರಿದ್ದರು.